Advertisement

ರೈಲ್ವೇ ಯೋಜನೆಗಳಿಗೂ ಕೋವಿಡ್-19 ಕಾಟ?

11:58 PM Apr 05, 2020 | Sriram |

ಬೆಂಗಳೂರು: ರಾಜ್ಯ ರೈಲ್ವೇ ಯೋಜನೆ ಗಳಿಗೆ ಈ ಬಾರಿ ಕೇಂದ್ರ ಸರಕಾರ ನೀಡಿದ್ದ ಅನುದಾನ ತೃಪ್ತಿಕರವಾಗಿತ್ತು. ಆದರೆ ಅದರ ಬಳಕೆಗೆ ವಾತಾವರಣವೇ ತೃಪ್ತಿಕರವಾಗಿಲ್ಲ!

Advertisement

ಸ್ವತಃ ರೈಲ್ವೇ ಸಚಿವರ ಮಹತ್ವಾ ಕಾಂಕ್ಷಿ ಯೋಜನೆಯಾದ ಬೆಳಗಾವಿ- ಕಿತ್ತೂರು- ಧಾರವಾಡ ಸಹಿತ ಹಲವು ಹೊಸ ಮಾರ್ಗಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಭರಪೂರ ಅನುದಾನ ದೊರಕಿತ್ತು. ಅದಕ್ಕೆ ಅನುಮೋದನೆಯೂ ಸಿಕ್ಕಿತ್ತು. ಆದರೆ ಅದರ ಬಳಕೆಗೆ ಕೋವಿಡ್-19  ವೈರಸ್‌ ಕಾಟ ಕೊಡುವ ಸಾಧ್ಯತೆ ಇದೆ.

ಸುಮಾರು ಎರಡು ವಾರಗಳಿಂದ ದೇಶ ಲಾಕ್‌ಡೌನ್‌ ಆಗಿದ್ದು, ಇನ್ನೂ ಹತ್ತು ದಿನ ಇದೇ ಸ್ಥಿತಿ ಮುಂದುವರಿಯಲಿದೆ. ಅನಂತರವೂ ಬಂದ್‌ ವಿಸ್ತರಣೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಇದರಿಂದ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಜತೆಗೆ ಮಹಾಮಾರಿ ಕೋವಿಡ್-19 ನಿಯಂತ್ರಣಕ್ಕೆ ಸಾಕಷ್ಟು ವೆಚ್ಚ ಆಗುತ್ತಿದೆ. ಇದರಿಂದ ರೈಲ್ವೇಗೆ ಸಂಬಂಧಿಸಿದ ಹೊಸ ಯೋಜನೆಗಳಿಗೂ ಅನುದಾನ ಕೊರತೆಯ ಬಿಸಿ ತಟ್ಟುವ ಅನುಮಾನ ಇಲಾಖೆ ಮತ್ತು ರೈಲ್ವೇ ಹೋರಾಟಗಾರರನ್ನು ಕಾಡುತ್ತಿದೆ.

2020-21ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ಯೋಜನೆಗಳಲ್ಲಿ ಸುಮಾರು 1,489 ಕೋ.ರೂ. ಮೀಸಲಿಡಲಾಗಿದೆ. ಇದರಲ್ಲಿ 73 ಕಿ.ಮೀ. ಉದ್ದದ ಬೆಳಗಾವಿ-ಕಿತ್ತೂರು-ಧಾರವಾಡ ಮಾರ್ಗಕ್ಕೇ ಅತಿ ಹೆಚ್ಚು 988 ಕೋಟಿ ರೂ. ನೀಡಲಾಗಿದೆ. ಉಳಿದಂತೆ ಸುಮಾರು 480 ಕೋ.ರೂ. ಮೊತ್ತದ ವಿವಿಧ ಮಾರ್ಗಗಳ ಕಾಮಗಾರಿ ಈಗಾಗಲೇ ಆರಂಭವಾಗಿವೆ.

ಸರಕಾರವು ರೈಲ್ವೇ ವಲಯವನ್ನೂ ಆದ್ಯತೆಯ ಕ್ಷೇತ್ರವಾಗಿ ಪರಿಗಣಿಸುವುದು ಮತ್ತು ರಾಜ್ಯದ ಸಚಿವರು ಮತ್ತು ಸಂಸದರು ಎಷ್ಟು ಮಟ್ಟದ ಒತ್ತಡ ಹೇರುತ್ತಾರೆ ಎಂಬುದರ ಮೇಲೆ ಈ ಯೋಜನೆಗಳು ನಿಂತಿವೆ ಎಂದು ರೈಲ್ವೇ ಹೋರಾಟಗಾರ ಸಂಜೀವ ದ್ಯಾಮಣ್ಣವರ ಅಭಿಪ್ರಾಯಪಡುತ್ತಾರೆ.

Advertisement

ಕೊರತೆ ಆಗದು
ರೈಲ್ವೇ ಅಧಿಕಾರಿಗಳು, ರಾಜ್ಯ ಸರಕಾರದ ಅಧಿ ಕಾರಿಗಳು ಮತ್ತು ಸಂಬಂಧಪಟ್ಟ ಡಿಸಿಗಳೊಂದಿಗೆ ಮಾತುಕತೆ ನಡೆಸಿ, ವಿದ್ಯುದೀಕರಣ ಮತ್ತು ಜೋಡಿ ಮಾರ್ಗಗಳಂತಹ ಯೋಜನೆಗಳ ಪಟ್ಟಿ ಮಾಡಿ, ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಸೂಚಿಸಿದ್ದೇನೆ. 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅನುದಾನದ ಕೊರತೆ ಆಗದು. ಅನುದಾನವೂ ಕಡಿತಗೊಳ್ಳದು.
– ಸುರೇಶ್‌ ಅಂಗಡಿ,
ರೈಲ್ವೇ ಖಾತೆ ರಾಜ್ಯ ಸಚಿವ

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next