ಬೆಂಗಳೂರು: ಕೋವಿಡ್ 19 ವೈರಸ್ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಎಂದು ಘೋಷಿಸಲಾಗಿದ್ದ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಇಂದು ಈ ಲಾಕ್ ಡೌನ್ ನಿಯಮಗಳನ್ನು ಇನ್ನಷ್ಟು ಬಿಗುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತಾದ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು. ಇದರನ್ವಯ ಲಾಕ್ ಡೌನ್ ಆಗಿರುವ ಒಂಭತ್ತು ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ವಾಣಿಜ್ಯ ವ್ಯವಹಾರಗಳನ್ನು ಮಾರ್ಚ್ 31ರವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಡಾ.ಸುಧಾಕರ್ ಅವರು ವಿಧಾನಸಭೆಗೆ ನೀಡಿರುವ ಮಾಹಿತಿಯ ಮುಖ್ಯಾಂಶಗಳು ಹೀಗಿವೆ:
– ಲಾಕ್ ಡೌನ್ ಘೋಷಣೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲುಬುರಗಿ, ಧಾರವಾಡ, ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿಯ ಬಂದ್ ಇರುತ್ತದೆ.
– ಈ 9 ಜಿಲ್ಲೆಗಳಲ್ಲಿ ಬಂದ್ ಮೇಲ್ವಿಚಾರಣೆಯ ಹೊಣೆ ಆಯಾ ಜಿಲ್ಲೆಗಳ ಪೊಲೀಸ್ ಇಲಾಖೆಗಳದ್ದಾಗಿರುತ್ತದೆ.
– ಕರ್ನಾಟಕ ರಾಜ್ಯದ ಎಲ್ಲಾ ಗಡಿಭಾಗಗಳನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಮುಚ್ಚಲಾಗುತ್ತದೆ.
– ರಾಜ್ಯದಲ್ಲಿ ಇದುವರೆಗೆ 29 ಕೋವಿಡ್ 19 ಪ್ರಕರಣಗಳು ದೃಢಗೊಂಡಿದೆ.