Advertisement

ಕೋವಿಡ್ ‌ಚೆಕ್‌ ಪತ್ತೆಯಾಗದ ಸೋಂಕಿತರೆಷ್ಟೋ?

01:28 AM Jun 27, 2020 | Team Udayavani |

ಕೋವಿಡ್‌-19 ಸೋಂಕಿತರನ್ನು ಪತ್ತೆ ಹಚ್ಚುವ ಪ್ರಯತ್ನಕ್ಕೆ ವೇಗ ನೀಡಲಾಗಿದೆಯಾದರೂ, ಟೆಸ್ಟಿಂಗ್‌ ಪ್ರಮಾಣ ಎಲ್ಲಾ ರಾಜ್ಯಗಳಲ್ಲೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಕೆಲವು ರಾಜ್ಯಗಳಲ್ಲಂತೂ ಟೆಸ್ಟಿಂಗ್‌ ಹೆಚ್ಚಿಸಿದಷ್ಟೂ ಪಾಸಿಟಿವಿಟಿ ರೇಟ್‌ ಹೆಚ್ಚುತ್ತಾ ಸಾಗಿರುವುದನ್ನು ಗಮನಿಸಿದರೆ, ಅಲ್ಲೆಲ್ಲ ರೋಗ ಸಮುದಾಯ ಪ್ರಸರಣದ ಹಂತ ತಲುಪಿದೆಯೇ ಎಂಬ ಅನುಮಾನ ಕಾಡುತ್ತದೆ.

Advertisement

ಆಂಧ್ರದಲ್ಲಿ ಒಂದೇ ದಿನ 36 ಸಾವಿರ ಜನರ ಪರೀಕ್ಷೆ!
ಆಂಧ್ರಪ್ರದೇಶ ಜೂನ್‌ 24ರಂದು 36,047 ಪರೀಕ್ಷೆಗಳನ್ನು ನಡೆಸುವ ಮೂಲಕ ದೇಶದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು ಟೆಸ್ಟ್‌ಗಳನ್ನು ನಡೆಸಿದ ರಾಜ್ಯವಾಗಿ ದಾಖಲೆ ಬರೆಯಿತು. ಇದುವರೆಗೂ ಒಂದೇ ದಿನದಲ್ಲೇ ಅತಿಹೆಚ್ಚು ಟೆಸ್ಟ್‌ಗಳನ್ನು ತಮಿಳುನಾಡು ನಡೆಸಿತ್ತು.

ಜೂನ್‌ 20ರಂದು ತಮಿಳುನಾಡಲ್ಲಿ 33,231ಜನರನ್ನು ಪರೀಕ್ಷಿಸಲಾಗಿತ್ತು. ಇನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಒಂದೇ ದಿನ, ಅಂದರೆ ಜೂನ್‌ 24ರಂದೇ ಕೋವಿಡ್‌-19 ಪ್ರಕರಣಗಳ ಸಂಖ್ಯೆ 10 ಸಾವಿರದ ಗಟಿ ದಾಟಿತು. ಆದರೆ, ಆಂಧ್ರಪ್ರದೇಶದಲ್ಲಿ ಪರೀಕ್ಷೆಗಳ ಪ್ರಮಾಣ ನಮ್ಮಲ್ಲಿಗಿಂತ ಅಧಿಕವಿದೆ.


ಜೂನ್‌ 25ರ ವೇಳೆಗೆ ಆಂಧ್ರದಲ್ಲಿ 7 ಲಕ್ಷ 69 ಸಾವಿರ ಪರೀಕ್ಷೆಗಳು ನಡೆದಿದ್ದರೆ, ನಮ್ಮಲ್ಲಿ 5 ಲಕ್ಷ 53 ಸಾವಿರ ಜನರನ್ನು ಪರೀಕ್ಷಿಸಲಾಗಿದೆ. ಆಂಧ್ರದಲ್ಲಿ ಕೋವಿಡ್‌ನಿಂದಾಗಿ 146 ರೋಗಿಗಳು ಅಸುನೀಗಿದ್ದು, ಅಲ್ಲಿನ ಮರಣ ದರ 1.27 ಪ್ರತಿಶತವಿದ್ದರೆ, ಕರ್ನಾಟಕದಲ್ಲಿ ಮರಣ ದರ 1.61 ಪ್ರತಿಶತವಿದ್ದು, ಶುಕ್ರವಾರದ ವೇಳೆಗೆ 170 ಜನ ಕೋವಿಡ್ 19ನಿಂದ ಮೃತಪಟ್ಟಿದ್ದಾರೆ. ಜೂನ್‌ 20- ಜೂನ್‌ 25ರವರೆಗೆ ಆಂಧ್ರಪ್ರದೇಶವು 1 ಲಕ್ಷ 39 ಸಾವಿರ ಜನರನ್ನು ಪರೀಕ್ಷಿಸಿದ್ದರೆ, ಕರ್ನಾಟಕವು ಜೂನ್‌ 20-ಜೂನ್‌ 25ರವರೆಗೆ ಒಟ್ಟು 69 ಸಾವಿರ ಜನರನ್ನು ಪರೀಕ್ಷಿಸಿದೆ.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲೇ 5 ಸಾವಿರಕ್ಕೂ ಅಧಿಕ ಪ್ರಕರಣ
ರಾಜ್ಯದಲ್ಲಿ ಜೂನ್‌ 24ರಂದು ಒಟ್ಟು ಸೋಂಕಿತರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿತು. ಆದರೆ, ಇದರಲ್ಲಿ 50 ಪ್ರತಿಶತದಷ್ಟು ಪ್ರಕರಣಗಳು ಕೇವಲ ನಾಲ್ಕು ಜಿಲ್ಲೆಗಳಲ್ಲೇ ಪತ್ತೆಯಾಗಿವೆ.

ಒಂದೇ  ದಿನದಲ್ಲಿ ಅತಿಹೆಚ್ಚು ಟೆಸ್ಟ್‌ಗಳು


ಒಂದು ರಾಜ್ಯದಲ್ಲಿ ಒಂದೇ ದಿನ ಅತಿಹೆಚ್ಚು ಪರೀಕ್ಷೆಗಳು ನಡೆದಿವೆ ಎಂದಾಕ್ಷಣ ಅಲ್ಲಿನ ಟೆಸ್ಟಿಂಗ್‌ ಪ್ರಮಾಣ ಉಳಿದೆಡೆಗಿಂತ ಉತ್ತಮವಾಗಿದೆ ಎಂದೇನೂ ಅರ್ಥವಲ್ಲ. ಉದಾಹರಣೆಗೆ, ತೆಲಂಗಾಣದಲ್ಲಿ ಜೂನ್‌ 16ರಂದು 21 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ. ಇನ್ನೊಂದೆಡೆ ಕರ್ನಾಟಕ ಇದುವರೆಗೂ ಒಂದು ದಿನದಲ್ಲಿ 15,728 ಪರೀಕ್ಷೆಗಳನ್ನು ನಡೆಸಿರುವುದೇ ಅತಿಹೆಚ್ಚು. ಆದರೆ, ಒಟ್ಟು ಪರೀಕ್ಷೆಗಳ ಸಂಖ್ಯೆಯಲ್ಲಿ ರಾಜ್ಯದ ಟೆಸ್ಟಿಂಗ್‌ ಪ್ರಮಾಣ ತೆಲಂಗಾಣಕ್ಕಿಂತ ಅತ್ಯುತ್ತಮವಾಗಿದೆ. ಇದುವರೆಗೂ ತೆಲಂಗಾಣದಲ್ಲಿ ಕೇವಲ 70 ಸಾವಿರ ಟೆಸ್ಟ್‌ಗಳನ್ನಷ್ಟೇ ನಡೆಸಲಾಗಿದ್ದರೆ, ಕರ್ನಾಟಕದಲ್ಲಿ 5 ಲಕ್ಷ 53 ಸಾವಿರ ಪರೀಕ್ಷೆಗಳು ನಡೆದಿವೆ!

Advertisement

ಟೀಕೆ ಎದುರಿಸುತ್ತಿದೆ ಗುಜರಾತ್‌
ಗುಜರಾತ್‌ ರಾಜ್ಯ ಹಾಟ್‌ಸ್ಪಾಟ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ ಸಹ, ನಿತ್ಯ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸದೇ ಟೀಕೆಗೊಳಗಾಗುತ್ತಿದೆ. ಈಗಲೂ ನಿತ್ಯ ಸರಾಸರಿ 5 ಸಾವಿರ ಟೆಸ್ಟ್‌ಗಳನ್ನೇ ನಡೆಸುತ್ತಿರುವ ಗುಜರಾತ್‌ನಲ್ಲಿ ಇದುವರೆಗೂ 29 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರೆ, 1,754ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಾರೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ, ಗುಜರಾತ್‌ ಸರಕಾರ ಮಾತ್ರ ಈ ವಿಚಾರದಲ್ಲಿ ಮನಸ್ಸು ಬದಲಿಸುತ್ತಿಲ್ಲ. ಮೇ 16 ರಂದು 10 ಸಾವಿರ ಜನರನ್ನು ಪರೀಕ್ಷಿಸಿದ್ದೇ ಅಲ್ಲಿ ಅತೀ ಹೆಚ್ಚು! ಇದಷ್ಟೇ ಅಲ್ಲದೇ ಸೋಂ­ಕಿತರ ಸಂಖ್ಯೆಯನ್ನೂ ಅದು ಮುಚ್ಚಿಡುತ್ತಿದೆ ಎನ್ನುವ ಆರೋಪಗಳೂ ಎದುರಾಗುತ್ತಿವೆ.

ಟೆಸ್ಟ್‌ ಪಾಸಿಟಿವಿಟಿ ದರ ರಾಜ್ಯದಲ್ಲಿ ಹೇಗಿದೆ?


ಜೂನ್‌ 19ರಿಂದ ಜೂನ್‌ 25ರವರೆಗೆ ನಡೆದ ನಿತ್ಯ ಪರೀಕ್ಷೆಗಳಲ್ಲಿ ಟೆಸ್ಟ್‌ ಪಾಸಿಟಿವಿಟಿ ದರ ಸರಾಸರಿ 3.27ರಷ್ಟಿದೆ. ಅಂದರೆ ಈ ಏಳು ದಿನಗಳಲ್ಲಿ ನಡೆದ ಪ್ರತಿನೂರು ಪರೀಕ್ಷೆಗಳಲ್ಲಿ ಮೂವರಲ್ಲಷ್ಟೇ ಸೋಂಕು ಇರುವುದು ಪತ್ತೆಯಾಗಿದೆ.

ಒಂದೇ ದಿನದಲ್ಲಿ ದಾಖಲೆ ಪ್ರಕರಣ
ಅಮೆರಿಕದಲ್ಲಿ ಕೋವಿಡ್‌-19 ತೀವ್ರತೆ ಕಡಿಮೆಯಾಗುತ್ತಿದೆ ಎಂದು ಭಾಸವಾ ಗುತ್ತಿದ್ದ ಸಮಯದಲ್ಲೇ, ಕೆಲ ದಿನಗಳಿಂದ ಆ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ ಯಲ್ಲಿ ಮತ್ತೆ ಹಠಾತ್‌ ಏರಿಕೆ ಕಾಣಿಸಿಕೊಳ್ಳಲಾರಂಭಿಸಿದೆ. ಜೂನ್‌ 24ರಂದು ಅಮೆರಿಕದಲ್ಲಿ 37,945 ಪ್ರಕರಣಗಳು ಪತ್ತೆಯಾಗಿದ್ದು, ಎಂದೂ ಸಹ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರಲಿಲ್ಲ.

ಈ ಹಿಂದೆ, ಏಪ್ರಿಲ್‌ 24ರಂದು 35,930 ಸೋಂಕಿತರು ಪತ್ತೆಯಾದದ್ದೇ ಹೆಚ್ಚು. ಹೀಗಾಗಿ, ಅಮೆರಿಕದಲ್ಲಿ ಕೊರೊನಾ ಉತ್ತುಂಗ ಮುಗಿಯಿತು ಎಂದೇ ಭಾವಿಸಲಾಗಿತ್ತು! ಈಗಲೂ ಮಾಸ್ಕ್ ಧರಿಸಲು ನಿರಾಕರಿಸುವ ಅಮೆರಿಕ ಅಧ್ಯಕ್ಷ ಟ್ರಂಪ್‌, ‘ಕೋವಿಡ್ 19 ತೀವ್ರತೆ ಕಡಿಮೆಯಾಗುತ್ತಿದೆ, ಅದು ಹೊರಟುಹೋಗಲಿದೆ” ಎಂದು ಇತ್ತೀಚೆಗಷ್ಟೇ ಹೇಳಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next