Advertisement

ಕೋವಿಡ್-19 ಕಾರಣಕ್ಕೆ ಮೇಳಗಳ ಕೊನೆಯ ದೇವರ ಸೇವೆಗೆ ಅಡ್ಡಿ

11:20 PM May 25, 2020 | Sriram |

ಕೋಟ: ಕೋವಿಡ್-19 ಸಮಸ್ಯೆಯ ಕಾರಣಕ್ಕೆ ದೇಶದಲ್ಲಿ ವಿಧಿಸಲಾದ ಲಾಕ್‌ ಡೌನ್‌ನಿಂದಾಗಿ ಅವಿಭಜಿತ ದ.ಕ. ಜಿಲ್ಲೆಗಳ ತೆಂಕು ಹಾಗೂ ಬಡಗಿನ ಯಕ್ಷಗಾನ ಮೇಳಗಳ ತಿರುಗಾಟ ಸುಮಾರು 60-65ದಿನಗಳಿಂದ ಸ್ಥಗಿತಗೊಂಡಿದ್ದು ಇದೀಗ ವಾಡಿಕೆಯಂತೆ ಈ ಋತುವಿನ ತಿರುಗಾಟ ಅಂತ್ಯಗೊಳಿಸುವ ಸಮಯ ಸಮೀಪಿಸಿದೆ.

Advertisement

ಪ್ರತಿ ಮೇಳಗಳ ಕಲಾವಿದರು ತಮ್ಮ ಕೃಪಾಪೋಷಿತ ದೇಗುಲಗಳಲ್ಲಿ ಗೆಜ್ಜೆಕಟ್ಟಿ ದೇವರ ಸೇವೆಯೊಂದಿಗೆ ತಿರುಗಾಟ ಆರಂಭಿಸುವುದು ಹಾಗೂ ಅದೇ ಸ್ಥಳದಲ್ಲಿ ಕೊನೆಯ ದೇವರ ಸೇವೆ ಆಟದೊಂದಿಗೆ ಗೆಜ್ಜೆಬಿಚ್ಚಿ ತಿರುಗಾಟ ಮುಕ್ತಾಯಗೊಳಿಸುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಲಾಕ್‌ ಡೌನ್‌ನಿಂದಾಗಿ ಕೊನೆಯ ದೇವರ ಸೇವೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೆಜ್ಜೆ ಸೇವೆ ಎನ್ನುವ ಪರಿಕಲ್ಪನೆಯೊಂದಿಗೆ ಮೇಳಗಳು ತಮ್ಮ ಪ್ರದರ್ಶನ ಅಂತ್ಯಗೊಳಿಸುತ್ತಿವೆ.

ಈ ಹಿಂದೆ ಕೊನೆಯ ದೇವರ ಸೇವೆಯಂದು ಕ್ಷೇತ್ರದ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಮೇಳದ ಗಣಪತಿಗೆ ವಿಶೇಷ ಪೂಜೆ, ಇಡೀ ರಾತ್ರಿ ಪ್ರದರ್ಶನ ನಡೆಸುವ ಮೂಲಕ ತಿರುಗಾಟ ಕೊನೆಗೊಳ್ಳುತಿತ್ತು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಪ್ರದರ್ಶನಗಳನ್ನು ನಡೆಸುವಂತಿಲ್ಲ ಹಾಗೂ ಮೇಳದ ಎಲ್ಲಾ ಕಲಾವಿದರನ್ನು ಒಂದೆಡೆ ಗುಂಪು ಸೇರಿಸುವಂತಿಲ್ಲ. ಹೀಗಾಗಿ ವಾಡಿಕೆಯಂತೆ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ, ಮೇಳದ ಗಣಪತಿಗೆ ಪೂಜೆ ಸಲ್ಲಿಸಿ, ಎರಡುಪುರುಷ ವೇಷ ಹಾಗೂ ಎರಡು ಸ್ತ್ರೀವೇಷಗಳನ್ನು ದೇವರ ಎದುರಿಗೆ ಕುಣಿಸುವುದರ ಮೂಲಕ ಗೆಜ್ಜೆ ಸೇವೆ ನೀಡಿ ಪ್ರದರ್ಶನ ಕೊನೆಗೊಳಿಸುವ ಪರಿಕಲ್ಪನೆ ಅಳವಡಿಸಿಕೊಳ್ಳಲಾಗಿದೆ. ಈ ಸಂದರ್ಭ ಕಲಾವಿದರು, ಹಿಮ್ಮೇಳ ಹಾಗೂ ದೇಗುಲದ ಆಡಳಿತ ಸಮಿತಿಯವರು ಒಳಗೊಂಡಂತೆ ಕೇವಲ 10-15ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಕೊನೆಯ ಸೇವೆಯಲ್ಲಿ
ಭಾಗವಹಿಸಲಾಗದ ನೋವು
ಕಲಾವಿದನಾದವನು ಒಂದು ಮೇಳದಲ್ಲಿ ತಿರುಗಾಟ ಆರಂಭಿಸಿದ ಮೇಲೆ ಕೊನೆಯ ದೇವರ ಸೇವೆಯ ಪ್ರದರ್ಶನದಲ್ಲಿ ಭಾಗವಹಿಸಿ ಪ್ರದರ್ಶನವನ್ನು ಅಂತ್ಯಗೊಳಿಸಬೇಕು ಎನ್ನುವಂತದ್ದು ನಂಬಿಕೆಯಾಗಿದೆ. ಆದರೆ ಈ ಬಾರಿ ಎಲ್ಲಾ ಕಲಾವಿದರಿಗೆ ಕೊನೆಯ ದೇವರ ಸೇವೆಯಲ್ಲಿ ಗೆಜ್ಜೆಕಟ್ಟುವ ಅವಕಾಶ ಸಿಗುತ್ತಿಲ್ಲವಾದ್ದರಿಂದ ಮನಸ್ಸಲ್ಲಿ ಬೇಸರವಿದೆ. ಆದರೆ ಬೇರೆ ಸಂದರ್ಭದಲ್ಲಿ ಒಬ್ಬೊಬ್ಬರಾಗಿ ಸಾನಿಧ್ಯಕ್ಕೆ ಭೇಟಿ ನೀಡಿ ದೇವರಿಗೆ ಕೈಮುಗಿದು ಈ ವರ್ಷದ ತಿರುಗಾಟ ಅಂತ್ಯಗೊಳಿಸುವುದಾಗಿ ನಿವೇದಿಸಿಕೊಳ್ಳುತ್ತಿದ್ದಾರೆ.

ಸಂಪ್ರದಾಯಕ್ಕೆ ಸೀಮಿತ
ಮೇಳಗಳು ಕೊನೆಯ ದೇವರ ಸೇವೆ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳುವುದು ಸಂಪ್ರದಾಯ. ಆದರೆ ಈ ಬಾರಿ ಕೋವಿಡ್-19 ಕಾರಣದಿಂದ ಕೊನೆಯ ಪ್ರದರ್ಶನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎರಡು ಸ್ತ್ರೀವೇಷ, ಪುರುಷವೇಷ, ಹಿಮ್ಮೇಳದೊಂದಿಗೆ 10ನಿಮಿಷದ ಗೆಜ್ಜೆ ಸೇವೆ ನಡೆಸಿ ಪ್ರದರ್ಶನ ಅಂತ್ಯಗೊಳಿಸಲಾಗುತ್ತಿದೆ
-ಪಳ್ಳಿ ಕಿಶನ್‌ ಹೆಗ್ಡೆ, ನಾಲ್ಕು ಯಕ್ಷಮೇಳಗಳ ಯಜಮಾನರು

Advertisement
Advertisement

Udayavani is now on Telegram. Click here to join our channel and stay updated with the latest news.

Next