Advertisement

ಏರುತ್ತಿರುವ ಸೋಂಕಿತರ ಸಂಖ್ಯೆತ್ವರಿತ ಹೆಜ್ಜೆ ಅಗತ್ಯ

12:29 AM Jun 15, 2020 | Hari Prasad |

ಭಾರತದ ಕೆಲವು ಪ್ರದೇಶಗಳಲ್ಲಿ ಹಾಗೂ ಮುಖ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ 19 ಸೊಂಕು ರೋಗವು ಸಮುದಾಯ ಪ್ರಸರಣದ ಹಂತದಲ್ಲಿದೆ ಎಂಬ ಆತಂಕದ ಮಾತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ.

Advertisement

ಕೆಲವು ವಾದಗಳಂತೂ, ಆಗಲೇ ದೇಶದ ಹಲವು ಭಾಗಗಳು ಈ ಹಂತವನ್ನು ಮುಟ್ಟಿಬಿಟ್ಟಿವೆ ಎನ್ನುತ್ತವೆ. ಆದರೆ, ಐಸಿಎಂಆರ್‌ ಸಂಸ್ಥೆಯು, ದೇಶದಲ್ಲಿ ಯಾವ ಭಾಗದಲ್ಲೂ ಸಹ ಕೋವಿಡ್‌-19 ರೋಗದ ಸಾಮುದಾಯಿಕ ಪ್ರಸರಣದ ಹಂತ ಇನ್ನೂ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ನಿಶ್ಚಿತವಾಗಿಯೂ ಐಸಿಎಂಆರ್‌ನ ಈ ಸ್ಪಷ್ಟೀಕರಣ ತುಸು ನೆಮ್ಮದಿ ಕೊಡುವಂತಿದೆಯಾದರೂ, ಈಗ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ 11 ಸಾವಿರದ ಗಡಿ ದಾಟಿರುವುದರಿಂದಾಗಿ, ದೊಡ್ಡ ಅಪಾಯವೊಂದು ಹೊಂಚು ಹಾಕಿ ಕುಳಿತಿದೆಯೇನೋ ಎಂಬ ಆತಂಕ ಆರಂಭವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ತಜ್ಞರು ಹಾಗೂ ಸಾಂಕ್ರಾಮಿಕ ರೋಗ ತಡೆ ಪರಿಣತರು, ಭಾರತದಲ್ಲಿ ಜೂನ್‌ ಮತ್ತು ಜುಲೈ ತಿಂಗಳ ವೇಳೆಗೆ ಕೋವಿಡ್ ಸೋಂಕು ಉತ್ತುಂಗಕ್ಕೆ (peak) ತಲುಪಲಿದೆ ಎಂದಿದ್ದಾರೆ. ಉತ್ತುಂಗ ಅಂದರೆ ಯಾವ ಮಟ್ಟಕ್ಕೆ ಎನ್ನುವ ಬಗ್ಗೆ ಮಾತ್ರ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಏಕೆಂದರೆ, ಜೂನ್‌ 5ರಿಂದ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ದಾಟುತ್ತಾ ಬಂದು, ಈಗ 11 ಸಾವಿರ ತಲುಪಿದೆ. ಹೀಗಿರುವಾಗ, ಉತ್ತುಂಗಕ್ಕೇರುವುದು ಎಂದರೆ ಆ ಸಂಖ್ಯೆ ಇನ್ನೆಷ್ಟಿರಲಿದೆಯೋ ಎಂದು ಚಿಂತೆ ಮೂಡುವುದು ಸಹಜವೇ.

ಕೆಲವು ವಿದೇಶಿ ಸುದ್ದಿ ಮಾಧ್ಯಮಗಳಂತೂ ಭಾರತ ಸಮುದಾಯ ಪ್ರಸರಣ ಹಂತವನ್ನು ಏಪ್ರಿಲ್‌ ತಿಂಗಳ ಅಂತ್ಯದಲ್ಲೇ ತಲುಪಿದೆ ಎಂದು ಹೇಳುತ್ತವೆ. ಆದರೆ, ಇದು ಉತ್ಪ್ರೇಕ್ಷೆಯೇ ಸರಿ. ಭಾರತ ಕುರಿತ ಪಾಶ್ಚಾತ್ಯ ಮಾಧ್ಯಮಗಳ ವರದಿಗಳು ವಸ್ತುನಿಷ್ಠವಾಗಿರುತ್ತವೆ ಎಂದೇನೂ ಇಲ್ಲ ಎನ್ನುವುದನ್ನು ಹಲವು ಬಾರಿ ನೋಡಿದ್ದೇವೆ.

ಇದೇನೇ ಇದ್ದರೂ, ಜೂನ್‌ ತಿಂಗಳ ಆರಂಭದಿಂದ ದೇಶದಲ್ಲಿ, ಅದರಲ್ಲೂ ಮಹಾರಾಷ್ಟ್ರ (ಮುಂಬಯಿ), ದೆಹಲಿ, ಗುಜರಾತ್‌, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನದಂಥ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ರೀತಿ ಆಘಾತಕಾರಿಯಾಗಿದೆ.

Advertisement

ದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲೀಗ ಟೆಸ್ಟ್‌ ಪಾಸಿಟಿವಿಟಿ ದರ ಕೂಡ ಹೆಚ್ಚುತ್ತಿದೆ. ಹೀಗಾಗಿ, ಎಲ್ಲೆಡೆ ಅಲ್ಲದಿದ್ದರೂ, ಈಗ ಹಾಟ್‌ಸ್ಪಾಟ್‌ಗಳಾಗಿರುವ ಪ್ರದೇಶಗಳಲ್ಲಾದರೂ ಸಮುದಾಯ ಪ್ರಸರಣ ಹಂತ ಆರಂಭವಾಗುವ ದಿನಗಳು ದೂರವಿಲ್ಲ ಎಂದೆನಿಸುತ್ತಿದೆ.

ಸದ್ಯಕ್ಕೆ ಹಾಟ್‌ಸ್ಪಾಟ್‌ ರಾಜ್ಯಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಟೆಸ್ಟಿಂಗ್‌ಗಳಾಗುತ್ತಿಲ್ಲ ಎನ್ನುವುದೂ ಅಸಮಾಧಾನದ ವಿಷಯ. ಈ ವಿಚಾರದಲ್ಲಿ ತ್ವರಿತ ಹೆಜ್ಜೆಯಿಟ್ಟು ಪರಿಸ್ಥಿತಿಯನ್ನು ಆದಷ್ಟು ಬೇಗ ತಹಬದಿಗೆ ತರುವ ಪ್ರಯತ್ನಕ್ಕೆ ಕೇಂದ್ರ ಹಾಗೂ ರಾಜ್ಯಗಳು ಮುಂದಾಗಲಿ. ಈಗ ವಿಳಂಬ ಮಾಡಿದರೆ, ಮುಂದೆ ಭಾರಿ ಬೆಲೆ ತೆರಬೇಕಾದೀತು.

Advertisement

Udayavani is now on Telegram. Click here to join our channel and stay updated with the latest news.

Next