Advertisement

ಚೆನ್ನಾಗಿದ್ದೇವೆಂಬ ಧೈರ್ಯ ತಂದುಕೊಳ್ಳುತ್ತಿದ್ದೇವೆ ; ಅನಿವಾಸಿ ಭಾರತೀಯರ ಅನುಭವ ಕಥನ – 2

11:43 AM Apr 16, 2020 | Hari Prasad |

ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು ಅಲ್ಲಿನ ಲಾಕ್‌ ಡೌನ್‌ ದಿನಗಳು ಹೇಗೆ ನಡೆಯುತ್ತಿವೆ ಎಂಬ ಅನುಭವ ಹಂಚಿಕೊಂಡಿದ್ದಾರೆ.

Advertisement

ಒಲಿಂಪಿಕ್‌ ಸಾರಥಿಯ ಎದೆಬಡಿತ


ಕೋವಿಡ್ 19 ವೈರಸ್ ಎಂಬ ಮಹಾಮಾರಿಯು ಜಪಾನಿನಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು ಜನವರಿ ತಿಂಗಳ ಮಧ್ಯದಲ್ಲಿ. ನಂತರ ಸೋಂಕಿತರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಾ ಹೋದರೂ ಯಾರೂ ಮುಂದೊಂದು ದಿನ ಮಹಾ ಪಿಡುಗಾಗುತ್ತದೆ ಎಂದು ಆಲೋಚಿಸಿರಲಿಲ್ಲ.

ಒಲಿಂಪಿಕ್‌ ಸಾರಥ್ಯದ ಕನಸಿನಲ್ಲಿದ್ದ ಜಪಾನಿಗೆ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ನಾಲ್ಕು ಸಾವಿರದ ಗಡಿದಾಟಿದಾಗ ನಿಜಕ್ಕೂ ಆತಂಕವಾಯಿತು. ಭಾರತ ಮೊದಲಾದ ದೇಶಗಳ ಲಾಕ್‌ಡೌನ್‌ ಪರಿಸ್ಥಿತಿಯನ್ನು ಅವಲೋಕಿಸಿ, ಸ್ಪೇನ್‌, ಇಟಲಿ, ಅಮೆರಿಕ‌ಗಳಲ್ಲಿನ ಸಾವು-ನೋವುಗಳನ್ನು ಗಮನಿಸಿದ ಜಪಾನ್‌, ಏಪ್ರಿಲ್‌ 8ರಿಂದ ಒಂದು ತಿಂಗಳು ಎಮರ್ಜೆನ್ಸಿ ಘೋಷಿಸಿತು.

ಜಪಾನಿನ ಎಮರ್ಜೆನ್ಸಿ ಭಾರತದಂತೆ ಸಂಪೂರ್ಣ ನಿಷೇಧಾಜ್ಞೆಯಲ್ಲ. ಅಂಗಡಿ, ಶಾಪಿಂಗ್‌ ಮಾಲ್‌ಗ‌ಳು, ಉಪಾಹಾರಗೃಹಗಳು ಎಂದಿನಂತೆ ತೆರೆದಿರುತ್ತದೆ, ಆದರೆ, ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬಸ್‌, ರೈಲುಗಳು ಮಾಮೂಲಿನ ವೇಳಾಪಟ್ಟಿಯಂತೆ ಸಂಚರಿಸುತ್ತಿವೆಯಾದರೂ ಪ್ರಯಾಣಿಕರ ಸಂಖ್ಯೆ ಅಷ್ಟೊಂದು ಇಲ್ಲ. ಶಾಲೆಗಳು ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಲು ಶುರುಮಾಡಿವೆ. ಮಕ್ಕಳಿಗೆ ಇದೊಂದು ಹೊಸ ಅನುಭವವಾಗಿರುವುದರಿಂದ ಅವರು ಸಂಭ್ರಮದಿಂದ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದಾರೆ.
– ಗಣೇಶ ಮೇಗೂರ್‌

ಇಲ್ಲಿ ಲಾಠಿ ಏಟಿಲ್ಲ, ನೇರ ಜೈಲು ಮಾತ್ರ!


ಸುಮಾರು 45 ಲಕ್ಷ ಜನಸಂಖ್ಯೆ ಪುಟ್ಟ ರಾಷ್ಟ್ರ ಕುವೈತಿನಲ್ಲಿ, ಅಂದಾಜು 7 ಲಕ್ಷದಷ್ಟು ಭಾರತೀಯರೇ ಇದ್ದಾರೆ. ಫೆಬ್ರವರಿ ಕೊನೆಯ ವಾರದಲ್ಲಿ ಕೋವಿಡ್ 19 ವೈರಸ್ ಇರಾನ್‌ನಿಂದ ಬಂದ ನಾಗರಿಕರಲ್ಲಿ ಕಾಣಿಸಿಕೊಂಡಾಗ, ಆ ವೇಳೆ ನಡೆಯಬೇಕಿದ್ದ ‘ಕುವೈತ್‌ ರಾಷ್ಟ್ರೀಯ ದಿನ’ವನ್ನೇ ರದ್ದುಮಾಡಲಾಯಿತು. ಕ್ರಮೇಣ ಒಳಬರುವ ಮತ್ತು ಹೊರಹೋಗುವ ವಿಮಾನಗಳೂ ನಿಂತವು.

Advertisement

ಅಗತ್ಯ ವಸ್ತುಗಳ ಅಂಗಡಿಗಳಷ್ಟೇ ಇಲ್ಲಿ ತೆರೆದಿವೆ. ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಸಂಜೆ 5ರಿಂದ ಬೆಳಗ್ಗೆ 6 ರವರೆಗೆ ಸಂಪೂರ್ಣ ಕರ್ಫ್ಯೂ ಇರುತ್ತದೆ. ವೈರಸ್‌ಗೆ ತುತ್ತಾದ ಊರುಗಳಲ್ಲಿ 24 ಗಂಟೆಗಳ ಕರ್ಫ್ಯೂ ಜಾರಿಯಲ್ಲಿದೆ.

ಕರ್ಫ್ಯೂ ಸಮಯದಲ್ಲಿ ಅತೀ ಅಗತ್ಯವಾದ ಕೆಲಸಕ್ಕೆ ಹೊರಹೋಗಲು ಆನ್‌ಲೈನ್‌ ಪರ್ಮಿಟ್‌ ಪಡೆದುಕೊಳ್ಳುವ ವ್ಯವಸ್ಥೆಯಿದೆ. ಕರ್ಫ್ಯೂ ಉಲ್ಲಂಘನೆಗೆ ಲಾಠಿಯೇಟು ಇಲ್ಲದಿದ್ದರೂ, 25 ಲಕ್ಷ ರೂ. ದಂಡ ಮತ್ತು ಐದು ವರ್ಷದ ಜೈಲು ಶಿಕ್ಷೆಯಿದೆ.

ಇಲ್ಲಿನ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ, ಅಹಾರ ವಸ್ತುಗಳ ಗುಣಮಟ್ಟ ಹಾಳಾಗದಂತೆ ನಿರಂತರವಾಗಿ ತನ್ನ ಇಲಾಖೆಗಳ ಮೂಲಕ ಸ್ಥಳ ಪರಿಶೀಲನೆ ಮಾಡುತ್ತಿದೆ. ಸ್ಥಳೀಯವಾಗಿ ಬೆಳೆದ ಮತ್ತು ಆಮದಾಗಿ ಬರುವ ಹಸಿ ತರಕಾರಿಗಳು, ಹಣ್ಣು ಹಂಪಲುಗಳು ಯಥೇಚ್ಛವಾಗಿ ಸಿಗುತ್ತಿವೆ. ಕುವೈತ್‌ ಈಗ ಚಳಿಯ ವಾತಾವರಣದಿಂದ ಬೇಸಿಗೆಯ ವಾತಾವರಣಕ್ಕೆ ಹೊರಳುತ್ತಿದೆ.
– ಪ್ರವೀಣ್‌

ಕ್ರಿಕೆಟ್‌ ಆಡಿದ ಭಾರತೀಯರಿಗೆ ದಂಡ ಬಿತ್ತು!


ಪ್ರಪಂಚವನ್ನೇ ತಲೆಕೆಳಗುಮಾಡಿರುವ ಈ ವೈರಸ್‌ ಆಸ್ಟ್ರೇಲಿಯಾವನ್ನೂ ಬಿಟ್ಟಿಲ್ಲ. ನಾವೂ ಅನವಶ್ಯಕವಾಗಿ ಹೊರಹೋಗುವಂತಿಲ್ಲ. ಮೊನ್ನೆ ಬೀದಿಯಲ್ಲಿ ಕ್ರಿಕೆಟ್‌ ಆಡುತ್ತಿದ್ದ ಕೆಲವು ಭಾರತೀಯ ತರುಣರಿಗೆ ಪೊಲೀಸರು ತಲಾ 1600 ಡಾಲರ್‌ ಜುಲ್ಮಾನೆ ಹಾಕಿದ್ದರು. ಮೊದಲೇ ವಿಶ್ರಾಂತ ಜೀವನ ನಮ್ಮಿಬ್ಬರದು; ಮಗ, ಸೊಸೆ ನ್ಯೂಯಾರ್ಕಿನಲ್ಲಿ ಸ್ವಯಂ ದಿಗ್ಬಂಧನದಲ್ಲಿದ್ದಾರೆ.

ದಿನನಿತ್ಯದ ಹಾಲು, ತರಕಾರಿ ಮತ್ತಿತರ ವಸ್ತುಗಳನ್ನು ಕೊಳ್ಳಲು ವಾರದಲ್ಲಿ ಎರಡು ಬಾರಿ ನಾನು ಮತ್ತು ನನ್ನ ಪತ್ನಿ ಉಷಾ ಶಾಪಿಂಗ್‌ ಹೋಗುತ್ತೇವೆ. ಮನೆಯಲ್ಲಿದ್ದುಕೊಂಡು ನನ್ನ ಓದು ಬರಹ ಸಾಗುತ್ತಿದೆ. ಮುದ್ರಣಕ್ಕೆ ಕಾದಿರುವ ನನ್ನ ಚಾರ್ಲ್ಸ್ ಡಾರ್ವಿನ್‌ ಪುಸ್ತಕದ ಕರಡನ್ನು ತಿದ್ದುತ್ತಿದ್ದೇನೆ.

ಸಿನಿಮಾ ನೋಡುವುದು, ನಡುವೆ ಕೀಬೋರ್ಡಿನ ಮೇಲೆ ಕೈಹಾಯಿಸುವುದು, ದಿನಾ ಒಂದು ಗಂಟೆ ಯೋಗ, ನಂತರ ಒಂದು ಗಂಟೆ ವಾಕಿಂಗ್‌. ಮನೆಯ ಮುಂದೆ ಮತ್ತು ಹಿಂದೆ ಇರುವ ಕೈದೋಟದಲ್ಲಿ ಇಬ್ಬರಿಗೂ ಕೆಲಸ ಇದ್ದೇ ಇರುತ್ತದೆ, ಕಳೆ ಕೀಳುವುದು, ಗೊಬ್ಬರ ಹಾಕುವುದು, ಗಿಡ ನೆಡುವುದು. ಮನೆಯಲ್ಲಿ ನಾನಾ ವಿಧವಾಗಿ ಅಡುಗೆ ಮಾಡಿ ಮೆಲ್ಲಲು ಇದೇ ಒಳ್ಳೆಯ ಸಮಯ.
– ಸಿಡ್ನಿ ಶ್ರೀನಿವಾಸ್‌

ಅಮೆರಿಕದಲ್ಲೂ ಹೊತ್ತಿದ ಹಣತೆ


ಅಮೆರಿಕದಲ್ಲಿ ಊಹಿಸಲಾಗದ ವೇಗದಲ್ಲಿ ಕೋವಿಡ್ 19 ವೈರಸ್ ಹಬ್ಬುತ್ತಿದ್ದರೂ, ನಾವಿರುವ ಇಲಿನಾಯ್ಸ್ ರಾಜ್ಯದಲ್ಲಿ ಇದರ ತೀವ್ರತೆ ಕಡಿಮೆ. ಏಕೆಂದರೆ ಇಲ್ಲಿಯ ಜನಸಾಂದ್ರತೆಯೇ ಕಡಿಮೆ. ದಿನನಿತ್ಯದ ವಸ್ತುಗಳ ಹೊರತಾಗಿ ಉಳಿದ ಅಂಗಡಿ, ಮಾಲ್‌ಗ‌ಳನ್ನು ಸರಕಾರವು ಆದೇಶಿಸಿ ಮುಚ್ಚಿಸಿದರೆ, ಮಂದಿರ, ಮಸೀದಿ ಚರ್ಚ್‌ ಇತ್ಯಾದಿಗಳನ್ನು ಸ್ವಯಂ ಮುಚ್ಚಿದ್ದಾರೆ. ಸರಕಾರವು ಲಾಕ್‌ಡೌನನ್ನು ಒತ್ತಾಯ ಪೂರ್ವಕವಾಗಿ ಜನರ ಮೇಲೆ ಹೇರಿಲ್ಲ. ಆದರೆ, ಜನರನ್ನು ನಾನಾ ವಿಧಗಳಿಂದ ಜಾಗೃತರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ನಾವು ಅನಗತ್ಯವಾಗಿ ಹೊರಗಡೆ ಎಲ್ಲೂ ಓಡಾಡುತ್ತಿಲ್ಲ.

ಹೊರಗಡೆ ಪ್ಯಾನಿಕ್‌ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ದೇಶವನ್ನೇ ಬಿಟ್ಟು ಹೊರಗಿರುವ ನಮಗೆ ಊರಿನಲ್ಲಿರುವವರ ಬಗೆಗಿನ ಕಾಳಜಿ ಹಾಗೂ ಅವರಿಗೆ ನಮ್ಮ ಮೇಲಿನ ಕಾಳಜಿ ಬಾಧಿಸದೇ ಇರದು. ಅದಕ್ಕೆ ನಿತ್ಯವೂ ಫೋನ್‌ನಲ್ಲೇ ಮಾತಾಡಿಕೊಂಡು, ನಾವು ಚೆನ್ನಾಗಿಯೇ ಇದ್ದೇವೆಂಬ ಧೈರ್ಯ ಅವರಿಗೂ ಕೊಡುತ್ತಿದ್ದೇವೆ, ನಾವೂ ತಂದುಕೊಳ್ಳುತ್ತಿದ್ದೇವೆ.

ಭಾರತದಲ್ಲಿ ಒಗ್ಗಟ್ಟಿನ ಪ್ರತೀಕವಾಗಿ ದೀಪ ಹಚ್ಚಿದಂತೆ, ಇಲ್ಲಿನ ಭಾರತೀಯರೂ ಮನೆಯಲ್ಲೇ ದೀಪ ಹಚ್ಚಿ ಪ್ರಾರ್ಥಿಸಿದೆವು. ಮನೆಯಲ್ಲಿ ಆರೋಗ್ಯಕರ ಸನ್ನಿವೇಶ, ಮಾತುಕಥೆ, ತಮಾಷೆ, ಆಟ, ಟೀವಿ, ಓದು ಈ ರೀತಿಯ ಮನರಂಜನೆಯಲ್ಲಿ ತೊಡಗಿಕೊಂಡು ಸಮಯ ಕಳೆಯುತ್ತಿದ್ದೇವೆ.
– ಗೋಪಾಲಕೃಷ್ಣ

ಸ್ಪೇನ್‌ನಿಂದ ರಾತ್ರೋ ರಾತ್ರಿ ಎಸ್ಕೇಪ್‌


ಅಂದು ಮಾರ್ಚ್‌ 10. ಯಾವ ಘಳಿಗೆಯಲ್ಲಿ ಎದ್ದಿದ್ದೆನೋ… ಸ್ಪೇನ್‌ನ ಮ್ಯಾಡ್ರಿಡ್‌ನ‌ಲ್ಲಿರುವ ಆಫೀಸಿಗೆ ಕಾಲಿಟ್ಟಾಕ್ಷಣ “ಬಾಸ್‌ ನಿಮ್ಮನ್ನು ತುರ್ತಾಗಿ ಮೀಟಿಂಗ್‌ಗೆ ಬರಲು ಹೇಳಿದ್ದಾರೆ’ ಎಂದಾಗ, ಗಾಬರಿಗೊಂಡೆ. ಸಹೋದ್ಯೋಗಿಗಳು ನಾನು ತಡವಾಗಿ ಬಂದಿದ್ದನ್ನು ನೋಡಿ, ಬಾಸ್‌ನಿಂದ ಬೈಸಿಕೊಳ್ಳುವ ಸ್ಥಿತಿಯನ್ನು ಊಹಿಸಿಕೊಂಡು ಖುಷಿಪಡುತ್ತಿದ್ದರು.

ಆದರೆ, ಕ್ಯಾಬಿನ್‌ ಒಳಗೆ ಕಾಲಿಟ್ಟಾಗ ಒಂದು ಅಚ್ಚರಿ ಕಾದಿತ್ತು. “ಕೋವಿಡ್ 19 ವೈರಸ್ ಇಡೀ ಸ್ಪೇನ್‌ ತುಂಬಾ ಹಬ್ಬುವ ಲಕ್ಷಣ ಕಾಣುತ್ತಿದೆ. ಆದಷ್ಟು ಬೇಗ ಈ ದೇಶವನ್ನು ಬಿಡಬೇಕು’ ಎಂದು ಸೂಚಿಸಿದರು. ನಾವೆಲ್ಲರೂ ಸಿಕ್ಕಸಿಕ್ಕ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು, ರಾತ್ರೋ ರಾತ್ರಿ ವಿಮಾನ ಏರಿಕೊಂಡು, ಅಬುದಾಭಿಯತ್ತ (ನಮ್ಮ ಕಂಪನಿಯ ಹೆಡ್‌ ಆಫೀಸ್‌ ಇರುವ ದೇಶ) ಬಂದೆವು.

ಏರ್‌ಪೋರ್ಟ್‌ನಿಂದ ಹೊರಬರುವಷ್ಟರಲ್ಲೇ, ನಾನಾ ಟೆಸ್ಟ್‌ಗಳಿಗೆ ಒಳಪಡಿಸಿ, ನಮ್ಮ ಅರ್ಧಜೀವ ತೆಗೆದಿದ್ದರು.ಅಲ್ಲಿಂದ ಹೊರಬಂದ ಮೇಲೆ, ಕಾಲಾಪಾನಿ ಜೈಲಿನಂತಿರುವ, ಯಾವುದೋ ಅಜ್ಞಾತ ಸ್ಥಳದ ಹೋಟೆಲ್‌ಗೆ ಕರೆದೊಯ್ದರು.

ರಾತ್ರಿಯಿಡೀ ಉಪವಾಸವಿದ್ದ ನಾವು, ಬೆಳಗ್ಗೆ ರೆಸ್ಟೋರೆಂಟ್‌ಗೆ ಹೋದರೆ, ಅಲ್ಲಿ ಸುದೀರ್ಘ‌ ಕ್ಯೂ. ಮತ್ತೆ ನಾವು ಹೊರಗೆ ಹೋಗಲಿಲ್ಲ. 15 ದಿನ ಕ್ವಾರಂಟೈನ್‌ನಲ್ಲೇ ಇದ್ದೆವು. ಈಗ ತಾನೆ ಆ ಬಂಧನ ಮುಗಿಸಿ, ಹೊರಗೆ ಬಂದರೆ, ಇಡೀ ಅಬುಧಾಬಿ ಲಾಕ್‌ಡೌನ್‌ ಆಗಿದೆ. ಜೈಲುವಾಸದ ಭಾಗ – 2 ಮುಂದುವರಿದಂತೆ ಅನ್ನಿಸುತ್ತಿದೆ.
– ಮಹೇಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next