Advertisement

ಈ ತಿಂಗಳು ನಿರ್ಣಾಯಕ ; ಕೋವಿಡ್ ವಿರುದ್ಧ ‘ಮಾಡು ಇಲ್ಲವೇ ಮಡಿ’ಸ್ಥಿತಿಗೆ ತಲುಪಿದೆ ಭಾರತ

08:26 AM May 02, 2020 | Hari Prasad |

ಹೊಸದಿಲ್ಲಿ: ‘ಈ ತಿಂಗಳು ದೇಶಕ್ಕೆ ಕೋವಿಡ್ 19 ವೈರಸ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟವಾಗಿರಲಿದೆ.’ – ಹೀಗೆಂದು ಎಚ್ಚರಿಸಿರುವುದು ದೇಶದ ಪ್ರಮುಖ ವೈದ್ಯಕೀಯ ತಜ್ಞರು.

Advertisement

ದೇಶವ್ಯಾಪಿ ಲಾಕ್ ‌ಡೌನ್‌ನ ಗಡುವು ಸಮೀಪಿಸುತ್ತಿರುವಂತೆಯೇ, ಇಂಥದ್ದೊಂದು ಸಂದೇಶ ರವಾನಿಸಿರುವ ತಜ್ಞರು, ಮೇ ತಿಂಗಳು ನಮಗೆ ನಿರ್ಣಾಯಕವಾಗಿದ್ದು, ಹಾಟ್ ‌ಸ್ಪಾಟ್‌ಗಳಲ್ಲಿ ಕಠಿನ ನಿರ್ಬಂಧ ಮುಂದುವರಿಸಿ, ಹಸಿರು ವಲಯಗಳಲ್ಲಿ ಕೆಲವೊಂದು ಸಡಿಲಿಕೆಗಳೊಂದಿಗೆ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ರೈಲುಗಳು, ವೈಮಾನಿಕ ಸೇವೆ, ಅಂತಾರಾಜ್ಯ ಬಸ್‌ ಸಂಚಾರ, ಮಾಲ್‌ಗ‌ಳು, ಶಾಪಿಂಗ್‌ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ಮತ್ತಿತರ ಸಾರ್ವಜನಿಕ ಪ್ರದೇಶಗಳನ್ನು ಕನಿಷ್ಠ ಮೇ ತಿಂಗಳ ಅಂತ್ಯದವರೆಗಾದರೂ ಮುಚ್ಚಿರುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನೂ ಅವರು ಕೊಟ್ಟಿದ್ದಾರೆ.

ತಜ್ಞರ ವಾದವೇನು?: ಲಾಕ್‌ಡೌನ್‌ ಮಾಡಿದಾಕ್ಷಣ ವೈರಸ್‌ ಸಾಯುವುದಿಲ್ಲ. ಆದರೆ, ವೈರಸ್‌ ವ್ಯಾಪಿಸುವುದಕ್ಕೆ ಕಡಿವಾಣ ಬೀಳುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಹಾಗೆಯೇ, ಲಾಕ್‌ ಡೌನ್‌ ಅನ್ನು ಕೆಂಪು ವಲಯಗಳಲ್ಲಿ ಇನ್ನೂ 2-3 ವಾರಗಳ ಕಾಲ ವಿಸ್ತರಿಸಬೇಕು.

ಈ ತಿಂಗಳು ನಿರ್ಣಾಯಕವಾಗಿರುವ ಕಾರಣ, ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುವಂಥ ಪ್ರದೇಶಗಳಲ್ಲಿ ಕಠಿನ ನಿರ್ಬಂಧ ಮುಂದುವರಿಸಬೇಕಾಗುತ್ತದೆ ಎಂದು ನೋಯ್ಡಾದ ಫೋರ್ಟಿಸ್‌ ಆಸ್ಪತ್ರೆಯ ಹೆಚ್ಚುವರಿ ನಿರ್ದೇಶಕ ಡಾ| ರಾಜೇಶ್‌ ಕುಮಾರ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಸದ್ಯಕ್ಕೆ ತೆರೆಯಬಾರದು: ಹಸಿರು ಜಿಲ್ಲೆಗಳ ಗಡಿಗಳನ್ನು ಸದ್ಯಕ್ಕೆ ತೆರೆಯಬಾರದು ಹಾಗೂ ಹಾಟ್‌ ಸ್ಪಾಟ್‌ ಅಲ್ಲದ ಇಂಥ ಪ್ರದೇಶಗಳಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ನಿಯಮಗಳು ಜಾರಿಯಲ್ಲಿರಬೇಕು ಎಂದು ಸರ್‌ ಗಂಗಾರಾಂ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಅರವಿಂದ ಕುಮಾರ್‌ ಹೇಳಿದ್ದಾರೆ.

ಇನ್ನು, ಇಂಥ ಸಂದರ್ಭದಲ್ಲಿ ಜನರಿಗೆ ಹೆಚ್ಚು ರಿಲ್ಯಾಕ್ಸೇಷನ್‌ ಕೊಟ್ಟಿದ್ದೇ ಆದಲ್ಲಿ, ಪರಿಸ್ಥಿತಿ ಭಯಾನಕವಾಗಲಿದೆ ಎಂದು ಮ್ಯಾಕ್ಸ್‌ ಹೆಲ್ತ್‌ಕೇರ್‌ನ ಸಹಾಯಕ ನಿರ್ದೇಶಕರಾದ ಡಾ| ರೋಮೆಲ್‌ ಟಿಕೂ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಸೋಮವಾರ ಸಿಎಂಗಳೊಂದಿಗೆ ನಡೆಸಿದ ಸಂವಾದದ ವೇಳೆ ಪ್ರಧಾನಿ ಮೋದಿ ಅವರೂ, ಕೋವಿಡ್ ವಿರುದ್ಧದ ಹೋರಾಟದ ಜತೆಗೇ ದೇಶದ ಆರ್ಥಿಕತೆ ಮೇಲೆಯೂ ಗಮನ ಹರಿಸಬೇಕು ಎಂದಿದ್ದರು.

ದೇಶವ್ಯಾಪಿ ನಿರ್ಬಂಧ ಮೇ 3ರ ನಂತರವೂ ಮುಂದುವರಿಯಲಿದ್ದು, ಕೆಲವು ಜಿಲ್ಲೆಗಳಲ್ಲಿ ಕೆಲವೊಂದು ಸಡಿಲಿಕೆಗಳನ್ನು ಮಾಡಲಾಗುತ್ತದೆ ಎಂದು ಬುಧವಾರ ಕೇಂದ್ರ ಸರಕಾರವೇ ತಿಳಿಸಿತ್ತು. ಈಗ ತಜ್ಞರು ಕೂಡ ಸಂಪೂರ್ಣ ಸಡಿಲಿಕೆ ಮಾಡುವುದು ಅಪಾಯ ಎಂದು ಹೇಳಿದ್ದಾರೆ.

ಕರ್ನಾಟಕ ‘ಪಾಸಿಟಿವ್‌’ ಸುದ್ದಿ
ಕೋವಿಡ್ 19 ವೈರಸ್ ಹಿಮ್ಮೆಟ್ಟಿಸುವಲ್ಲಿ ಕರ್ನಾಟಕ ಉತ್ತಮ ಸಾಧನೆ ತೋರುತ್ತಿದೆ ಎಂದು ಕೇಂದ್ರ ಸರ್ಕಾರ ರಾಜ್ಯದ ಬೆನ್ನು ತಟ್ಟಿದೆ. ದೇಶದ ಇತರೆಡೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 11 ದಿನಗಳು ಬೇಕಿದ್ದರೆ, ಕರ್ನಾಟಕದಲ್ಲಿ ಸೋಂಕಿತರು ದ್ವಿಗುಣವಾಗುವ ದಿನಗಳು 21.6 ಆಗಿದೆ.

ಕರ್ನಾಟಕ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತಲೂ ಉತ್ತಮ ಸಾಧನೆ ತೋರಿವೆ ಎಂದು ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ. ಹಾಗೆಯೇ, ದೇಶದಲ್ಲಿ ಚೇತರಿಕೆ ಪ್ರಮಾಣ 25.19 ಇದ್ದರೆ, ಕರ್ನಾಟಕದಲ್ಲಿ ಇದು ಶೇ 40ನ್ನು ಮೀರಿದೆ.

ಗುಣಮುಖರಾಗುವ ಪ್ರಮಾಣ ಶೇ.25.19ಕ್ಕೆ ಏರಿಕೆ
ದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಗುರುವಾರ ಶೇ.25.19ಕ್ಕೇರಿದೆ. 14 ದಿನಗಳ ಹಿಂದೆ ಇದು ಶೇ.13.06 ಆಗಿತ್ತು ಎಂದು ಕೇಂದ್ರ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸದ್ಯದ ಮರಣ ಪ್ರಮಾಣ ಶೇ.3.2ರಷ್ಟಿದೆ.

ಸೋಂಕಿಗೆ ಬಲಿಯಾದವರ ಪೈಕಿ ಅರ್ಧದಷ್ಟು ಮಂದಿ 60 ವರ್ಷ ದಾಟಿದವರು. ಅದರಲ್ಲೂ ಶೇ.78ರಷ್ಟು ಮಂದಿ ಬೇರೆ ಬೇರೆ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ. ಜಾಗತಿಕವಾಗಿ ಸದ್ಯ ಕೋವಿಡ್ 19 ವೈರಸ್ ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.30.6 ಆಗಿದ್ದು, ಸಾವಿನ ಪ್ರಮಾಣ ಶೇ.7.1 ಆಗಿದೆ ಎಂದರು.

ಇದೇ ವೇಳೆ, ಪರೀಕ್ಷೆಯ ವಿಚಾರದಲ್ಲಿ ಎಲ್ಲ ಆಸ್ಪತ್ರೆಗಳೂ ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸಬೇಕು. ಕೋವಿಡ್ 19 ವೈರಸ್ ಇಲ್ಲದ ರೋಗಿಗಳನ್ನು ಪರೀಕ್ಷೆಗೆ ಒಳಗಾಗುವಂತೆ ಆಸ್ಪತ್ರೆಗಳು ಒತ್ತಡ ಹೇರಬಾರದು ಎಂದೂ ಸಚಿವಾಲಯ ಸೂಚಿಸಿದೆ.

24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,744 ಹೊಸ ಪ್ರಕರಣಗಳು ಪತ್ತೆಯಾಗಿದೆ. ಹೊಸತಾಗಿ 67 ಮಂದಿ ಅಸುನೀಗಿದ್ದಾರೆಂದು ಅಗರ್ವಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next