Advertisement

ರಾಜ್ಯದಲ್ಲಿ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

02:06 AM Apr 02, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಂಭತ್ತು ಮಂದಿಯಲ್ಲಿ ಕೋವಿಡ್ 19 ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲಾ ನಾಲ್ಕು ಮಂದಿಗೆ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಒಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

Advertisement

ಸೋಂಕು ದೃಢವಾದ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಅವರೆಲ್ಲರನ್ನೂ ಶಂಕಿತರು ಎಂದು ಗುರುತಿಸಿ ಮನೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ನಿಗಾ ವಹಿಸಲಿದ್ದು ಕಡ್ಡಾಯವಾಗಿ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಲಿದೆ.

ಒಟ್ಟಾರೆ ಸೋಂಕಿತರ ಪೈಕಿ ಏಳು ಮಂದಿ ಕೇರಳ ಮೂಲದವರಾದರೂ ರಾಜ್ಯದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ರಾಜ್ಯದ ನಿವಾಸಿಗಳು 103 ಮಾತ್ರ. ಈವರೆಗೂ ಬೆಂಗಳೂರಿನ ಎಂಟು ಮಂದಿ, ಕಲಬುರಗಿಯ ಒಬ್ಬರ ಸಹಿತ ಒಂಭತ್ತು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಮೂರು ಮಂದಿ ಸಾವಿಗೀಡಾಗಿದ್ದಾರೆ.

ಇನ್ನು ಚಿಕಿತ್ಸೆ ಪಡೆಯುತ್ತಿರುವ ಪೈಕಿ ಬಹುತೇಕ ಕೋವಿಡ್ 19 ವೈರಸ್ ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಮೂರು ಮಂದಿಗೆ ಮಾತ್ರ ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

– ಎಲ್ಲ ಖಾಸಗಿ ಮತ್ತು ಸರಕಾರಿ, ಡೀಮ್ಡ್ ವೈದ್ಯಕೀಯ ಕಾಲೇಜುಗಳು ಅಲ್ಲಿನ ಜಿಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಣೆ

Advertisement

– ಎಲ್ಲ ಜಿಲ್ಲೆಗಳಲ್ಲಿಯೂ ಫೀವರ್‌ ಕ್ಲಿನಿಕ್‌

– ಸ್ವಇಚ್ಛೆಯಿಂದ ಟೆಲಿಮೆಡಿಸಿನ್‌ ಮೂಲಕ ಸೇವೆ ನೀಡಿ ಸರಕಾರಕ್ಕೆ ಸಹಾಯ ಮಾಡಲು ಬಯಸುವ ಖಾಸಗಿ ವೈದ್ಯರಿಗೆ 080-47192219 ಮಿಸ್ಡ್ ಕಾಲ್‌ ನೀಡಲು ಮನವಿ ಮಾಡಲಾಗಿದೆ.

ಸೋಂಕಿನ ಹಾಟ್‌ಸ್ಪಾಟ್‌
ದೇಶದಲ್ಲಿ ಕೋವಿಡ್ 19 ವೈರಸ್ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಸ್ಥಳಗಳ ಪಟ್ಟಿಯನ್ನು (ಹಾಟ್‌ಸ್ಪಾಟ್‌) ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

ಈ ಪೈಕಿ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಕಾಣಿಸಿಕೊಂಡ ಜಿಲ್ಲೆಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಚಿಕ್ಕಬಳ್ಳಾಪುರ ಸ್ಥಾನ ಪಡೆದುಕೊಂಡಿವೆ. ಈ ಮೂರು ಜಿಲ್ಲೆಗಳ 76 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next