Advertisement

ಕೋವಿಡ್‌ 19 ನಿರ್ವಹಣೆಗೆ ಅಷ್ಟ ದಿಕ್ಪಾಲಕರು

06:23 AM Jul 10, 2020 | Lakshmi GovindaRaj |

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯದ ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಬಿಬಿಎಂಪಿಯ ಎಂಟು ವಲಯಗಳ ಉಸ್ತುವಾರಿಯನ್ನು ನಗರದ ಏಳು ಸಚಿವರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ  ಕಾರ್ಯದರ್ಶಿಯೊಬ್ಬರಿಗೆ ವಹಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿಕೋವಿಡ್‌ 19 ನಿಯಂತ್ರಣಕ್ಕೆ ಶನಿವಾರ ಹಾಗೂ ಭಾನುವಾರ ಲಾಕ್‌ ಡೌನ್‌ ಸೇರಿದಂತೆ ಕೆಲವು ಕ್ರಮಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ನಗರದ  ಎಂಟು ವಲಯಗಳಿಗೆ ಒಬೊಬ್ಬ ಸಚಿವರಿಗೆ ಉಸ್ತುವಾರಿ ವಹಿಸುವ ಬಗ್ಗೆ ತೀರ್ಮಾನಿಸಲಾಯಿತು.

Advertisement

ಎಂಟು ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿವಲಯಕ್ಕೆ ಒಬ್ಬ ಸಚಿವರುಗಳಂತೆ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ  ರಾಯಣ, ಸಚಿವರಾದ  ವಿ.ಸೋಮಣ್ಣ, ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್‌, ಎಸ್‌.ಟಿ.ಸೋಮಶೇಖರ್‌, ಕೆ.ಗೋಪಾಲಯ್ಯ, ಬಿ.ಎ. ಬಸವರಾಜು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌. ಆರ್‌.ವಿಶ್ವನಾಥ್‌  ಅವರನ್ನು ನೇಮಿಸಲಾಗಿದೆ ಎಂದು ಕೋವಿಡ್‌ 19 ಉಸ್ತುವಾರಿ ಹೊತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಪೂರ್ವ ವಲಯದ ಉಸ್ತುವಾರಿಯಾಗಿ ವಿ.ಸೋಮಣ್ಣ, ದಕ್ಷಿಣ ವಲಯಕ್ಕೆ ಆರ್‌.ಅಶೋಕ್‌, ರಾಜರಾಜೇಶ್ವರಿನಗರ ವಲಯಕ್ಕೆ ಎಸ್‌.ಟಿ. ಸೋಮಶೇಖರ್‌,  ದಾಸರಹಳ್ಳಿ ವಲಯಕ್ಕೆ ಕೆ.ಗೋಪಾಲಯ್ಯ, ಮಹದೇವಪುರ ವಲಯಕ್ಕೆ ಬಿ.ಎ.ಬಸವರಾಜು, ಯಲಹಂಕ ವಲಯಕ್ಕೆ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ಉಸ್ತುವಾರಿಯಾಗಿ  ನಿಯೋಜಿಸುವ ಸಾಧ್ಯತೆ ಇದೆ. ಪೂರ್ವ ವಲಯಕ್ಕೆ ಸಂಬಂಧಪಟ್ಟಂತೆ ವಿ.ಸೋಮಣ್ಣ, ಯಲಹಂಕಕ್ಕೆ ಸಂಬಂಧಪಟ್ಟಂತೆ ಎಸ್‌. ಆರ್‌.ವಿಶ್ವನಾಥ್‌ ಗುರುವಾರದಿಂದಲೇ ಸಭೆಗಳನ್ನು ನಡೆಸಲಾರಂಭಿಸಿದ್ದಾರೆ ಎನ್ನಲಾಗಿದೆ.

ಒಬ್ಬ ಹಿರಿಯ  ಐಎಎಸ್‌ ಅಧಿಕಾರಿ, ಕಾರ್ಪೊರೇಟರ್‌ ಗಳನ್ನೊಳಗೊಂಡ ಟಾಸ್ಕ್ಫೋರ್ಸ್‌ನ ತಂಡಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಟ್ರೇಸಿಂಗ್‌ ಮತ್ತು ಟ್ರ್ಯಾಕಿಂಗ್‌ ಮಾಡಲು ಕಷ್ಟಸಾಧ್ಯವಾಗಿದೆ. ಇನ್ನು ಮುಂದೆ ಇದನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸುಧಾಕರ್‌ ಹೇಳಿದರು.

ಎಂಟು ಐಎಎಸ್‌ ಅಧಿಕಾರಿಗಳಿಗೂ ಜವಾಬ್ದಾರಿ: ರಾಜಧಾನಿಯಲ್ಲಿ ಕೋವಿಡ್‌- 19 ಸೋಂಕು ಹರಡುವಿ  ಕೆಯನ್ನು ಪರಿಣಾಮಕಾರಿ ನಿಯಂತ್ರಣಕ್ಕಾಗಿ ಬಿಬಿಎಂ ಪಿಯ ಎಂಟು ವಲಯಗಳಲ್ಲಿ ಮೇಲ್ವಿಚಾರಣೆಗಾಗಿ ಎಂಟು ಮಂದಿ  ಹಿರಿಯ ಐಎಎಸ್‌ ಅಧಿಕಾರಿಗಳನ್ನು ವಲಯ ಸಂಯೋಜಕರಾಗಿ ಸರ್ಕಾರ ನಿಯೋಜಿಸಿದೆ. ನಗರದಲ್ಲಿ ಸೋಂಕು ನಿಯಂತ್ರಣ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ, ಪರಿಶೀಲನೆ ಹಾಗೂ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು  ಎಂಟು ವಲಯಗಳಿಗೆ ವಲಯ ಸಂಯೋಜಕರನ್ನಾಗಿ ಹಿರಿಯ ಐಎಎಸ್‌ ಅಧಕಾರಿಗಳನ್ನು ನಿಯೋಜಿಸಿ ಕಾರ್ಯೋನ್ಮುಖರಾಗುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಗುರುವಾರ ಆದೇಶ ಹೊರಡಿಸಿದ್ದಾರೆ.

Advertisement

ಈ ಎಂಟು  ಮಂದಿ ವಲಯ ಸಂಯೋಜಕರು ಬಿಬಿಎಂಪಿ ಆಯುಕ್ತರ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಬೇಕು. ಹಾಗೆಯೇ ಪಾಲಿಕೆಯ ಎಲ್ಲ ಜಂಟಿ ಆಯುಕ್ತರು, ಅಕಾರಿಗಳು, ಸಿಬ್ಬಂದಿ ಸರ್ಕಾರ ಹಾಗೂ ಸರ್ಕಾರದ ನಿಗಮ/ ಮಂಡಳಿಯ  ಅಧಿಕಾರಿ, ಸಿಬ್ಬಂದಿ ಕೂಡ ವಲಯ ಸಂಯೋಜಕರಿಗೆ ಅಗತ್ಯ ನೆರವು ನೀಡುವಂತೆಯೂ ಆದೇಶದಲ್ಲಿ ಸೂಚಿಸಿದ್ದಾರೆ.

ಶೂನ್ಯ ಮರಣ ಪ್ರಮಾಣ: ಬೆಂಗಳೂರಿನಲ್ಲಿ ಗುರುವಾರದಂದು 606 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಈಗಲೂ ರಾಜ್ಯದ ಮತ್ತು ಬೆಂಗಳೂರಿನ ಮರಣ ಪ್ರಮಾಣ ರಾಷ್ಟ್ರೀಯ  ಸರಾಸರಿಗಿಂತ ಕಡಿಮೆ ಇದೆ. ಶೂನ್ಯ ಮರಣಪ್ರಮಾಣ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು. 1ಲಕ್ಷ ಆಂಟಿಜೆನ್‌ ಕಿಟ್‌ ತರಿಸಲಾಗಿದ್ದು ವಾರಾಂತ್ಯದಲ್ಲಿ ಬೆಂಗಳೂರಿನಲ್ಲೇ 30-40 ಸಾವಿರ  ಟೆಸ್ಟ್‌  ನಡೆಸಲಾಗುವುದು ಇದರಿಂದ ಸೋಂಕಿತರ ತ್ವರಿತ ಪತ್ತೆಗೆ ಸಹಾಯವಾಗಲಿದೆ ಎಂದು ಡಾ.ಸುಧಾಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next