ಕೋಟ: ಇಲ್ಲಿಗೆ ಸಮೀಪದ ಕೋಟತಟ್ಟುವಿನಲ್ಲಿ ವಾಸವಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಸೋಮವಾರ ಬೆಳಗ್ಗೆ ಈ ಭಾಗದಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿವರ್ಹಿಸುತ್ತಿದ್ದ ಮಹಿಳೆಗೆ ಕೋವಿಡ್-19 ಸೋಂಕಿರುವುದು ತಪಾಸಣೆಯ ವೇಳೆ ದೃಢಪಟ್ಟಿದೆ. ಇದೀಗ ಆಕೆ ವಾಸವಿದ್ದ ಕೋಟತಟ್ಟು ಗ್ರಾ.ಪಂ. ಕಚೇರಿ ಸಮೀಪದ ಮನೆಯ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ ಹಾಗೂ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಸ್ಥಳೀಯ ಕೋಟ ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿಗಳು ಸುತ್ತಲಿನ ಸ್ಥಳವನ್ನು ಸ್ಯಾನಿಟೈಸ್ ಮಾಡಿದ್ದು, ಆಶಾ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
ಸೋಂಕಿತರು ಎನ್ನಲಾದ ಮಹಿಳೆಯ ಗಂಟಲದ್ರವವನ್ನು ಹೆಚ್ಚಿನ ತಪಾಸಣೆಗಾಗಿ ಕುಟುಂಬದವರು ಸ್ವಯಂಪ್ರೇರಿತವಾಗಿ ಮತ್ತೊಮ್ಮೆ ಮಣಿಪಾಲ ಆಸ್ಪತ್ರೆಯ ಕೊರೊನಾ ಪ್ರಯೋಗಾಲಯಕ್ಕೆ ನೀಡಿದ್ದು ಫಲಿತಾಂಶವನ್ನು ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಮಹಿಳೆಯನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಟ ಠಾಣಾಧಿಕಾರಿ ರಾಜಶೇಖರ್ ಮಂದಲಿ, ಕೋಟ ಆರ್. ಐ. ರಾಜು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘುತಿಂಗಳಾಯ ಮುಂತಾದವರು ಸ್ಥಳಕ್ಕಾಗಮಿಸಿದ್ದಾರೆ.