ಹೊಸದಿಲ್ಲಿ: ಕೋವಿಡ್ -19 ತಾಯ್ನಾಡು ಚೀನವು ಅದರ ಪ್ರಸರಣ ಸಂಬಂಧ ಆರಂಭದಲ್ಲೇ ಒಂದಷ್ಟು ಎಚ್ಚರಿಕೆ ವಹಿಸಿದ್ದರೆ ವಿಶ್ವಾದ್ಯಂತ ಹರಡುವುದನ್ನು ತಪ್ಪಿಸಬಹುದಿತ್ತು ಎಂಬ ಆರೋಪ ಅಮೆರಿಕದ ಕಡೆಯಿಂದ ಬರುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯೂ ಇನ್ನಷ್ಟು ಮುಂಜಾಗ್ರತೆ ವಹಿಸಬೇಕಿತ್ತು ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಆರೋಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವ ಉಲ್ಲೇಖ ವೊಂದು ಜರ್ಮನಿಯ ಬೇಹು ವರದಿ ಯಲ್ಲಿದ್ದು, ಕೋವಿಡ್ -19 ಎಚ್ಚರಿಕೆ ವರದಿ ಬಿಡುಗಡೆ ವಿಚಾರದಲ್ಲಿ ಚೀನವು ಡಬ್ಲ್ಯುಎಚ್‌ಒ ಮೇಲೆ ಒತ್ತಡ ಹೇರಿತ್ತು ಎಂಬ ವಿಚಾರ ಬಹಿರಂಗವಾಗಿದೆ.
ಕೋವಿಡ್ -19 ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗೆಗಿನ ವರದಿಯನ್ನು ಬಹಿರಂಗ ಮಾಡದಂತೆ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಡಬ್ಲ್ಯುಎಚ್‌ಒ ಮೇಲೆ ಒತ್ತಡ ಹೇರಿದ್ದರು ಎಂಬುದಾಗಿ ಜರ್ಮನ್ ಗುಪ್ತಚರ ಸಂಸ್ಥೆ ಬಿಎನ್‌ಡಿ ತಯಾರಿಸಿರುವ ತನಿಖಾ ವರದಿಯನ್ನು ಉಲ್ಲೇಖೀಸಿ ಜರ್ಮನಿಯ ಖ್ಯಾತ ಅಂತರ್ಜಾಲ ಮಾಧ್ಯಮ “ಡೆರ್ ಸ್ಪೀಜೆಲ್’ ವರದಿ ಮಾಡಿದೆ.
ಜ. 21ರಂದು ಡಬ್ಲ್ಯುಎಚ್‌ಒ ಮುಖ್ಯಸ್ಥರಿಗೆ ಕರೆ ಮಾಡಿದ್ದ ಕ್ಸಿ ಜಿನ್‌ಪಿಂಗ್, ಕೋವಿಡ್ -19 ವರದಿ ಪ್ರಕಟಿಸದಂತೆ ಒತ್ತಡ ಹೇರಿದ್ದರು. ವರದಿಯಲ್ಲಿ ಕೊರೊನಾ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲುದು ಎಂಬ ಅಂಶವಿತ್ತು. ಚೀನದ ಒತ್ತಡದಿಂದಾಗಿ ಡಬ್ಲ್ಯುಎಚ್‌ಒದಿಂದ ಹೊರಬರ ಬೇಕಿದ್ದ ಎಚ್ಚರಿಕೆ 4ರಿಂದ 6 ವಾರವಿಳಂಬವಾಗಿ ಪ್ರಕಟವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
ಆರೋಪ ತಳ್ಳಿಹಾಕಿದ ಡಬ್ಲ್ಯುಎಚ್‌ಒ
ಬಿಎನ್‌ಡಿ ವರದಿಯನ್ನು ಡಬ್ಲ್ಯುಎಚ್‌ಒ ನಿರಾಕರಿಸಿದೆ. ಜ. 21ರಂದು ಜಿನ್‌ಪಿಂಗ್ ಮತ್ತು ಡಬ್ಲ್ಯುಎಚ್‌ಒ ಮುಖ್ಯಸ್ಥರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಜ. 20ರಂದು ಕೋವಿಡ್ -19 ಬಗ್ಗೆ ಡಬ್ಲ್ಯುಎಚ್‌ಒ ತಯಾರಿಸಿದ್ದ ವರದಿಯನ್ನು ಜ. 22ರಂದು ಅಧಿಕೃತವಾಗಿ ಪ್ರಕಟಿಸಲಾಯಿತು. ಜ. 21ರಂದು ಜಿನ್‌ಪಿಂಗ್ ನಮ್ಮ ಮೇಲೆ ಒತ್ತಡ ಹೇರಿ, ಡಬ್ಲ್ಯುಎಚ್‌ಒ ಅದಕ್ಕೆ ಮಣಿದಿದ್ದೇ ಆಗಿ ದ್ದರೆ ಆ ವರದಿ 22ರಂದು ಪ್ರಕಟವಾಗುತ್ತಿರಲಿಲ್ಲ ಎಂದು ಹೇಳಿದೆ.