ಲಾಕ್‌ಡೌನ್ ಇರುವುದರಿಂದ ತಾವೆಲ್ಲ ಹೇಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ, ಹೇಗೆ ಈ ದೇಶಗಳು ಕೋವಿಡ್ 19 ವೈರಸ್ ಮಹಾಮಾರಿಯನ್ನು ಎದುರಿಸುತ್ತಿವೆಎಂಬ ಅನುಭವಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ ಕನ್ನಡಿಗರು. ಆಯ್ದ ಕೆಲವು ಬರಹಗಳು ನಿಮ್ಮ ಮುಂದೆ…
Advertisement
ಲಂಡನ್ನಲ್ಲಂತೂ ಪರಿಸ್ಥಿತಿ ಕೈಮೀರಿದೆ !ವಿಶ್ವದಲ್ಲೇ ಅತಿ ಶ್ರೇಷ್ಠ ವೈದ್ಯಕೀಯ ಸೇವೆ ಲಭ್ಯವಿರುವ ಇಂಗ್ಲೆಂಡ್, ಕೊರೊನಾದಿಂದ ತತ್ತರಿಸಿಹೋಗಿದೆ. ಇಲ್ಲಿನ ಪ್ರಧಾನಿ ಹಾಗೂ ರಾಜಕುವರ ಇಬ್ಬರಿಗೂ ಈ ಸೋಂಕು ತಗುಲಿ ಆತಂಕ ಹೆಚ್ಚಾಯಿತು. ಜನ ಟಾಯ್ಲೆಟ್ ಪೇಪರ್, ಟಿಶ್ಯೂ ಪೇಪರ್, ಹ್ಯಾಂಡ್ ಸ್ಯಾನಿಟೈಸರ್, ಆಹಾರ ಪದಾರ್ಥ ಗಳಾದ ಅಕ್ಕಿ- ಬೇಳೆ- ಗೋಧಿ, ಹಾಲು, ಮೊಸರು, ಮೊಟ್ಟೆ, ಬ್ರೆಡ್ಡು, ಪಿಜ್ಜಾ- ಹೀಗೆ ಕಂಡಕಂಡದ್ದನ್ನೆಲ್ಲ ಖರೀದಿಸಿ ಗುಡ್ಡೇ ಹಾಕಿ, ಸುಮಾರು ದಿನ ಆಹಾರ ಪದಾರ್ಥಗಳೇ ಸಿಗುತ್ತಿರಲಿಲ್ಲ.
Related Articles
Advertisement
ಮೊನ್ನೆ ಮೂಳೆ ರೋಗ ತಜ್ಞರಾದ ನನ್ನ ಸ್ನೇಹಿತರೊಬ್ಬರಿಗೆ ವಾರ್ಡಿನ ರೋಗಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರಿಸಿದಾಗ ಅವರು ತಾನು ಮೂಳೆ ಚಿಕಿತ್ಸೆ ಮಾಡುತ್ತಾ, ಸ್ಟೆಥೋಸ್ಕೋಪ್ ಹಿಡಿಯದೇ ದಶಕಗಳಾಗಿವೆ ಅಂತ ಕಂಗೆಟ್ಟು ಸಲಹೆಗಾಗಿ ನನಗೆ ಕರೆ ಮಾಡಿದ್ದನ್ನು ನೆನೆಸಿಕೊಂಡರೆ, ವೈದ್ಯರ ಮೇಲಿರುವ ಒತ್ತಡದ ಅರಿವಾಗುತ್ತದೆ.
ಅದರಲ್ಲೂ ಕ್ರಿಟಿಕಲ್ ಕೇರ್, ಐಸಿಯುಗಳಲ್ಲಿ ಕಾರ್ಯನಿರತರಾದ ಸಿಬ್ಬಂದಿಗಂತೂ ಸೋಂಕು ತಗಲುವ ನಿರಂತರ ಭೀತಿ ಒಂದೆಡೆ ಆದರೆ, ಕಣ್ಣೆದುರಿಗೆ ಕೋವಿಡ್ ಬಾಧಿತರಾಗಿ ಸಾವಿನೊಡನೆ ಸೆಣಸಾಟ ನಡೆಸುತ್ತಿರುವ ರೋಗಿಗಳ ಪಾಡು ಇನ್ನೊಂದೆಡೆಯಿಂದ ಅವರ ಮನೋಬಲ ಕುಗ್ಗಿಸುವಂತೆ ಮಾಡಿದೆ. ಐಸಿಯು ಬೆಡ್‌ಗಾಗಿ ಕಾಯುತ್ತಲೇ ಏಕಾಂತದಲ್ಲೇ ಸಾವನಪ್ಪುವ ರೋಗಿಗಳ ಹೃದಯವಿದ್ರಾವಕ ದೃಶ್ಯ ಯಾರಿಗೂ ಎದೆಗುಂದಿಸುವಂಥದ್ದು.– ಡಾ| ಸುಶ್ರುತಾ ಆತ್ರೇಯ ಸ್ಪೇನ್ ನಿತ್ಯವೂ ಚಪ್ಪಾಳೆ ಹೊಡೆಯುತ್ತೆ!
ನಾನು ಸ್ಪೇನ್‌ಗೆ ಬಂದು 20 ವರ್ಷಗಳೇ ಆದವು. ಸದೃಢ ಆರೋಗ್ಯ, ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಹೊಂದಿದ ದೇಶವೊಂದು ಹೀಗೆ ಧಸಕ್ಕನೆ ಕುಸಿಯುತ್ತದೆಂದು ನಾನೆಂದೂ ಎಣಿಸಿರಲಿಲ್ಲ. ಅತಿಹೆಚ್ಚು ವೃದ್ಧರನ್ನು ಹೊಂದಿರುವ ಕಾರಣಕ್ಕೆ ಇಲ್ಲಿನ ಸಾವಿನ ಪ್ರಮಾಣ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಒಂದು ತಿಂಗಳಿಂದ ಸ್ಪೇನ್ ಲಾಕ್‌ಡೌನ್ ಆಗಿದೆ. ಈ ನಾಲ್ಕು ವಾರಗಳಲ್ಲಿ 3 ಸಲ ಮಾತ್ರ ಹೊರಗೆ ಕಾಲಿಟ್ಟಿದ್ದೇನೆ. ದಿನಾಪೂರಾ ಹಿಡಿಸುವ ವರ್ಕ್ ಫ್ರಂ ಹೋಮ್, ಮನೆ ಸ್ವಚ್ಛತೆ, ಅಡುಗೆ- ಇದರಲ್ಲಿಯೇ ದಿನಗಳು ಉರುಳುತ್ತಿವೆ. ಯಾವಾಗಲೋ ಬಿಡುವಿದ್ದಾಗ, ಸಿನಿಮಾ ನೋಡುತ್ತೇನೆ. ವಾಟ್ಸ್ಯಾಪ್‌ನಲ್ಲಿ ಕರೆ ಮಾಡಿ, ಕರ್ನಾಟಕದಲ್ಲಿರುವ ನನ್ನ ಕುಟುಂಬದೊಂದಿಗೆ ಮಾತಾಡುತ್ತೇನೆ. ಕೋವಿಡ್ 19 ವೈರಸ್ ನೊಂದಿಗೆ ಆವರಿಸಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಅಂದಾಜು 2 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ಕೆಲಸ ಕಳಕೊಂಡಿದ್ದಾರೆ. ಕಾರ್ಮಿಕ ಕಾನೂನಿನಂತೆ ನಿರುದ್ಯೋಗ ಭತ್ಯೆ ಸಿಕ್ಕರೂ, ಸ್ವಉದ್ಯೋಗಿಗಳಿಗೆ ಇದು ಸಿಗುವುದಿಲ್ಲ. ಇಂಥವರಿಗೆ ಸರ್ಕಾರವೇ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಿಸಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಜನ, ಬಾಲ್ಕನಿಗೆ ಬಂದು 5 ನಿಮಿಷ ಚಪ್ಪಾಳೆ ಹೊಡೆದು, ಆರೋಗ್ಯ ಯೋಧರಿಗೆ ನಮಿಸುತ್ತಾರೆ.
– ಶ್ರೀನಿವಾಸ ನರಸಿಂಹ ಮಗಳ ಜಗದೊಳಗೆ ಒಂದಾಗಿ
ಈ ಅಮೆರಿಕ ದೇಶದ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ, ಸಾವಿನ ಸಂಖ್ಯೆಗಳನ್ನು ಗಮನಿಸುತ್ತಾ ಮತ್ತು ಆ ಮೂಲಕ ಒಳಗೆಲ್ಲೂ ಭಯದ ವಾತಾವರಣ ಸೃಷ್ಟಿಗೊಳ್ಳುವುದನ್ನು ನಿಲ್ಲಿಸಿದ್ದೇವೆ. ಅನಗತ್ಯ ನ್ಯೂಸ್ ಮೂಲಗಳನ್ನು ಕೆದಕುವುದನ್ನು ನಿಲ್ಲಿಸಿಬಿಟ್ಟಿದ್ದೇವೆ. ದಿನವಿಡೀ ಮಗಳು ಐಸಿರಿಯ ಸ್ವಿಮ್ಮಿಂಗು, ಕರಾಟೆ, ಬೀಚು, ಹೈಕಿಂಗು, ಇತ್ಯಾದಿಗಳ ಅಣಕು ರೂಪಕಗಳನ್ನು ನೋಡುತ್ತೇವೆ. ಕೆಲವೊಮ್ಮೆ ಅವಳು ಅವಕಾಶ ಕೊಟ್ಟರೆ ನಾನೂ ಮತ್ತು ಅಂಜಲಿ ಭಾಗಿಯಾಗುತ್ತೇವೆ. ಸೆಂಟ್ರಲ್ ಫ್ಲೋರಿಡಾ ಪ್ರದೇಶದಲ್ಲಿ ನಾವು ವಾಸವಿರುವ ಜಾಗವು ಒಳ್ಳೆಯ ಸಸ್ಯಸಂಪತ್ತನ್ನು ಹೊಂದಿರುವುದು ನಮಗೊಂದು ವರದಾನ. ಮಾಸ್ಕ್ ಧರಿಸಿ, ದಿನಕ್ಕೆ ಎರಡು ಬಾರಿ ಸೈಕ್ಲಿಂಗ್‌ಗೆ ಹೋಗುತ್ತೇವೆ. ದಿನಕ್ಕೊಮ್ಮೆ ಮನೆಯನ್ನು ಮೂವರೂ ಸೇರಿ ಒಪ್ಪವಾಗಿರಿಸುತ್ತೇವೆ. ಒಟ್ಟಿಗೆ ಊಟ ಮಾಡುತ್ತೇವೆ. ಸಂಗೀತ, ಧ್ಯಾನ, ಬರವಣಿಗೆ ಮತ್ತು ಮಗಳೊಂದಿಗಿನ ಆಟದಲ್ಲಿ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲವಾದರೂ ಜಾಗತಿಕವಾಗಿ ಕೋವಿಡ್ ಕಾಯಿಲೆಯು ಸೃಷ್ಟಿಸಿರುವ ಅಭದ್ರತೆಯ ಬಗ್ಗೆ ಬಹಳ ಬೇಸರವಾಗುತ್ತದೆ. ಈ ಕಾಯಿಲೆಯ ಎದುರಿನ ಹೋರಾಟದ ಮುಂಚೂಣಿಯಲ್ಲಿರುವ ಮಹಾನ್ ಚೇತನಗಳಿಗೆ ನಮಿಸುತ್ತ ಆದಷ್ಟು ಬೇಗ ಈ ಮಾರಣಾಂತಿಕ ಮಹಾಮಾರಿಯಿಂದ ನಾವೆಲ್ಲ ಮುಕ್ತರಾಗುತ್ತೇವೆ ಎಂಬ ಆಶಾಭಾವನೆ ನಮ್ಮದು.
– ಡಾ. ಕಣಾದ, ಅಂಜಲಿ, ಐಸಿರಿ ಸ್ಕಾಚ್ ಫ್ಯಾಕ್ಟರಿಗಳೀಗ, ಸ್ಯಾನಿಟೈಸರ್ ಜನ್ಮಭೂಮಿ
ಸ್ಕಾಟ್ಲೆಂಡ್‌ನ ಜನಸಂಖ್ಯೆ ಬೆಂಗಳೂರಿನ ಅರ್ಧದಷ್ಟು. ಜನತೆ, ಮನೆಯೊಳಗೇ ಇರುವುದಕ್ಕೆ ಎಲ್ಲಾ ತರಹದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗೆಳೆಯರ, ಬಂಧುಗಳ ಜೊತೆ ಮಾತನಾಡಲು ಸ್ಕೈಪ್, ಗೂಗಲ್ ಹ್ಯಾಂಗೌಟ್, ಆಟವಾಡಲು ಮೊಬೈಲ್ ಪೋಕರ್, ದಿನಸಿ ತರಿಸಲು ಮೊಬೈಲ್ ಆ್ಯಪ್ ಬಳಸುತ್ತಾರೆ. ಮಕ್ಕಳಿಗೆ ಸಮಯ ಕಳೆಸಲು ತಮ್ಮೆಲ್ಲರ ಗೆಳೆಯರ ಮಕ್ಕಳ ಜೊತೆಗೆ ಗೂಗಲ್ ಹ್ಯಾಂಗೌಟ್ ಮಾಡಿ ಪ್ರತಿ ದಿನವೂ ಒಬ್ಬ ಮಗುವಿನ ಬಳಿ ಕಥೆ ಓದಿಸುತ್ತಾರೆ. ಇಲ್ಲಿನ ಸ್ಕಾಚ್ ಜಗತ್ಪ್ರಸಿದ್ಧಿ ಪಡೆದಿದ್ದರೂ, ಇಲ್ಲಿ ಕ್ರಾಫ್ಟ್ ಏಲ್ ತಯಾರಿಸುವ ಹಲವಾರು ವಹಿವಾಟುಗಳಿವೆ. ಇದರಲ್ಲಿ ಬಹಳಷ್ಟು, ಮದ್ಯ ಮಾಡುವುದನ್ನು ಸದ್ಯಕ್ಕೆ ತ್ಯಜಿಸಿ, ಸ್ಯಾನಿಟೈಸರ್ ತಯಾರಿಯಲ್ಲಿ ತೊಡಗಿವೆ. ಎನ್.ಹೆಚ್.ಎಸ್. (ರಾಷ್ಟ್ರೀಯ ಆರೋಗ್ಯ ಸೇವೆ) ಅನ್ನು ಇಡೀ ರಾಷ್ಟ್ರವೇ ಕೊಂಡಾಡುತ್ತಿದೆ. ಬೇರೆಯವರಂತೆ ಕ್ಯೂ ನಿಲ್ಲಲು ಆದೇಶಿಸುವ ಅಂಗಡಿಗಳು, ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳಿಗೆ ಪ್ರತ್ಯೇಕ ಪ್ರವೇಶ ನೀಡುತ್ತವೆ. ಅವರಿಗೆ ಸಾರ್ವಜನಿಕ ಸಾರಿಗೆ, ಕಾರು ಪಾರ್ಕಿಂಗ್ ಉಚಿತ. ಪ್ರತಿ ಗುರುವಾರದಂದು ಸಂಜೆ 8ಕ್ಕೆ ಎಲ್ಲರೂ ಮನೆಯ ಒಳಾಂಗಣದಲ್ಲಿ ಅಥವಾ ಬಾಲ್ಕನಿಗೆ ಬಂದು ಅವರೆಲ್ಲರಿಗೂ ನಮನ ಸಲ್ಲಿಸಲು ಚಪ್ಪಾಳೆ ಹೊಡೆಯುತ್ತಾರೆ.
– ಮಂಜು ‘ಬ್ಲೇಬಿನ್ ಸಿಯೆ ಝು ಹಾಸ್ ಅಂಡ್ ಗೆಸುಂಡ್’!
ಜರ್ಮನಿಯಲ್ಲಿ ಲಾಕ್‌ಡೌನ್ ಶುರುವಾಗಿದ್ದು, ಮಾರ್ಚ್ 16ರಿಂದ. ಬಸ್‌ಗಳು, ರೈಲುಗಳು ಎಂದಿನಂತೆ ಸಂಚರಿಸುತ್ತಿದ್ದರೂ, ರಸ್ತೆಗಳು ಮಾತ್ರ ಖಾಲಿ ಹೊಡೆಯುತ್ತಿವೆ. ಅಪರೂಪಕ್ಕೆ ಎಂಬಂತೆ ಜನ ಕಣ್ಣಿಗೆ ಬೀಳುತ್ತಾರೆ. ಹಾಗೆ ಕಂಡರೂ ಅವರ ಮುಖದಲ್ಲಿ ಆತಂಕ, ಭಯಗಳೇ ಎದ್ದು ತೋರುತ್ತಿರುತ್ತವೆ. ದಿನಸಿ ಅಂಗಡಿಗಳು ಎಂದಿನಂತೆ ತೆರೆದಿವೆ. ಇಬ್ಬಿಬ್ಬರಂತೆ ಮಾತ್ರ ಆಚೆಗೆ ಹೋಗಲು ಬಿಡುತ್ತಿದ್ದಾರೆ. ಜನ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಉನ್ನತ ವ್ಯಾಸಂಗಕ್ಕೆಂದು ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ವಿವಿಯಿಂದ ಆನ್‌ಲೈನ್ ತರಗತಿಗಳನ್ನು ಆಯೋಜಿಸಿದ್ದಾರೆ. ಹೋಟೆಲ್, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಪಾರ್ಕ್‌ಗಳು ಬಂದ್ ಆಗಿವೆ. ಆದರೂ ಕೆಲವರು ಸೈಕ್ಲಿಂಗ್, ವಾಕಿಂಗ್ ಮತ್ತು ಮಕ್ಕಳ ಜೊತೆ ಆಟ ಆಡುವುದನ್ನು ಬಿಟ್ಟಿಲ್ಲ. ಹಾಗೆ ವಾಕಿಂಗ್ ಹೋಗುವವರಲ್ಲಿ ನಾನೂ ಒಬ್ಬಳು. ಎಲ್ಲರ ಜೀವ ಉಳಿಯಲಿ ಎಂಬ ಪ್ರಾರ್ಥನೆಗಳು ಇಲ್ಲಿಯೂ ಕೇಳಿಸುತ್ತವೆ. ಜರ್ಮನ್ ಭಾಷೆಯ ಈ ಸಾಲು ಮಾತ್ರ ಯಾವಾಗಲೂ ಕಿವಿಗೆ ಬೀಳುತ್ತಲೇ ಇದೆ: “ಬ್ಲೇಬಿನ್ ಸಿಯೆ ಝು ಹಾಸ್ ಅಂಡ್ ಗೆಸುಂಡ್’! ಇದರ ಅರ್ಥ ಇಷ್ಟೇ, “ಮನೆಯಲ್ಲೇ ಇರಿ. ಆರೋಗ್ಯ ಕಾಪಾಡಿ’. ಅಲೆಸ್ ಗ್ಯೂಟ್ (ಬೆಸ್ಟ್ ಆಫ್ ಲಕ್)
– ಅಪೂರ್ವ, ಪಡರ್‌ಬಾರ್ನ್