ಬಾಗಲಕೋಟೆ: ಕೋವಿಡ್ 19 ಸೋಂಕಿತರ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಗೆ 5ನೇ ಸ್ಥಾನ ಬಂದಿದೆ. ಎಷ್ಟೇ ಕಟ್ಟುನಿಟ್ಟಿನ ಲಾಕ್‌ಡೌನ್ ಮುಂದುವರಿದರೂ ಸೋಂಕಿಗೆ ತುತ್ತಾದವರ ಮನೆ, ಪಕ್ಕದ ಮನೆ, ಸಂಪರ್ಕದಲ್ಲಿದವರಿಗೆ ವಿಸ್ತರಣೆಯಾಗುತ್ತಲೇ ಇದೆ.
ಹೌದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 29 ಜನರಿಗೆ ಈ ಸೋಂಕು ಖಚಿತಪಟ್ಟಿದೆ. ಅದರಲ್ಲಿ ಬಾಗಲಕೋಟೆ ನಗರದ ಓರ್ವ ವೃದ್ಧ ಮೃತಪಟ್ಟರೆ, ಮುಧೋಳದಲ್ಲಿ ಗುಜರಾತ್ ಧರ್ಮಗುರು ಒಬ್ಬ, ಬಾಗಲಕೋಟೆಯ ಐವರು ಸೇರಿ ಒಟ್ಟು ಆರು ಜನ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಮೂರು ತಾಲೂಕು ಕೆಂಪು ವಲಯ: ಜಿಲ್ಲೆಯ ಹಳೆಯ ಮತ್ತು ಹೊಸ ತಾಲೂಕು ಸಹಿತ ಒಟ್ಟು 10 ತಾಲೂಕುಗಳಲ್ಲಿ ಬಾಗಲಕೋಟೆ, ಮುಧೋಳ ಮತ್ತು ಜಮಖಂಡಿ ತಾಲೂಕು, ಸೋಂಕು ವಿಸ್ತರಣೆಯಲ್ಲಿ ಕೆಂಪು ವಲಯದ ಪಟ್ಟಿಗೆ ಸೇರಿವೆ. ಕೋವಿಡ್ 19 ನಿಯಂತ್ರಣದಲ್ಲಿರದೇ ವಿಸ್ತರಣೆಯಾಗುತ್ತಿರುವ 7 ಜಿಲ್ಲೆಗಳ 14 ತಾಲೂಕುಗಳಲ್ಲಿ ನಮ್ಮ ಜಿಲ್ಲೆಯ ಮೂರು ತಾಲೂಕುಗಳು ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಏ. 2ರಂದು ಬಾಗಲಕೋಟೆ ನಗರದಲ್ಲಿ ಕಾಣಿಸಿಕೊಂಡ ಈ ಸೋಂಕು, ನಗರದ ಒಟ್ಟು 13 ಜನರಿಗೆ ವಿಸ್ತರಿಸಿದೆ. ಇನ್ನು ಮುಧೋಳದಲ್ಲಿದ್ದ ಗುಜರಾತ್ ಧರ್ಮಗುರುವಿಗೆ ಏ. 7ರಂದು ಸೋಂಕು ಪತ್ತೆಯಾಗಿದ್ದು, ಆತ ಸಹಿತ ಮುಧೋಳದಲ್ಲಿ ಒಟ್ಟು 7 ಜನರಿಗೆ ಈ ಮಾರಿ ಅಂಟಿಕೊಂಡಿದೆ.
ಇನ್ನು ಜಮಖಂಡಿಯಲ್ಲಿ ಒಂದೂ ಸೋಂಕು ಕಾಣಿಸಿರಲಿಲ್ಲ. ಆದರೆ, ಮುಧೋಳದ ಮದರಸಾದಲ್ಲಿ ಕಾರ್ಯ ನಿರ್ವಹಿಸಿದ ಪೇದೆಗೆ ಏ. 15ರಂದು ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, ಈತ ಜಮಖಂಡಿಯಿಂದ ಮುಧೋಳಕ್ಕೆ ಹೋಗಿ ಬರುತ್ತಿದ್ದರಿಂದ, ಜಮಖಂಡಿಗೂ ವಿಸ್ತರಣೆಯಾಗಿತ್ತು. ಇದೀಗ ಜಮಖಂಡಿ ನಗರವೊಂದರಲ್ಲೇ ಒಟ್ಟು 9 ಜನರಿಗೆ ಸೋಂಕು ತಗುಲಿದೆ.
ಪುರುಷರೇ ಹೆಚ್ಚು: ಸೊಂಕು ತಗುಲಿದವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದಾರೆ. 10 ಜನ ಮಹಿಳೆಯರಿಗೆ ಸೋಂಕು ತಗುಲಿದ್ದರೆ, 19 ಜನ ಪುರುಷರಿಗೆ ಕೊರೊನಾ ಖಚಿತಪಟ್ಟಿದೆ. ಈ 10 ಜನ ಮಹಿಳೆಯರಿಗೆ ಅವರ ಮನೆ ಇಲ್ಲವೇ ಪಕ್ಕದ ಮನೆಯ ಪುರುಷ ಸೋಂಕಿತರಿಂದಲೆ ತಗುಲಿದೆ. ಒಟ್ಟಾರೆ, ಜಿಲ್ಲೆಯಲ್ಲಿ ಏ. 2ರಿಂದ ಕೋವಿಡ್ 19 ಕೇಕೆ ಹಾಕುತ್ತಿದ್ದು, ಮೂವತ್ತರ ಗಡಿಗೆ ಬಂದು ತಲುಪಿದೆ. ಜಿಲ್ಲಾ ಕೇಂದ್ರ ಬಾಗಲಕೋಟೆ ನಗರದಲ್ಲಿ ಏ.18ರಿಂದ ಯಾವುದೇ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ನಗರದ ಜನ ಒಂದಷ್ಟು ನಿಟ್ಟುಸಿರು ಬಿಟ್ಟಿದ್ದಾರೆ.
–ಶ್ರೀಶೈಲ ಕೆ. ಬಿರಾದಾರ