Advertisement

“ಮೈಮರೆತ ಇಟಲಿಯಲ್ಲಿ ಮರಣ ಮೃದಂಗ!’ಮಂಗಳೂರಿನ ವಿದ್ಯಾರ್ಥಿನಿಯ ನೋವಿನ ನುಡಿ

11:57 AM Apr 13, 2020 | sudhir |

ಮಂಗಳೂರು : “ಕೋವಿಡ್ ಮಹಾಮಾರಿಯಿಂದ ನಲುಗಿರುವ ಇಟಲಿ ಇನ್ನೂ ಪಾಠ ಕಲಿತಂತಿಲ್ಲ; ಜನರು ಗುಂಪು ಸೇರುವುದಕ್ಕೆ ಸಂಪೂರ್ಣ ತಡೆ ನೀಡಲು ಸಾಧ್ಯವಾಗಲಿಲ್ಲ. ಜತೆಗೆ ಇಟಲಿಯಲ್ಲಿ ಭಾರತ ಮಾದರಿಯ ಲಾಕ್‌ಡೌನ್‌ ಜಾರಿಗೊಳಿಸದ ಕಾರಣ ಮತ್ತಷ್ಟು ಅನಾಹುತಕ್ಕೆ ಕಾರಣವಾಯಿತು. ಮೈಮರೆತ ಇಟಲಿ ಇದೀಗ ಮರಣ ಮೃದಂಗ ಬಾರಿಸುತ್ತಿದೆ..!’

Advertisement

ಹೀಗೆಂದು ನೊಂದು ನುಡಿದವರು ಇಟಲಿಯಿಂದ ಭಾರತಕ್ಕೆ ಏರ್‌ಲಿಫ್ಟ್‌ ಆಗಿ ಹೊಸದಿಲ್ಲಿಯಲ್ಲಿ 14 ದಿನಗಳ ಕ್ವಾರಂಟೈನ್‌ ಮುಗಿಸಿ ಈಗ ಮಂಗಳೂರಿಗೆ ಬಂದಿರುವ ಸುರತ್ಕಲ್‌ ಕುಳಾಯಿ ನಿವಾಸಿ, ಶಿವರಾಮ್‌ ಭಟ್‌- ಡಾ| ಶೈಲಜಾ ವೈ. ದಂಪತಿಯ ಪುತ್ರಿ ಶ್ರೀಮಧು ಭಟ್‌.

ಲಘುವಾಗಿ ಪರಿಗಣಿಸಿದ್ದರು
“ಉದಯವಾಣಿ’ ಜತೆಗೆ ಇಟಲಿ ಅನುಭವ ನೆನಪಿಸಿಕೊಂಡಿರುವ ವಿದ್ಯಾರ್ಥಿನಿ ಶ್ರೀಮಧು, ನಾನು ಮಣಿಪಾಲ ಕಾಲೇಜಿನ ವೈರಾಲಜಿ ವಿಭಾಗದಲ್ಲಿ ಕಲಿತು, ಇಟಲಿಯ ಟ್ಯೂರಿನ್‌ ವಿ.ವಿ.ಯಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆರಳಿದ್ದೆ. ಚೀನದ ಕೋವಿಡ್ ಸುದ್ದಿ ತಿಳಿಯುತ್ತಲೇ ಇಟಲಿಯ ಬಹುತೇಕ ಜನರು ಇದೊಂದು ಸಾಮಾನ್ಯ ವೈರಲ್‌ ಜ್ವರ ಎಂದೇ ಭಾವಿಸಿದ್ದರು. ಈ ಕಾರಣಕ್ಕೆ ರೆಸ್ಟೋರೆಂಟ್‌ ಸಹಿತ ಅಲ್ಲಿನ ಎಲ್ಲ ಜನನಿಬಿಡ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಿರಲಿಲ್ಲ. ಫೆಬ್ರವರಿ ಕೊನೆಯವರೆಗೂ ಜನರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಅಂಗಡಿ ಮುಂಗಟ್ಟು ಎಂದಿನಂತೆಯೇ ಇತ್ತು. ನಗರಗಳ ನಡುವಿನ ಸಂಚಾರವೂ ಅಬಾಧಿತವಾಗಿತ್ತು. ಮುನ್ನೆಚ್ಚರಿಕೆ ವಹಿಸದ ಕಾರಣ ಇಟಲಿಯಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎನ್ನುತ್ತಾರೆ ಅವರು.

ಕೋವಿಡ್ ಸುದ್ದಿ ತಿಳಿದು ನಾನು ವಿ.ವಿ.ಗೆ ಹೋಗಲು ನಿರಾಕರಿಸಿದೆ. ಆದರೂ ಕೋವಿಡ್ ದಿಂದ ಯಾವುದೇ ಸಮಸ್ಯೆ ಇಲ್ಲ. ಏನೂ ಆಗಲ್ಲ; ಸಾಮಾನ್ಯ ಜ್ವರ. ವಯಸ್ಸು 80 ಕಳೆದವರಿಗೆ ಮಾತ್ರ ಇದರ ಪರಿಣಾಮವಿದೆ ಎಂದೇ ಹೇಳುತ್ತಿದ್ದರು. ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಇರಲೇ ಇಲ್ಲ. ಫೆಬ್ರವರಿ ಕೊನೆಯ ವೇಳೆಗೆ ಕೋವಿಡ್ ವ್ಯಾಪಕವಾಗಿ ಹರಡಿತು. ಮಾ. 10 ಕಳೆದ ಮೇಲೆ ಲಾಕ್‌ಡೌನ್‌ ಮಾಡಿದರು. ಆದರೆ ಆ ವೇಳೆಯಲ್ಲಿ ಕೋವಿಡ್ ಇಟಲಿಯ ಬಹುತೇಕ ಮನೆ ಮನೆಗೆ ಹರಡಿತ್ತು ಎಂದು ವಿವರಿಸಿದರು.

ಕೇಂದ್ರ ಸರಕಾರದ ನೆರವು
ಕೋವಿಡ್ ವ್ಯಾಪಿಸಿದಾಗ ಇಟಲಿಯವರಿಗೆ ಆರೋಗ್ಯ ಸೇವೆಯಲ್ಲಿ ಮೊದಲ ಆದ್ಯತೆ ಎಂದು ಅಲ್ಲಿನ ಸರಕಾರ ಹೇಳಿದಾಗ ಭಾರತೀಯರಿಗೆ ಭಯವಾಯಿತು. ನಾವು ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿ, ಏರ್‌ಲಿಫ್ಟ್ ಮಾಡುವಂತೆ ಕೋರಿದೆವು. ಅಲ್ಲಿ 218 ಜನ ಸಿಲುಕಿದ್ದೆವು. ಮಾ. 14ರಂದು ಕೇಂದ್ರ ಸರಕಾರ ನಮ್ಮನ್ನು ಮಿಲಾನ್‌ ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ಕರೆತಂದಿತು. ಅಲ್ಲಿನ ಸೇನಾ ಶಿಬಿರದಲ್ಲಿ 14 ದಿನಗಳ ಕ್ವಾರಂಟೈನ್‌ ವ್ಯವಸ್ಥೆ ಅತ್ಯುತ್ತಮವಾಗಿತ್ತು. ಪ್ರತೀದಿನ ಎರಡು ಬಾರಿ ಆರೋಗ್ಯ ತಪಾಸಣೆ, ಕೊಠಡಿ ಸ್ವತ್ಛತೆ, ಊಟ-ತಿಂಡಿ, ಇತರ ವ್ಯವಸ್ಥೆಗಳನ್ನು ನೀಡಲಾಗಿತ್ತು ಎಂದು ಶ್ಲಾ ಸಿದರು.

Advertisement

ಇಟಲಿಯಿಂದ ಏರ್‌ಲಿಫ್ಟ್‌ ಆಗಿ ಹೊಸದಿಲ್ಲಿಗೆ ಬಂದು ಅಲ್ಲಿ ಕ್ವಾರಂಟೈನ್‌ ಮುಗಿಸಿ ಇದೀಗ ಮನೆ ಸೇರಿಸಿದ್ದೇನೆ. ಕೋವಿಡ್ ವಿಶಿಷ್ಟ ಹಾಗೂ ವಿಭಿನ್ನ ಅನುಭವ ನೀಡಿದೆ. ಇಟಲಿಯಲ್ಲಿ ಫೆಬ್ರವರಿ ಕೊನೆಯಲ್ಲಿ ಹಠಾತ್ತಾಗಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದ್ದನ್ನು ನೋಡಿದರೆ ಭಯವಾಗಿತ್ತು. ಆದರೂ ಅವರು ಎಚ್ಚರಿಕೆ ವಹಿಸದೆ ಸಮಸ್ಯೆ ಉಲ್ಬಣಿಸಿತು. ನಮ್ಮ ದೇಶ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
– ಶ್ರೀಮಧು ಭಟ್‌, ಕುಳಾಯಿ

ಶಾಸಕ ಖಾದರ್‌ ಕಾರಿನಲ್ಲಿ ಮನೆಗೆ
ಹೊಸದಿಲ್ಲಿಯಲ್ಲಿ 14 ದಿನಗಳ ಕ್ವಾರಂಟೈನ್‌ ಮುಗಿಸಿ ಹೊರಡುವ ವೇಳೆಗೆ ಲಾಕ್‌ಡೌನ್‌ ಆಗಿತ್ತು. ಹೀಗಾಗಿ ಮಿಲಿಟರಿ ಕ್ಯಾಂಪ್‌ನಲ್ಲೇ ಇರುವಂತೆ ಸೂಚಿಸಿದರು. ಆದರೂ ವಿದೇಶಾಂಗ ಇಲಾಖೆ ಪತ್ರ ಬರೆದು, ಆಯಾ ರಾಜ್ಯದವರನ್ನು ಕರೆಸಿಕೊಳ್ಳುವಂತೆ ಕೋರಿತ್ತು. ಕರ್ನಾಟಕ ಮೂಲದ 21 ಜನರಿಗೆ (ಇಬ್ಬರು ಕ್ಯಾಂಪ್‌ನಲ್ಲಿದ್ದಾರೆ) ರಾಜ್ಯ ಸರಕಾರ ಬಸ್‌ ವ್ಯವಸ್ಥೆ ಮಾಡಿತ್ತು. ಹೊಸದಿಲ್ಲಿಯಿಂದ ಎ. 8ರಂದು ರಾತ್ರಿ ವಿಶೇಷ ಅನುಮತಿ ಪಡೆದು ಹೊರಟ ಬಸ್‌ ಉತ್ತರಪ್ರದೇಶ, ಮಧ್ಯಪ್ರದೇಶ ಮೂಲಕ ಎ. 11ರಂದು ಬೆಂಗಳೂರು ತಲುಪಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಬರುವುದೇ ಕಷ್ಟವಾಯಿತು. ವಾಹನಕ್ಕೆ ಜಿಲ್ಲಾಡಳಿತದ ಅನುಮತಿ ಬೇಕಿತ್ತು. ನನ್ನ ತಂದೆ ಹಲವು ಸಲ ಜಿಲ್ಲಾಡಳಿತವನ್ನು ಸಂಪರ್ಕಿಸಿದರೂ ಪಾಸ್‌ ಸಿಕ್ಕಿರಲಿಲ್ಲ. ಅಸಹಾಯಕರಾಗಿದ್ದ ನಮಗೆ ಶಾಸಕ ಯು.ಟಿ. ಖಾದರ್‌ ನೆರವಾದರು. ಅವರ ಕಾರಿನಲ್ಲೇ ಮನೆ ತನಕ ಬಿಟ್ಟರು ಎಂದು ಶ್ರೀಮಧು ಭಟ್‌ ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next