ವೆಲ್ಲಿಂಗ್ಟನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 2020ರಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಾಗಲೇ ಮನೆಯಲ್ಲಿ ಪಾರ್ಟಿ ಮಾಡಿ ವಿವಾದ ಮೈಮೇಲೆ ಎಳೆದುಕೊಂಡದ್ದು ಹಳೆಯ ಕಥೆ. ಆದರೆ, ಇಲ್ಲೊಬ್ಬರು ಪ್ರಧಾನಿ ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ಕೇಸುಗಳ ಸಂಖ್ಯೆ ಕೇವಲ 84ಕ್ಕೆ ಏರಿಕೆಯಾಗುತ್ತಿದ್ದಂತೆಯೇ, ತಮ್ಮ ಮದುವೆಯನ್ನೇ ರದ್ದು ಮಾಡಿದ್ದಾರೆ!
ಇಂಥದ್ದೊಂದು ಅಪರೂಪದ ನಿರ್ಧಾರ ಕೈಗೊಂಡದ್ದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್. ತಮ್ಮ ದೀರ್ಘ ಕಾಲದ ಗೆಳೆಯ ಕಾರ್ಲೆ ಗೇಫೋರ್ಡ್ ಜತೆಗೆ ಅವರು ದಾಂಪತ್ಯ ಜೀವನ ಪ್ರವೇಶಿಸಬೇಕಾಗಿತ್ತು.
ಈ ಬಗ್ಗೆ ಅವರೇ ಖುದ್ದಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
“ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳಿಂದಾಗಿ ನನ್ನ ಮದುವೆ ರದ್ದುಗೊಳಿಸಿದ್ದೇನೆ. ದೇಶದಲ್ಲಿ ಕೊರೊನಾ ನಿಯಮಗಳು ಮತ್ತೆ ಕಟ್ಟುನಿಟ್ಟಿನಲ್ಲಿ ಜಾರಿಗೊಳ್ಳಲಿವೆ. ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ 100 ಮಂದಿಯ ಮಿತಿ ಹೇರಲಾಗಿದೆ’ ಎಂದರು.
ಒಮಿಕ್ರಾನ್ ರೂಪಾಂತರಿ ಹೆಚ್ಚುತ್ತಿರುವಂತೆಯೇ ನ್ಯೂಜಿಲೆಂಡ್‌ನಾದ್ಯಂತ ಮತ್ತೆ ಕಠಿಣ ಸೋಂಕು ಪ್ರತಿಬಂಧಕ ಕ್ರಮಗಳನ್ನು ಜೆಸಿಂಡಾ ನೇತೃತ್ವದ ಸರ್ಕಾರ ಜಾರಿಗೊಳಿಸಿದೆ. ಭಾನುವಾರದಿಂದಲೇ ಜಾರಿಗೆ ಬರುವಂತೆ ಸೀಮಿತ ಸಂಖ್ಯೆಯಲ್ಲಿ ಜನರು ಸೇರುವುದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮಗಳನ್ನು ಜಾರಿ ಮಾಡ ಲಾ ಗಿದೆ.