ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ನೂರಕ್ಕೂ ಹೆಚ್ಚು ಜನರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.
ಹಾಗಾಗಿ ಕೋವಿಡ್ 19 ಸೋಂಕುಪೀಡಿತ ಬಿಬಿಎಂಪಿ ಸಿಬ್ಬಂದಿಗಳ ಚಿಕಿತ್ಸೆಗಾಗಿ ತಕ್ಷಣವೇ ಪ್ರತ್ಯೇಕ ಆಸ್ಪತೆ ಮೀಸಲಿಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‍ರಾಜ್ ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಕೋವಿಡ್ 19 ಸೋಂಕಿನಿಂದ ಬಿಬಿಎಂಪಿಯ ಕಂದಾಯ ಪರಿವೀಕ್ಷಕರಾದ ನಟರಾಜ್ ಅವರು ಮೃತಪಟ್ಟಿದ್ದು, ಕೇಂದ್ರ ಸರ್ಕಾರ ಅನುಷ್ಠಾನ ಮಾಡಿರುವ ಯೋಜನೆಯಂತೆ ಅವರ ಕುಟುಂಬಕ್ಕೆ 30ಲಕ್ಷ ರೂ. ಜೀವವಿಮೆ ಮೊತ್ತವನ್ನು ನೀಡಬೇಕು.
ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ಹೀಗಾಗಿ, ಬಿಬಿಎಂಪಿ ಸಿಬ್ಬಂದಿಗೆ ಈ ಸೋಂಕು ತಗುಲುವ ಆತಂಕ ಹೆಚ್ಚಾಗಿದ್ದು, ಇವರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಡಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಆಯುಕ್ತರು ಸ್ಪಂದಿಸಿಲ್ಲ.
ಇನ್ನು ಸೋಂಕು ದೃಢಪಟ್ಟ ಬಿಬಿಎಂಪಿ ಸಿಬ್ಬಂದಿಯ ಕುಟುಂಬದವರ ಕ್ವಾರಂಟೈನ್‍ಗೆ ಪಂಚತಾರ ಹೋಟೆಲ್ ಮೀಸಲಿಡಬೇಕು ಎಂದು ಕೋರಿದ್ದಾರೆ. ಇಲ್ಲವಾದರೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಧಿಕಾರಿ ಹಾಗೂ ನೌಕರರು ಸಮೂಹಿಕ ರಜೆ ಹಾಕಿ, ಕೆಲಸಗಳನ್ನು ನಿಲ್ಲಿಸುವ ಮೂಲಕ ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.