Advertisement

ಕೋವಿಡ್‌-19: ಇದು ಪರೀಕ್ಷೆಯ ಸಮಯ!

01:52 AM Jun 26, 2020 | Hari Prasad |

ದೇಶದ ಕೋವಿಡ್‌-19 ಟೆಸ್ಟಿಂಗ್‌ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚಳವಾಗಿದೆ.

Advertisement

ಜೂನ್‌ 24ರಂದು ಭಾರತ 2 ಲಕ್ಷಕ್ಕೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಿದೆ. ಆದರೆ, ಈಗ ಕೋವಿಡ್ 19 ಸೋಂಕು ದೇಶದ ಬಹುತೇಕ ಭಾಗಗಳಿಗೂ ಕಾಲಿಟ್ಟಿರುವುದರಿಂದ ಜನಸಂಖ್ಯೆಗೆ ಹೋಲಿಸಿದರೆ ಟೆಸ್ಟಿಂಗ್‌ ಪ್ರಮಾಣ ಇನ್ನೂ ಕಡಿಮೆಯೇ ಇದೆ ಎನ್ನಲಾಗುತ್ತದೆ.

ಮುಖ್ಯವಾಗಿ, ರೋಗ ಲಕ್ಷಣವಿಲ್ಲದ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವುದರಿಂದ, ಪರೀಕ್ಷೆಗಳ ಪ್ರಮಾಣವನ್ನೂ ಹೆಚ್ಚಿಸಲೇಬೇಕು ಎಂದು ವೈಜ್ಞಾನಿಕ ವಲಯ ಹೇಳುತ್ತಿದೆ…

ದೆಹಲಿಯಲ್ಲಿ ಹಠಾತ್‌ ಏರಿಕೆ
ಜೂನ್‌ 23ರಂದು ದೆಹಲಿಯು ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌-19 ಪ್ರಕರಣಗಳು ಪತ್ತೆಯಾದ ನಗರವಾಯಿತು. ಅದೊಂದೇ ದಿನ ರಾಷ್ಟ್ರ ರಾಜಧಾನಿಯಲ್ಲಿ 3927 ಪ್ರಕರಣಗಳು ಪತ್ತೆಯಾಗಿವೆ. ಆದಾಗ್ಯೂ, ದೆಹಲಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆ ಕಂಡು ಬರುತ್ತಿದೆಯಾದರೂ, ಈಗಲೂ ಒಟ್ಟಾರೆ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ, ಜಗತ್ತಿನ ಅನ್ಯ ನಗರಿಗಳು ಬಹಳ ಮುಂದೆಯೇ ಇವೆ. ಉದಾಹರಣೆಗೆ, ಜಾಗತಿಕ ಹಾಟ್‌ಸ್ಪಾಟ್‌ ಆಗಿದ್ದ ನ್ಯೂಯಾರ್ಕ್‌ ನಗರಿಯಲ್ಲಿ ಜೂನ್‌ 23ರಂದು ಕೇವಲ 581 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಅಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2 ಲಕ್ಷ 13 ಸಾವಿರದಷ್ಟಿದ್ದರೆ, ದೆಹಲಿಯಲ್ಲಿ 70 ಸಾವಿರ ದಾಖಲಾಗಿದೆ.

ಹೆಚ್ಚಿದ ಟೆಸ್ಟಿಂಗ್‌ ಕಾರಣವೇ?
ಈ ತಿಂಗಳ ಎರಡನೇ ವಾರದಲ್ಲಿ ದೆಹಲಿಯಲ್ಲಿ ಕೋವಿಡ್‌-19 ನಿತ್ಯ ಪರೀಕ್ಷೆಗಳ ಸಂಖ್ಯೆ 4 ಸಾವಿರಕ್ಕೆ ಇಳಿದಿತ್ತು! ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ ಕೇಜ್ರಿವಾಲ್‌ ಸರ್ಕಾರಕ್ಕೆ ಈ ವಿಚಾರದಲ್ಲಿ ಎಚ್ಚರಿಸಿದ ಮೇಲೆ, ಹಾಗೂ ಕೇಂದ್ರ ಸರ್ಕಾರವು ಸಹಾಯಕ್ಕೆ ಮುಂದಾದ ಮೇಲೆ ಟೆಸ್ಟಿಂಗ್‌ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜೂನ್‌ 23ರಂದು ರಾಷ್ಟ್ರ ರಾಜಧಾನಿಯಲ್ಲಿ 16,952 ಟೆಸ್ಟ್‌ಗಳನ್ನು ನಡೆಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಅದೇ ದಿನವೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ! ಅಂದರೆ, ನಿಜಕ್ಕೂ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯ ಎಷ್ಟಿದೆ ಎನ್ನುವುದು (ಅದರಲ್ಲೂ ಹಾಟ್‌ ಸ್ಪಾಟ್‌ಗಳಲ್ಲಿ) ಇದರಿಂದ ಮನವರಿಕೆಯಾಗುತ್ತದೆ.

Advertisement


ದೇಶದ ಟೆಸ್ಟ್‌ ಪಾಸಿಟಿವಿಟಿ ದರ
ಜೂನ್‌ 1ಕ್ಕೆ ಹೋಲಿಸಿದರೆ, ಈಗ ದೇಶದಲ್ಲಿ ನಿತ್ಯ ಟೆಸ್ಟಿಂಗ್‌ ಪ್ರಮಾಣ ದ್ವಿಗುಣಗೊಂಡಿದೆ. ಆದರೆ, ಈಗಲೂ ಟೆಸ್ಟ್‌ ಪಾಸಿಟಿವಿಟಿ (ಒಟ್ಟು ಪರೀಕ್ಷೆಗಳಲ್ಲಿ ಸೋಂಕಿತರ ಪ್ರಮಾಣ) ಏಕ ರೀತಿಯಲ್ಲೇ ಇದೆ. ಆದರೆ, ದೇಶದ ವಿವಿಧ ರಾಜ್ಯಗಳಲ್ಲಿ ಟೆಸ್ಟ್‌ ಪಾಸಿಟಿವಿಟಿ ದರ ಒಂದೇ ತೆರನಾಗಿಲ್ಲ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಟೆಸ್ಟ್‌ ಪಾಸಿಟಿವಿಟಿ ದರವು ಗುರುವಾರ ಸಂಜೆಯ ವೇಳೆಗೆ 16.73 ಪ್ರತಿಶತದಷ್ಟಿದ್ದರೆ, ಕರ್ನಾಟಕದಲ್ಲಿ ಕೇವಲ 1.87 ಪ್ರತಿಶತದಷ್ಟಿದೆ.

4.16 ಪ್ರತಿಶತ ರೋಗಿಗಳಿಗಷ್ಟೇ ವೆಂಟಿಲೇಟರ್‌
ಜೂನ್‌ 23ಕ್ಕೆ ದೇಶದಲ್ಲಿ ಪತ್ತೆಯಾದ ಒಟ್ಟು 4.4 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳಲ್ಲಿ, 15.34 ಪ್ರತಿಶತ ರೋಗಿಗಳಿಗೆ (27,317) ತೀವ್ರ ನಿಗಾ ಘಟಕದ ಅಗತ್ಯ ಎದುರಾದರೆ, 15.89 ಪ್ರತಿಶತ ರೋಗಿಗಳು (28301) ಆಕ್ಸಿಜನ್‌ ಸಪೋರ್ಟ್‌ ಪಡೆದಿದ್ದಾರೆ ಮತ್ತು 4.16 ಪ್ರತಿಶತ (7423) ರೋಗಿಗಳಿಗೆ ವೆಂಟಿಲೇಟರ್‌ ಅಗತ್ಯ ಎದುರಾಯಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಂದರೆ, ಬಹುತೇಕ ರೋಗಿಗಳು ಹೆಚ್ಚು ತೊಂದರೆಯಿಲ್ಲದೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದರ್ಥ.

27,317: ಐಸಿಯುಗೆ ರೋಗಿಗಳು

28301 : ಆಕ್ಸಿಜನ್‌ ಸಪೋರ್ಟ್‌ ಪಡೆದವರು

7423 : ವೆಂಟಿಲೇಟರ್‌ ಅಗತ್ಯ ಎದುರಾದವರು

2 ಲಕ್ಷ ದಾಟಿದ ನಿತ್ಯ ಪರೀಕ್ಷೆ
ಭಾರತವು ಬುಧವಾರ 2 ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದ್ದು, ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನಿತ್ಯ ಪರೀಕ್ಷೆಗಳು ದೇಶದಲ್ಲಿ ನಡೆದಿವೆ. ಜೂನ್‌ 24ರಂದು ದೇಶಾದ್ಯಂತ ಒಟ್ಟು 2,15,195 ಪರೀಕ್ಷೆಗಳನ್ನು ನಡೆಸಲಾಗಿದೆ.

ಇದರಲ್ಲಿ 1,71,587 ಪರೀಕ್ಷೆಗಳು ಸರ್ಕಾರಿ ಪ್ರಯೋಗಾಲಯಗಳಲ್ಲಿ ನಡೆದರೆ, 43,608 ಪರೀಕ್ಷೆಗಳು ಖಾಸಗಿ ಲ್ಯಾಬ್‌ಗಳಲ್ಲಿ ನಡೆದಿವೆ. ಜೂನ್‌ 1ರಂದು ದೇಶದಲ್ಲಿ ಒಟ್ಟು 1 ಲಕ್ಷ ಪರೀಕ್ಷೆಗಳು ನಡೆದಿದ್ದವು, ಕೇವಲ 24 ದಿನದಲ್ಲಿ ಟೆಸ್ಟಿಂಗ್‌ ಸಾಮರ್ಥ್ಯ ದ್ವಿಗುಣಗೊಂಡಿರುವುದು ಶ್ಲಾಘನೀಯ ಶ್ರಮವೇ ಸರಿ.

ಆದಾಗ್ಯೂ, ಪ್ರಸಕ್ತ ಭಾರತವು ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ 5480 ಜನರನ್ನು ಪರೀಕ್ಷಿಸುತ್ತಿದ್ದು, ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ಇದು ಟಾಪ್‌ ಹತ್ತು ಹಾಟ್‌ ಸ್ಪಾಟ್‌ಗಳಲ್ಲೇ ಅತಿಕಡಿಮೆ ಪ್ರಮಾಣ. ಅಮೆರಿಕ ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ 90 ಸಾವಿರ ಜನರನ್ನು ಪರೀಕ್ಷಿಸಿದರೆ, ರಷ್ಯಾ ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ 1 ಲಕ್ಷ 24 ಸಾವಿರ ಜನರನ್ನು ಪರೀಕ್ಷಿಸಿದೆ.

ಆದಾಗ್ಯೂ ಈ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಜನಸಂಖ್ಯೆ ಅಪಾರವಾಗಿರುವುದರಿಂದ, “ಟೆಸ್ಟ್‌ ಪರ್‌ ಮಿಲಿಯನ್‌ ಪ್ರಮಾಣ’ ಕಡಿಮೆ ಇರುವುದು ಸಹಜವೇ. ಆದರೂ ಮುಂದಿನ ದಿನಗಳಲ್ಲಿ ನಿತ್ಯಕನಿಷ್ಠ 5 ಲಕ್ಷ ಟೆಸ್ಟ್‌ಗಳನ್ನು ನಡೆಸುವ ಗುರಿ ಭಾರತಕ್ಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next