ಹಾವೇರಿ: ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೋರ್ವಳಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಸಂಜೆ ಶಿಗ್ಗಾವಿ ಪಟ್ಟಣದ 12 ಜನರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು ಇವರಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ 15 ವರ್ಷದ ಬಾಲಕಿಯೂ ಇರುವುದು ಬೆಳಕಿಗೆ ಬಂದಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ವಾಸವಾಗಿದ್ದ ಈ ಬಾಲಕಿ ಈಗ ಪಿ-8644 ಸೋಂಕಿತೆ ಆಗಿದ್ದು 56 ವರ್ಷದ ಪಿ-6832ರ ಸಂಪರ್ಕದಿಂದ ಸೋಂಕು ಹರಡಿದೆ.
ಬಾಲಕಿಗೆ ಪರೀಕ್ಷೆ: ಮೊದಲು ಸೋಂಕು ಪತ್ತೆಯಾಗಿರುವುದು ಮುಂದಾಗ ಬಹುದಾದ ದೊಡ್ಡ ಆವಾಂತರ ತಪ್ಪಿಸಿದೆ. ಆದರೆ, ಬಾಲಕಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ.
ಸರ್ಕಾರಕ್ಕೆ ಪತ್ರ
ಕೋವಿಡ್-119 ಪಾಸಿಟಿವ್ ಇರುವ ಬಾಲಕಿಗೆ ಆಸ್ಪತ್ರೆಯನ್ನೇ ಪರೀಕ್ಷಾ ಕೇಂದ್ರವನ್ನಾಗಿ ಮಾಡಿ ಪರೀಕ್ಷೆ ಬರೆಸಲು ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಅನುಮತಿ, ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಹೇಳಿದ್ದಾರೆ.