ರಾಮನಗರ: ಕೋವಿಡ್-19 ಸೋಂಕಿನ ಎಂತಹದ್ದೇ ಪರಿಸ್ಥಿತಿ ಎದುರಾದರೂ, ಅದನ್ನು ನಿಭಾಯಿಸಲು ಸಿದ್ಧರಾಗಿರಿ ಎಂದು ಜಿಲ್ಲಾಡಳಿತಕ್ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜಿ.ಜಗದೀಶ್ ಸೂಚನೆ ನೀಡಿದರು. ನಗರದ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದರು.
ಆಕ್ಸಿನೇಟರ್ ಬಳಸಿ: ಕೋವಿಡ್-19 ಸೋಂಕಿರುವ ರೋಗಿಗಳಲ್ಲಿ ಹಠಾತ್ ಆಮ್ಲಜನಕದ ಪ್ರಮಾಣದಲ್ಲಿ ಕುಸಿತವಾಗಿ ಜೀವಕ್ಕೆ ಹೆಚ್ಚಿನ ಅಪಾಯ ತಂದೊಡ್ಡುತ್ತದೆ. ಹೀಗಾಗಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರಿಗೂ ದಿನದಲ್ಲಿ 3 ಬಾರಿಯಾದರೂ ಆಕ್ಸಿನೇಟರ್ ಬಳಸಿಕೊಂಡು, ಅದರ ದೇಹದ ಆಮ್ಲಜನಕದ ಪ್ರಮಾಣ ಅಳೆಯಬೇಕು. ಅದಕ್ಕನುಗುಣವಾಗಿ ಚಿಕಿತ್ಸೆಗೆ ಕ್ರಮಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಐದು ಸಾವು ಸಂಭವಿಸಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಮತ್ತು ವೈದ್ಯಕಿಯ ಸಿಬ್ಬಂದಿಗೆ ತಾಕೀತು ಮಾಡಿದರು.
ಖಾಸಗಿ ನರ್ಸಿಂಗ್ ಹೋಂ ಜೊತೆ ಮಾತನಾಡಲು ಸಲಹೆ: ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯ 15 ರಿಂದ 20 ಹಾಸಿಗೆಗಳ ನರ್ಸಿಂಗ್ ಹೋಂ ಇಲ್ಲವೆ ಆಸ್ಪತ್ರೆಗಳನ್ನು ಕೋವಿಡ್-19 ಸೋಂಕು ಅಲ್ಲದ ರೋಗಿಗಳ ಚಿಕಿತ್ಸೆಗೆ ಗೊತ್ತು ಮಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ದಾಖಲಾಗಬೇಕಾದ ಇನ್ನಿತರ ರೋಗಿಗಳಿಗೆ ಇಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲ ತಾಲೂಕುಗಳಲ್ಲಿ ಕ್ರಮ ವಹಿಸಲು ಸೂಚನೆ: ಪ್ರತಿ ತಾಲೂಕಿನಲ್ಲೂ ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಸಜ್ಜುಗೊಳಿಸಬೇಕು. ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್-19ಗೆ ಚಿಕಿತ್ಸೆ ನೀಡಲು ಸಿದ್ಧಪಡಿಸಬೇಕು. ಅವಶ್ಯವಿದ್ದರೆ ಪಕ್ಷದಲ್ಲಿ ವಸತಿ ನಿಲಯಗಳು ಮತ್ತು ಕಲ್ಯಾಣ ಮಂಟಪಗಳನ್ನು ತಾತ್ಕಾಲಿಕವಾಗಿ ಆಸ್ಪತ್ರೆಗಳನ್ನಾಗಿ ಮಾರ್ಪಾಡಿಸಿಕೊಂಡು ಕೋವಿಡ್-19 ರೋಗಿಗಳನ್ನು ಉಪಚರಿಸುವ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿಗಳು ಸಲಹೆ ನೀಡಿದರು.
ಡೀಸಿ ಎಂ.ಎಸ್.ಅರ್ಚನಾ, ಜಿಪಂ ಸಿಇಒ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.