Advertisement

ಬಾಕ್ಸಿಂಗ್ ಕೂಟದಿಂದ 7 ಮಂದಿಗೆ ಕೋವಿಡ್-19 ಸೋಂಕು: ಒಲಿಂಪಿಕ್ಸ್‌ ಸಂಸ್ಥೆ ವಿರುದ್ಧ ಆಕ್ರೋಶ  

09:10 AM Mar 30, 2020 | Team Udayavani |

ಲಂಡನ್‌: ಕೋವಿಡ್-19 ವೈರಸ್‌ನಿಂದ ಇಡೀ ಜಗತ್ತೇ ಸ್ತಬ್ಧವಾಗಿದೆ. ಒಲಿಂಪಿಕ್ಸ್‌ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇಷ್ಟರ ಮಧ್ಯೆ ಪರಸ್ಪರ ಕೆಸರೆರಚಾಟ ಶುರುವಾಗಿದೆ. ಇಡೀ ಜಗತ್ತಿನಲ್ಲೇ ಕೋವಿಡ್-19ದಿಂದ ಎಲ್ಲ ಕ್ರೀಡಾಕೂಟಗಳು ರದ್ದಾಗಿದ್ದರೂ, ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಕೂಟವನ್ನು ಮಾ.14ರಿಂದ 16ರವರೆಗೆ ಲಂಡನ್‌ನಲ್ಲಿ ನಡೆಸಲಾಗಿದೆ. ಅದರಿಂದ 7 ಮಂದಿಗೆ ಸೋಂಕು ತಗುಲಿದೆ ಎಂದು ಟರ್ಕಿ ಬಾಕ್ಸಿಂಗ್‌ ಒಕ್ಕೂಟ ಆರೋಪಿಸಿದೆ.

Advertisement

ಇದು ಸುಳ್ಳು ಸುದ್ದಿ, ಅರ್ಹತಾ ಕೂಟದಿಂದಲೇ ಕೋವಿಡ್-19 ಬಂದಿದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ ಎಂದು ಐಒಸಿ (ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ) ತಿರುಗೇಟು ನೀಡಿದೆ. ಆರೋಪ ಪ್ರತ್ಯಾರೋಪಗಳು ಏನೇ ಇದ್ದರೂ, ಮಾ.14ರಿಂದ 16ರವರೆಗೆ ನಡೆದು ನಂತರ ರದ್ದಾದ ಅರ್ಹತಾ ಬಾಕ್ಸಿಂಗ್‌ ಕೂಟದ ನಂತರ 7 ಮಂದಿಗೆ ಸೋಂಕು ಬಂದಿದ್ದಂತೂ ಹೌದು.

ಇದರಲ್ಲಿ ಟರ್ಕಿಯ ಮೂವರು ಬಾಕ್ಸರ್‌ಗಳು, ಒಬ್ಬ ತರಬೇತುದಾರರು ಸೇರಿದ್ದಾರೆ. ಇನ್ನು ಕ್ರೊವೇಷ್ಯಾದ ಇಬ್ಬರು ತರಬೇತುದಾರರು, ಒಬ್ಬ ಬಾಕ್ಸರ್‌ಗೆ ಸೋಂಕು ಖಚಿತವಾಗಿದೆ. ಇವೆಲ್ಲ ಇಂಗ್ಲೆಂಡ್‌ನಿಂದ ಹಿಂತಿರುಗಿದ ಮೇಲೆಯೇ ಆಗಿದ್ದು. ಕೂಟದ ಆರಂಭಕ್ಕೆ ಮುಂಚೆಯೇ ಕೋವಿಡ್-19  ಅಂಟಿಕೊಳ್ಳುವ ಸಂಭಾವ್ಯತೆಯ ಬಗ್ಗೆ ಗಮನ ಸೆಳೆಯಲಾಗಿತ್ತು.

ಇಡೀ ಜಗತ್ತಿನಲ್ಲೇ ಕ್ರೀಡಾಕೂಟಗಳು ರದ್ದಾಗುತ್ತಿದ್ದವು. ಸ್ವತಃ ಒಲಿಂಪಿಕ್ಸ್‌ ರದ್ದು ಮಾಡುವ ಬಗ್ಗೆ ಗಂಭೀರ ಮಾತುಕತೆ ನಡೆಯುತ್ತಿತ್ತು. ಇಂತಹ ಹೊತ್ತಿನಲ್ಲಿ ಕೂಟ ನಡೆಸಲಾಗಿದೆ. ಇದರಿಂದಲೇ ನಮ್ಮ ಬಾಕ್ಸರ್‌ಗಳು ಸೋಂಕಿತರಾಗಿದ್ದಾರೆ ಟರ್ಕಿ ಬಾಕ್ಸಿಂಗ್‌ ಸಂಸ್ಥೆ ಅಧ್ಯಕ್ಷ ಈಯುಪ್‌ ಗಾಜ್ಕೆಕ್‌ ಆರೋಪಿಸಿದ್ದಾರೆ.

ಟರ್ಕಿಯ ಬಾಕ್ಸರ್‌ಗಳಾದ ನೆಕಟ್‌ ಎಕಿನ್ಸಿ, ಸೆರ್ಹಟ್‌ ಗುಲೆರ್‌, ಬುಸೆನಜ್‌ ಸರ್ಮೆನೆಲಿ, ಮುಖ್ಯ ತರಬೇತುದಾರ ಸೈಫ‌ುಲ್ಲಾಹ್‌ ಡಮುಪಿನಾರ್‌ ಸೋಂಕಿತರು. ಇನ್ನು ಕ್ರೊವೇಷ್ಯಾದ, ಮುಖ್ಯ ತರಬೇತುದಾರ ಟಾಮಿ ಕ್ಯಾಡಿಕ್‌, ಬಾಕ್ಸರ್‌ ಟೋನಿ ಫಿಲಿಪಿ ಸೋಂಕಿತರಾಗಿದ್ದಾರೆ.

Advertisement

 ಐಒಸಿ ಹೇಳುವುದೇನು?: ಕಳೆದ ವರ್ಷ ನಡೆದ ವೈಫ‌ಲ್ಯದ ಆಧಾರದ ಮೇಲೆ ವಿಶ್ವ ಬಾಕ್ಸಿಂಗ್‌ ಒಕ್ಕೂಟವನ್ನು ಐಒಸಿ ಅಮಾನತು ಮಾಡಿದೆ. ಅದರ ಬದಲು ಬಾಕ್ಸಿಂಗ್‌ ಕಾರ್ಯಪಡೆಯ ಮೂಲಕ ಅರ್ಹತಾಕೂಟ ನಡೆಸುತ್ತಿದೆ. ಐಒಸಿಯ ಕ್ರೀಡಾ ನಿರ್ದೇಶಕ ಕಿಟ್‌ ಮೆಕಾನೆಲ್‌ ಹೇಳಿಕೆ ನೀಡಿ, ಮಾ.14ರ ಕೂಟಕ್ಕಿಂತ ಮೊದಲೇ ಬಾಕ್ಸರ್‌ಗಳು ಇಟಲಿ, ಇಂಗ್ಲೆಂಡ್‌ ಇನ್ನಿತರ ಕಡೆ ಖಾಸಗಿಯಾಗಿ ತರಬೇತಿ ಶಿಬಿರ ನಡೆಸಿದ್ದಾರೆ. ಮಾ.14ರ ಕೂಟದ ಆರಂಭದಲ್ಲಾಗಲೀ, ಕೂಟ ಮುಗಿದಾಗಾಗಲೀ ಯಾರಿಗೂ ಸೋಂಕು ತಗುಲಿದ ಕಿಂಚಿತ್‌ ಮಾಹಿತಿಯೂ ಇಲ್ಲ. ಆದ್ದರಿಂದ ಕೂಟದ ವೇಳೆಯೇ ಸೋಂಕು ತಗುಲಿದೆ ಎನ್ನುವುದಕ್ಕೆ ಆಧಾರವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಒಬ್ಬ ಕ್ರೀಡಾಪಟುವಿಗೆ ಸೋಂಕು ತಗುಲಿದೆ ಎಂಬ ವರದಿಯೇ ಸುಳ್ಳು ಎಂದಿದ್ದಾರೆ.

ಟರ್ಕಿ ಹೇಳುವುದೇನು?: ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಕಿಂಚಿತ್‌ ಕಾಳಜಿ ವಹಿಸದೇ ಕೂಟ ನಡೆಸಲಾಗಿದೆ. ಮೊದಲೇ ಈ ಬಗ್ಗೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೆವು. ಇಂಗ್ಲೆಂಡ್‌ನ‌ಲ್ಲಿ ನಾವು ಉಳಿದುಕೊಂಡ ಹೋಟೆಲ್‌ನಲ್ಲಿ ಲಿಫ್ಟ್ ವ್ಯವಸ್ಥೆಯೂ ಸರಿಯಿರಲಿಲ್ಲ. ಒಂದು ಲಿಫ್ಟ್ ಹಾಳಾಗಿದ್ದರಿಂದ ಎಲ್ಲರೂ ಒಟ್ಟಾಗಿ ಒಂದೇ ಲಿಫ್ಟ್ ನಲ್ಲಿ ಹೋಗಬೇಕಿತ್ತು. ಊಟ ಮಾಡುವ ಸ್ಥಳದಲ್ಲೂ ಗುಂಪು ಇರುತ್ತಿತ್ತು. ಹಾಗೆಯೇ ಜಿಮ್‌, ಅಭ್ಯಾಸದ ಜಾಗ ಎಲ್ಲಿಯೂ ಗಂಭೀರವಾದ ಕ್ರಮವನ್ನು ಸಂಘಟಕರು ತೆಗೆದುಕೊಂಡಿರಲಿಲ್ಲ ಎಂದು ಟರ್ಕಿ ಬಾಕ್ಸಿಂಗ್‌ ಒಕ್ಕೂಟದ ಅಧ್ಯಕ್ಷ ಗಾಜ್ಕೆಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next