ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕಿನ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತಿದೆ. ಸಾರ್ವಜನಿಕರ ಆರೋಗ್ಯದ ಕಾಳಜಿ ಸರ್ಕಾರದ ಮುಖ್ಯ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಡಿಸೆಂಬರ್ 12, 2020) ಹೇಳಿದರು.
ಅವರು ಫೆಡರೇಷಮ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಎಫ್ ಐಸಿಸಿಐ)ಯ 93ನೇ ವಾರ್ಷಿಕ ಅಧಿವೇಶನ ಉದ್ದೇಶಿಸಿ ಮಾತನಾಡಿತ್ತಾ, ಫೆಬ್ರುವರಿ-ಮಾರ್ಚ್ ನಲ್ಲಿ ಕೋವಿಡ್ 19 ಸೋಂಕು ಆರಂಭವಾದಾಗ ನಾವು ಅಪರಿಚಿತ ಶತ್ರುವಿನ ವಿರುದ್ಧ ಹೋರಾಡಲು ಆರಂಭಿಸಿದ್ದೇವು. ಇದರ ಪರಿಣಾಮ ಉತ್ಪಾದನೆ, ಸಾಗಣೆ ಹಾಗೂ ಆರ್ಥಿಕತೆಯಲ್ಲಿ ಬಹಳಷ್ಟು ಅನಿಶ್ಚಿತತೆಗಳು ತಲೆದೋರಿದ್ದವು ಎಂದರು.
ಈ ಪರಿಸ್ಥಿತಿ ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆ ಕೂಡಾ ಉದ್ಭವವಾಗಿದೆ. ಇವೆಲ್ಲವೂ ಹೇಗೆ ಚೇತರಿಕೆ ಕಾಣಬಲ್ಲವು ಎಂಬುದು ಕೂಡಾ ದೊಡ್ಡ ಪ್ರಶ್ನೆಯಾಗಿತ್ತು. ಈ 20-20 ಪಂದ್ಯದಲ್ಲಿ ಶೀಘ್ರವಾಗಿ ಹಲವಾರು ಮಹತ್ತರ ಬದಲಾವಣೆಯಾಗಿದೆ. ಆದರೆ 2020 ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಇಡೀ ದೇಶ ಹಾಗೂ ಜಗತ್ತು ಸಾಕಷ್ಟು ಏರಿಳಿತ ಕಂಡಂತಾಗಿದೆ. ಕೋವಿಡ್ ಕಾಲದ ಬಗ್ಗೆ ಕೆಲವು ವರ್ಷ ಬಿಟ್ಟು ನಾವು ಆಲೋಚಿಸಿದರೆ, ಆಗ ನಾವು ನಂಬಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಚೇತರಿಕೆಯ ಹಾದಿಯಲ್ಲಿರುತ್ತೇವೆ ಎಂದು ಪ್ರಧಾನಿ ಮೋದಿ ವಿಶ್ವಾಸವ್ಯಕ್ತಪಡಿಸಿದರು.
ಇದನ್ನೂ ಓದಿ:ಉಡುಪಿ ರೋಬೊ ಸಾಫ್ಟ್ ನಲ್ಲಿ ಬೆಂಕಿ ಅವಘಡ : ತಪ್ಪಿದ ಭಾರಿ ದುರಂತ
2020ರಲ್ಲಿನ ಕೋವಿಡ್ 19 ಹಿನ್ನೆಲೆಯಲ್ಲಿ ಭಾರತ ಕೂಡಾ ಭಾರೀ ಏರಿಳಿತದ ಹಾದಿ ಸವೆಸಿದೆ. ಆದರೆ ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆಗಿಂತ ವೇಗವಾಗಿ ಅಭಿವೃದ್ದಿಯಾಗುತ್ತಿದೆ. ಆರ್ಥಿಕ ಚೇತರಿಕೆ ಕುರಿತ ನಕ್ಷೆ ಕೂಡಾ ಇದ್ದಿರುವುದಾಗಿ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.
ಡಿಸೆಂಬರ್ ನಲ್ಲಿ ಕೋವಿಡ್ 19 ಸೋಂಕಿನ ಪರಿಸ್ಥಿತಿ ಬದಲಾಗಿದೆ. ಈ ಬಗ್ಗೆ ನಮ್ಮಲ್ಲಿ ರೋಡ್ ಮ್ಯಾಪ್ ಹಾಗೂ ಉತ್ತರಗಳಿವೆ. ಬಂಡವಾಳ ಹೂಡಿಕೆದಾರರನ್ನು ಉತ್ತೇಜಿಸಲಾಗುತ್ತಿದೆ. ಕೋವಿಡ್ 19 ಸೋಂಕಿನ ಕಾಲದ ಕೆಲವು ಸಂಗತಿಗಳು ನಮಗೆ ಭವಿಷ್ಯದಲ್ಲಿ ಇನ್ನಷ್ಟು ಗಟ್ಟಿಗೊಳ್ಳಲು ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.