ನವದೆಹಲಿ: ಕೋವಿಡ್ ಲಸಿಕೆಯನ್ನು ಪಡೆಯಲು ಹಲವಾರು ಜನ ಹಿಂದೇಟು ಹಾಕುತ್ತಿದ್ದ ಕಾಲ ದೂರವಾಗಿದೆ. ಈಗ ದೇಶದಲ್ಲಿ ಶೇ. 7ರಷ್ಟು ಜನ ಮಾತ್ರ ಲಸಿಕೆ ಪಡೆಯಲು ಒಲ್ಲೆ ಎನ್ನುತ್ತಿದ್ದಾರಷ್ಟೇ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಲೋಕಲ್ ಸರ್ಕಲ್ಸ್ ಎಂಬ ಆನ್‌ಲೈನ್ ಸಂಸ್ಥೆಯೊಂದು ಈ ಸಮೀಕ್ಷೆಯನ್ನು ನಡೆಸಿದ್ದು, ದೇಶದ 301 ಜಿಲ್ಲೆಗಳಲ್ಲಿನ 12,810 ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಿ, ಈ ವರದಿಯನ್ನು ಸಿದ್ಧಪಡಿಸಿದೆ. ಸಮೀಕ್ಷೆಗೊಳಗಾದವರಲ್ಲಿ ಶೇ. 67 ಮಂದಿ ಪುರುಷರಾಗಿದ್ದು, ಶೇ. 33 ಮಂದಿ ಮಹಿಳೆಯರಾಗಿದ್ದರೆಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಲಸಿಕೆ ಪಡೆಯಲು ತಾವು ಸಿದ್ಧರಿಲ್ಲ ಎಂದು ಹೇಳಿದ ಶೇ. 7ರಷ್ಟು ಜನರಲ್ಲಿ ಶೇ. 42 ಮಂದಿ ಮೊದಲ ದರ್ಜೆಯ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಶೇ. 27 ಜನ ದ್ವಿತೀಯ ದರ್ಜೆಯ ಜಿಲ್ಲೆಗಳಿಗೆ ಸೇರಿದ್ದು, ಶೇ. 31ರಷ್ಟು ಜನ ಮೂರು ಮತ್ತು ನಾಲ್ಕನೇ ದರ್ಜೆಯ ಜಿಲ್ಲೆಗಳು ಹಾಗೂ ಗ್ರಾಮೀಣ ಭಾಗಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ:“ನೀಟ್ ಸೂಪರ್ ಸ್ಪೆಷಾಲಿಟಿ’ಗೆ ಸುಪ್ರೀಂ ಅಸ್ತು
ಇದೇ ವೇಳೆ, ದೇಶಾದ್ಯಂತ ಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳಲ್ಲಿ 18,833 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 278 ಮಂದಿ ಸಾವಿಗೀಡಾಗಿದ್ದಾರೆ.