Advertisement

ದ.ಕ.: ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ; ಸೌಲಭ್ಯ ಪಡೆಯುವುದು ಹೇಗೆ?

02:56 AM Jul 17, 2020 | Hari Prasad |

ಮಂಗಳೂರು: ಕೋವಿಡ್ 19 ಸೋಂಕಿತರಿಗೆ ದ.ಕ. ಜಿಲ್ಲೆಯ 7 ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಹಾಗೂ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್‌ ಯೋಜನೆಯಡಿ ಉಚಿತ ಚಿಕಿತ್ಸೆ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

Advertisement

ಪಾಸಿಟಿವ್‌ ಹೊಂದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದೇ ಇದ್ದವರಿಗೆ ಮನೆಯಲ್ಲೇ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಆದರೆ, ಮನೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಇತರರಿಗೆ ತೊಂದರೆಯಾಗದಂತೆ ಇರಬೇಕಾಗಿದ್ದು, ಮನೆಯಲ್ಲಿ ಪ್ರತ್ಯೇಕ ಕೊಠಡಿ, ಅದರೊಂದಿಗೆ ಶೌಚಾಲಯ ವ್ಯವಸ್ಥೆ ಇದ್ದರಷ್ಟೇ ಹೋಂ ಐಸೊಲೇಶನ್‌ಗೆ ಅವಕಾಶವಿದೆ.

ಒಂದೊಮ್ಮೆ ಮನೆಯಲ್ಲಿ ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದೇ ಇದ್ದಲ್ಲಿ ಅಂಥ‌ವರಿಗೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಈಗ ಕೊಣಾಜೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದ್ದು, ಇನ್ನಷ್ಟು ಸೆಂಟರ್‌ಗಳನ್ನು ತೆರೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೌಲಭ್ಯ ಪಡೆಯುವುದು ಹೇಗೆ?
ಕೋವಿಡ್ 19 ಸೋಂಕಿನ ಲಕ್ಷಣಗಳಿದ್ದು, ಚಿಕಿತ್ಸೆ ಬೇಕಾಗಿದ್ದಲ್ಲಿ ಅಂಥವರಿಗೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಅಲ್ಲಿ ಸ್ಥಳವಕಾಶ ಇಲ್ಲದಿದ್ದಲ್ಲಿ ಮಾತ್ರ ಸರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳುವವರು ಕಡ್ಡಾಯವಾಗಿ ಆಯಾ ಆಸ್ಪತ್ರೆಗಳಿಗೆ ಗೊತ್ತುಪಡಿಸಿರುವ ಕೋವಿಡ್‌ ಸಂಬಂಧಿತ ಅಧಿಕಾರಿಗಳಿಗೆ ಮೊಬೈಲ್‌ ಮೂಲಕ ಮಾಹಿತಿ ನೀಡಬೇಕು. ಸರಕಾರ ಗೊತ್ತುಪಡಿಸಿರುವ ಆಸ್ಪತ್ರೆಗಳಲ್ಲಿ ಈ ಮೂಲಕ ಉಚಿತ ಚಿಕಿತ್ಸೆ ಪಡೆಯಬಹುದು.

Advertisement

ಈ ಆಸ್ಪತ್ರೆಗಳಲ್ಲಿ 100 ಬೆಡ್‌ಗಳನ್ನು ಖಾಲಿ ಇರಿಸಲು ಜಿಲ್ಲಾಡಳಿತದ ಅಧಿಕಾರಿಗಳು ಆಸ್ಪತ್ರೆಗಳ ಪ್ರಮುಖರೊಂದಿಗೆ ಚರ್ಚಿಸುತ್ತಿದ್ದಾರೆ ಎಂದಿದ್ದಾರೆ. ವೆನ್ಲಾಕ್‌ನಲ್ಲಿ ಕೋವಿಡ್ 19 ಉಚಿತ ಪರೀಕ್ಷೆಗೆ ಅವಕಾಶವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕವಿರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next