ಬೆಂಗಳೂರು: ಕೋವಿಡ್ 19 ಬಂದದ್ದರಿಂದ ಮನೆಬಿಟ್ಟು ಹೊರಗೆ ಬರಬಾರದು ಎಂದು ಸರಕಾರ ಹೇಳುತ್ತಿದೆ. ಆದರೆ ನೆರೆ ಹಾವಳಿಯಿಂದಾಗಿ ಈಗಾಗಲೇ ಬದುಕು ಬಯಲಿಗೆ ಬಿದ್ದಿದೆ. ಸರಕಾರದ ಆದೇಶ ಪಾಲಿಸುವುದಕ್ಕಾಗಿ ಬೀಗರ ಮನೆಗೆ ಬಂದಿದ್ದೇವೆ!
ಜಮಖಂಡಿಯ ತುಬಚಿ ಗ್ರಾಮದ ಮೀರಾಸಾಬ್ ನದಾಫ್ ಲಾಕ್‌ಡೌನ್‌ನಿಂದ ಉಂಟಾಗುತ್ತಿರುವ ಸಮಸ್ಯೆ ಯನ್ನು ಬಿಚ್ಚಿಟ್ಟಿದ್ದು ಹೀಗೆ.
ತುಬಚಿಯ ಮಹದೇವ ಕುಂಬಾರ ಅವರ ಸ್ಥಿತಿ ತುಸು ಭಿನ್ನ. ನೆರೆಯಿಂದಾಗಿ ಮನೆ ಭಾಗಶಃ ಬಿದ್ದಿದೆ. ಅದರ ದುರಸ್ತಿಗೆ ಸರಕಾರದ ಪರಿಹಾರ ಎದುರು ನೋಡಿದ್ದಾಯಿತು. ಬಳಿಕ ಸಾಲ ಮಾಡಿ, ಸ್ವಂತ ಖರ್ಚಿನಲ್ಲಿ ಕಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಕೋವಿಡ್ 19 ಅದಕ್ಕೂ ಕಲ್ಲುಹಾಕಿದೆ.
ಇದು ಕೇವಲ ಜಮಖಂಡಿಯ ಕತೆಯಷ್ಟೇ ಅಲ್ಲ; ಆರು ತಿಂಗಳ ಹಿಂದೆ ನೆರೆಹಾವಳಿಗೆ ತುತ್ತಾಗಿದ್ದ ಉತ್ತರ ಕರ್ನಾಟಕದ ಬಹುತೇಕ ತಾಲೂಕುಗಳ ವ್ಯಥೆ. ನೆರೆಯಿಂದ ಸಾವಿರಾರು ಮನೆಗಳು ನೆಲಸಮ ಆಗಿದ್ದು,ಇನ್ನೂ ತಲೆಯೆತ್ತಿಲ್ಲ. ಇದಕ್ಕಾಗಿ ಸರ ಕಾರದ ಪರಿಹಾರಕ್ಕಾಗಿ ಅಲೆದಾಡಿ ದ್ದಾಯ್ತು. ಬಂದ ಪುಡಿಗಾಸಿಗೆ ತಾವು ಗಳಿಸಿದ ಒಂದಷ್ಟು ಸೇರಿಸಿ ಸೂರು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ “ಲಾಕ್‌ಡೌನ್’ ಎದುರಾಗಿದೆ. ಹೀಗಾಗಿ ಅನಿ ವಾರ್ಯವಾಗಿ ಕೆಲವರು ಸಂಬಂಧಿಕರು, ಸ್ನೇಹಿತರ ಮನೆಗಳು ಅಥವಾ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದಾರೆ.
ಒಳಗಿದ್ದರೂ ಬರೆ; ಹೊರಬಂದರೂ ಬರೆ!
ಸಂತ್ರಸ್ತರಿಗೆ ಸರಕಾರ ತಗಡಿನ ಶೆಡ್ ನಿರ್ಮಿಸಿಕೊಟ್ಟಿದೆ. ಆದರೆ ಈ ಬೇಸಗೆಯ ತಾಪಮಾನದಲ್ಲಿ ಶೆಡ್ ಒಳಗೆ ವಾಸಿಸಿದರೆ ಜನತೆ ಸುಟ್ಟು ಸೀಕರಿಯಾಗುವ ಸ್ಥಿತಿ. ಹೊರಬಂದರೆ ಪೊಲೀಸರು ಲಾಠಿ ಬರೆ ಎಳೆಯುತ್ತಾರೆ ಎಂದು ದೇವದುರ್ಗದ ಸಿ. ಕುಮಾರ್ ಅಲವತ್ತುಕೊಂಡರು. ಬಿತ್ತಿ ಬೆಳೆದ ಕೃಷಿ ಸಂಪತ್ತು ಕೂಡ ಲಾಕ್‌ಡೌನ್‌ನಿಂದಾಗಿ ಬೀದಿ ಪಾಲಾಗುವ ಸ್ಥಿತಿಯಿದೆ ಎಂದು ಧಾರ ವಾಡದ ಆಯಟ್ಟಿ ನಿವಾಸಿ ಫಕ್ಕೀರಗೌಡ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
-ವಿಜಯಕುಮಾರ್ ಚಂದರಗಿ