Advertisement

ವಿಶ್ವ ಆರೋಗ್ಯ ಸಂಸ್ಥೆಗೆ ಹಣಕಾಸು ನೆರವು ಸ್ಥಗಿತಗೊಳಿಸಿದ ಅಮೆರಿಕಾ

02:57 AM Apr 16, 2020 | Hari Prasad |

ವಾಷಿಂಗ್ಟನ್‌: ಮಾರಣಾಂತಿಕ ಕೋವಿಡ್ 19 ವೈರಸ್‌ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ವಿಫ‌ಲವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಓ) ತಾತ್ಕಾಲಿಕವಾಗಿ ಹಣಕಾಸು ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದ್ದಾರೆ.

Advertisement

ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ವೈರಸ್ ನಿಯಂತ್ರಣ ನಿಟ್ಟಿನಲ್ಲಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಫ‌ಲವಾಗಿದೆ. ಇದಕ್ಕೆ ಸಂಸ್ಥೆ ಜವಾಬ್ದಾರಿ ಹೊರಬೇಕಿದೆ.

ಹೀಗಾಗಿ, ಸಂಸ್ಥೆಗೆ ಹಣಕಾಸು ನೆರವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಕೋವಿಡ್ ವೈರಸ್ ಸಾಂಕ್ರಾಮಿಕವನ್ನು ನಿಗ್ರಹಿಸುವಲ್ಲಿ ಸಂಸ್ಥೆಯ ಪಾತ್ರದ ಬಗ್ಗೆ ಪುನರ್‌ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಚೀನದಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ನಂತರ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ಸಂಸ್ಥೆ ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ, ಈ ಬಗ್ಗೆ ಸರಿಯಾದ ಮುನ್ನೆಚ್ಚರಿಕೆ ನೀಡುವಲ್ಲಿ, ನಿಗಾ ವಹಿಸುವಲ್ಲಿ ಅದು ವಿಫ‌ಲವಾಗಿದೆ.

ಚೀನದಲ್ಲಿನ ವಸ್ತು ಸ್ಥಿತಿಯನ್ನು ತಿಳಿಯಲು, ಅಲ್ಲಿನ ಪಾರದರ್ಶಕತೆಯ ಕೊರತೆಯನ್ನು ಅರಿಯಲು ವೈದ್ಯಕೀಯ ತಜ್ಞರನ್ನು ಕಳುಹಿಸಿದ್ದರೆ ವಿಶ್ವದ ಇತರ ರಾಷ್ಟ್ರಗಳಿಗೆ ಸೋಂಕು ಹರಡುವುದನ್ನು, ಇದರಿಂದಾಗುವ ಆರ್ಥಿಕ ನಷ್ಟವನ್ನು ತಡೆಯಬಹುದಿತ್ತು ಎಂದು ಅವರು ಆರೋಪಿಸಿದ್ದಾರೆ. ಅಮೆರಿಕ ಪ್ರತಿ ವರ್ಷ 400-500 ಮಿಲಿಯನ್‌ ಡಾಲರ್‌ನ್ನು (3057-3821 ಕೋಟಿ ರೂ.) ಡಬ್ಲ್ಯುಎಚ್‌ಓಗೆ ನೀಡುತ್ತದೆ.

Advertisement

ಸ್ಥಗಿತ ನಿರ್ಧಾರ ಸರಿಯಲ್ಲ

ಟ್ರಂಪ್‌ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೆರಸ್‌, ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಹಣಕಾಸು ನೆರವು ಸ್ಥಗಿತಗೊಳಿಸುವ ಅಮೆರಿಕದ ನಿಲುವು ಸರಿಯಲ್ಲ.

ಇಡೀ ವಿಶ್ವವೇ ಮಾರಕ ಕೋವಿಡ್ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರ ಮಹತ್ವದ್ದು. ಸಂಸ್ಥೆಯ ಕಾರ್ಯ ಮತ್ತು ಯೋಜನೆಗಳಿಗೆ ಅಡ್ಡಿಯಾಗಬಾರದು. ಸಂಸ್ಥೆಗೆ ಎಲ್ಲರೂ ಬೆಂಬಲವಾಗಿ ನಿಲ್ಲ ಬೇಕು. ಕೋವಿಡ್ ವೈರಸ್ ವಿರುದ್ಧ ಸಾಂಘಿಕ ಹೋರಾಟ ಅಗತ್ಯ ಎಂದು ಹೇಳಿದ್ದಾರೆ.

ಆರು ದಿನಗಳವರೆಗೂ ಎಚ್ಚರಿಕೆ ನೀಡದ ಚೀನ
ವುಹಾನ್‌: ಆರು ನಿರ್ಣಾಯಕ ದಿನಗಳವರೆಗೂ ಚೀನ, ಕೋವಿಡ್ ಸಾಂಕ್ರಾಮಿಕದ ಬಗ್ಗೆ ಜನರಿಗೆ ಎಚ್ಚರಿಕೆಯನ್ನೇ ನೀಡಲಿಲ್ಲ. ಇಲ್ಲಿಯ ಜನ ಅಪಾಯಕಾರಿ ಸಾಂಕ್ರಾಮಿಕದ ವಿಪತ್ತನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ಮನಗಂಡರೂ, ಜನರಿಗೆ ಬಹಿರಂಗವಾಗಿ ಮಾಹಿತಿ ನೀಡುವ ಮನಸ್ಸು ಮಾಡಲಿಲ್ಲ.

ಈ ನಿರ್ಣಾಯಕ ದಿನಗಳಲ್ಲೇ ವುಹಾನ್‌ನಲ್ಲಿ ಸಾವಿರಾರು ಮಂದಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಹೊಸ ವರ್ಷದ ಆಚರಣೆಗಾಗಿ ಲಕ್ಷಾಂತರ ಮಂದಿ ಬಸ್‌, ರೈಲು, ವಿಮಾನಗಳಲ್ಲಿ ಪ್ರಯಾಣ ಬೆಳೆಸಿದ್ದರು.

ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಮನಗಂಡ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, 7ನೇ ದಿನ, ಅಂದರೆ, ಜನವರಿ 20ರಂದು ಜನರಿಗೆ ಈ ಬಗ್ಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದರು. ಆದರೆ, ಅದಾಗಲೇ ಪರಿಸ್ಥಿತಿ ಕೈಮೀರಿತ್ತು. 3 ಸಾವಿರಕ್ಕೂ ಅಧಿಕ ಮಂದಿಯನ್ನು ಕೋವಿಡ್ ಸೋಂಕು ಆವರಿಸಿತ್ತು ಎಂಬ ಸಂಗತಿಯನ್ನು ಅಸೋಸಿಯೇಟೆಡ್‌ ಪ್ರೆಸ್‌ಗೆ ಸಿಕ್ಕಿರುವ ರಹಸ್ಯ ದಾಖಲೆಗಳು ಬಹಿರಂಗಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next