Advertisement
ಕೋವಿಡ್ ವೈರಸ್ ಹಾವಳಿ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಶುಕ್ರವಾರದ ವೇಳೆಗೆ ಭಾರತದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಚೀನಕ್ಕಿಂತಲೂ ಹೆಚ್ಚಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆಯೋ ಎಂಬ ಆತಂಕವಂತೂ ಕಾಡುತ್ತಿದೆ.
Related Articles
Advertisement
ಆದಾಗ್ಯೂ ಜಗತ್ತಿನ ಅನೇಕ ಪರಿಣತರು ಭಾರತದಲ್ಲಿ ಎಪ್ರಿಲ್ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 2 ಲಕ್ಷ ದಾಟಲಿದೆ ಎಂದು ಹೇಳಿದ್ದರು. ಆದರೆ ತ್ವರಿತವಾಗಿ ದೇಶಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಸೋಂಕು ಹರಡುವಿಕೆಯ ಸರಪಳಿಗಂತೂ ಪೆಟ್ಟುಬಿದ್ದಿರುವುದು ತಿಳಿಯುತ್ತದೆ.
ಹಾಗೆಂದು ಖಂಡಿತ ನಾವು ನಿರಮ್ಮಳವಾಗಿ ಇರುವ ಅವಕಾಶವೇ ಇಲ್ಲ. ಏಕೆಂದರೆ ಲಾಕ್‌ಡೌನ್‌ನ ನಿಯಮಗಳಲ್ಲಿ ತುಸು ಸಡಿಲಿಕೆ ತರುತ್ತಿದ್ದಂತೆಯೇ ಜನರು ಢಾಳಾಗಿಯೇ ನಿಷ್ಕಾಳಜಿ ಮೆರೆಯಲಾರಂಭಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಉದಾಹರಣೆಯನ್ನೇ ನೀಡುವುದಾದರೆ ಕೆಲವೇ ದಿನಗಳಲ್ಲಿ ಬದಲಾಗಿರುವ ಪರಿಸ್ಥಿತಿಯಂತೂ ಆತಂಕ ಹುಟ್ಟಿಸುವಂತಿದೆ. ಕೆಲವೇ ದಿನಗಳ ಹಿಂದೆ, ಖಾಲಿ ಹೊಡೆಯುತ್ತಿದ್ದ ರಸ್ತೆಗಳೆಲ್ಲ ಈಗ ಟ್ರಾಫಿಕ್ ಜಾಮ್‌ನಿಂದ ತುಳುಕಲಾರಂಭಿಸಿವೆ.
ರಸ್ತೆಗಳಲ್ಲಿ ಜನ ಸಾಮಾಜಿಕ ಅಂತರದ ನಿಯಮವನ್ನು ಅವಗಣಿಸಿ ಗುಂಪುಗೂಡಿ ಅಡ್ಡಾಡುವುದು, ಒಂದೊಂದು ಬೈಕಿನಲ್ಲಿ ಇಬ್ಬರು ಮೂವರು ಕುಳಿತು ತಿರುಗಾಡುವುದು ನಿಜಕ್ಕೂ ಆತಂಕದ ವಿಷಯವೇ ಸರಿ. ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಇಂಥದ್ದೇ ಚಿತ್ರಣವಿರುವ ಬಗ್ಗೆ ವರದಿಯಾಗುತ್ತಿದೆ. ಅನೇಕರು, ಪೊಲೀಸರಿಂದ ಬೈಸಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮಾಸ್ಕ್ ಧರಿಸುತ್ತಿದ್ದಾರೆಯೇ ಹೊರತು, ಅದು ತಮ್ಮ ಹಾಗೂ ಸಮಾಜದ ಸುರಕ್ಷತೆಗೆ ಅಗತ್ಯ ಎಂದಲ್ಲ.
ಪರಿಸ್ಥಿತಿ ಹೀಗೇ ಮುಂದುವರಿದರೆ ನೋಡನೋಡುತ್ತಿರುವಂತೆಯೇ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಮ್ಮರವಾಗಿ ಬೆಳೆದು ನಿಲ್ಲುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಸರಕಾರ, ರಾಜ್ಯ ಸರಕಾರಗಳು, ಆರೋಗ್ಯ- ಪೊಲೀಸ್ ವ್ಯವಸ್ಥೆಗಳು ರೋಗ ಪ್ರಸರಣವನ್ನು ತಡೆಯಲು ಹಗಲೂ ರಾತ್ರಿ ಶ್ರಮಿಸುತ್ತಿವೆ.
ಆದರೆ ಜನರಲ್ಲಿನ ಅಸಡ್ಡೆ ಗುಣ ಈ ಪ್ರಯತ್ನಗಳಿಗೆಲ್ಲ ಎಲ್ಲಿ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿಬಿಡುತ್ತದೋ ಎಂಬ ಆತಂಕ ಎದುರಾಗಿದೆ. ಇನ್ನೇನು ಲಾಕ್‌ಡೌನ್‌ನ ಹೊಸ ಚರಣ ಆರಂಭವಾಗಲಿದೆ. ಆಗ ಮತ್ತಷ್ಟು ಕ್ಷೇತ್ರಗಳು ಕಾರ್ಯಾಚರಿಸಲಾರಂಭಿಸುತ್ತವೆ. ಹೀಗಾಗಿ ಗರಿಷ್ಠ ಎಚ್ಚರಿಕೆ ಅತ್ಯಗತ್ಯ.