Advertisement

ವಾಣಿಜ್ಯ ತೆರಿಗೆ ಆದಾಯ ಖೋತಾ : ಕೋವಿಡ್ 19 ವೈರಸ್ ಎಫೆಕ್ಟ್ ಭೀತಿ

01:39 AM Apr 02, 2020 | Hari Prasad |

ಬೆಂಗಳೂರು: ಆರ್ಥಿಕ ಶಿಸ್ತು ಪಾಲನೆ ಮೂಲಕ ಪ್ರತಿವರ್ಷ ಬಹುಪಾಲು ಗುರಿ ತಲುಪುತ್ತಿದ್ದ ವಾಣಿಜ್ಯ ತೆರಿಗೆ ಆದಾಯದಲ್ಲಿ ಕಳೆದ 2019-20ನೇ ಸಾಲಿನಲ್ಲಿ ಸುಮಾರು 3,908 ಕೋ. ರೂ. ಖೋತಾ ಉಂಟಾಗಿದೆ. ಮಾ. 31ಕ್ಕೆ ಮುಕ್ತಾಯವಾದ ಕಳೆದ ಹಣಕಾಸು ವರ್ಷದಲ್ಲಿ ಅಬಕಾರಿ ತೆರಿಗೆ ಮಾತ್ರ ನಿಗದಿತ ಗುರಿ ತಲುಪಿ ಹೆಚ್ಚುವರಿಯಾಗಿ 450 ಕೋ. ರೂ. ಆದಾಯ ಸಂಗ್ರಹಿಸಿದೆ.

Advertisement

ಮುದ್ರಾಂಕ ಮತ್ತು ನೋಂದಣಿ ಹಾಗೂ ಸಾರಿಗೆ ತೆರಿಗೆ ಗುರಿಯಲ್ಲಿ ಕ್ರಮವಾಗಿ 600 ಕೋ. ರೂ. ಹಾಗೂ 450 ಕೋ. ರೂ. ಕಡಿತವಾಗಿದೆ. ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ವ್ಯವಸ್ಥೆ ಮುಂದುವರಿದರೆ ತೆರಿಗೆ ಆದಾಯದಲ್ಲಿ ಇನ್ನಷ್ಟು ಖೋತಾ ಆಗಲಿದೆ.

ಗುರಿ ತಲುಪದ ವಾಣಿಜ್ಯ ತೆರಿಗೆ
ಜಿಎಸ್‌ಟಿ ಸಂಗ್ರಹದಲ್ಲೂ ಶೇ.14ರಷ್ಟು ಪ್ರಗತಿ ಸಾಧಿಸಿರುವ ಕಾರಣ 2019-20ನೇ ಸಾಲಿನಲ್ಲೂ ನಿಗದಿತ 76,046 ಕೋ.ರೂ. ತೆರಿಗೆ ಸಂಗ್ರಹ ನಿರೀಕ್ಷೆಯಿತ್ತು. ಅದರಂತೆ ವಾಣಿಜ್ಯ ತೆರಿಗೆ ಮೂಲದಿಂದ 72,138 ಕೋ.ರೂ. ಸಂಗ್ರಹವಾಗಿದೆ.

ವಾಣಿಜ್ಯ ತೆರಿಗೆ ಗುರಿ ತಲುಪಲು ವಿಫಲವಾಗಿರುವುದಕ್ಕೆ ಕೇಂದ್ರ ಸರಕಾರದ ಪರಿಹಾರ ಮೊತ್ತ ಕಡಿತವೇ ಕಾರಣವಾಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಕಳೆದ ಸಾಲಿನಲ್ಲಿ ಜಿಎಸ್‌ಟಿ ಪರಿಹಾರವಾಗಿ ಕೇಂದ್ರ 4,500 ಕೋ. ರೂ. ನೀಡಬೇಕಿತ್ತು. ಆದರೆ ಕೊನೆ ಕ್ಷಣದವರೆಗೆ 4,500 ಕೋ. ರೂ. ಬಿಡುಗಡೆಯಾಗದ ಕಾರಣ ವಾಣಿಜ್ಯ ತೆರಿಗೆಯಡಿ ನಿಗದಿತ ಗುರಿ ತಲುಪುವಲ್ಲಿ ಹಿನ್ನಡೆಯಾಗಿದೆ.

ಅಬಕಾರಿ: ಗುರಿ ಮೀರಿದ ಸಾಧನೆ
ಅಬಕಾರಿ ತೆರಿಗೆ ಆದಾಯದಿಂದ ಕಳೆದ ಸಾಲಿನಲ್ಲಿ 20,750 ಕೋ. ರೂ. ನಿರೀಕ್ಷಿಸಲಾಗಿತ್ತು. ಕಳೆದ ಮಾ. 16ರಂದೇ ನಿಗದಿತ ಗುರಿಯಷ್ಟು ತೆರಿಗೆ ಸಂಗ್ರಹವಾಗಿದ್ದು, ಮಾ. 24ರ ವರೆಗೆ 21,400 ಕೋ. ರೂ. ಸಂಗ್ರಹವಾಗಿದ್ದು, ಆ ಮೂಲಕ ಗುರಿ ಮೀರಿದ ಸಾಧನೆ ದಾಖಲಿಸಿದೆ.

Advertisement


ಗುರಿ ತಲುಪುವಲ್ಲಿ ವಿಫಲ
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ ಸಾರಿಗೆ ತೆರಿಗೆ ಮೂಲದಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಮುದ್ರಾಂಕ ಮತ್ತು ನೋಂದಣಿ ಶುಲ್ಕದಡಿ ನಿರೀಕ್ಷಿತ ಆದಾಯದಲ್ಲಿ 600 ಕೋ.ರೂ. ಖೋತಾ ಆಗಿದೆ. ಸಾರಿಗೆ ತೆರಿಗೆ ಮೂಲದಿಂದ ನಿಗದಿತ ಗುರಿಯಲ್ಲಿ 450 ಕೋ. ರೂ. ಸಂಗ್ರಹಿಸುವಲ್ಲಿ ಇಲಾಖೆ ವಿಫಲವಾಗಿದೆ.

1,000 ಕೋ. ರೂ. ಖೋತಾ
ಲಾಕ್‌ಡೌನ್‌ ವ್ಯವಸ್ಥೆ ಜಾರಿಯಿಂದಾಗಿ ಕಳೆದ ಸಾಲಿನಲ್ಲಿ ಮೂರೂ ತೆರಿಗೆ ಮೂಲದಿಂದ ಸುಮಾರು 1,000 ಕೋ. ರೂ. ತೆರಿಗೆ ಆದಾಯ ಖೋತಾ ಆಗಿದೆ ಎಂದು ಮೂಲಗಳು ಹೇಳಿವೆ. ಸಾಮಾನ್ಯವಾಗಿ ಆರ್ಥಿಕ ವರ್ಷದ ಕೊನೆ ಹಂತದ ಮಾರ್ಚ್‌ ತಿಂಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹೆಚ್ಚಾಗಿರುತ್ತದೆ.

ಆದರೆ ಮಾ.15ರಿಂದ ಆಯ್ದ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಬಳಿಕ ಲಾಕ್‌ಡೌನ್‌ ವ್ಯವಸ್ಥೆಯಿಂದಾಗಿ ಆಸ್ತಿ ನೋಂದಣಿ ಸ್ಥಗಿತಗೊಂಡಿದ್ದು, ಸುಮಾರು 400 ಕೋ. ರೂ. ಆದಾಯ ಕೈತಪ್ಪಿದಂತಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಮಾ. 24ರ ಮಧ್ಯರಾತ್ರಿಯಿಂದ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸುಮಾರು 300 ಕೋ. ರೂ. ಆದಾಯ ಖೋತಾ ಆಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಸ್‌-4 ಮಾದರಿಯ ವಾಹನ ಮಾರಾಟ ಹೆಚ್ಚಾದರೆ ಉತ್ತಮ ತೆರಿಗೆ ಆದಾಯ ಸಂಗ್ರಹವಾಗುವ ನಿರೀಕ್ಷೆ ಇತ್ತಾದರೂ ಅದೂ ಸಾಧ್ಯವಾಗಿಲ್ಲ ಎನ್ನುತ್ತವೆ ಸಾರಿಗೆ ಇಲಾಖೆ ಮೂಲಗಳು.

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next