Advertisement

ಐಎಲ್‌ಎ ಲಕ್ಷಣ ಇರುವವರು ಕೋವಿಡ್‌-19 ತಪಾಸಣೆ: ಕೆ.ಸುಧಾಕರ್‌

09:35 PM Jun 11, 2020 | Sriram |

ಬೆಂಗಳೂರು: ಐಎಲ್‌ಐ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಜ್ವರ ತಪಾಸಣಾ ಕೇಂದ್ರಗಳಿಗೆ ತೆರಳಿ ತೋರಿಸಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್‌-19 ಪ್ರಕರಣಗಳ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಟ್ಟು ಕೋವಿಡ್‌-19 ಪ್ರಕರಣಗಳಲ್ಲಿ 50% ಜನರು ಗುಣಮುಖರಾಗಿದ್ದು ಮನೆಗೆ ಹಿಂದಿರುಗಿದ್ದಾರೆ. ಇನ್ನು ಉಳಿದ 50% ಪ್ರಕರಣಗಳಲ್ಲಿ 97% ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಉಳಿದ 3% ಸೋಂಕಿತರಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಹೆಚ್ಚಿನ ಸೋಂಕಿತರು ರೋಗ ತೀವ್ರವಾಗಿ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಕೊನೆಯ ಹಂತದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾವುದೇ ಲಕ್ಷಣ ಕಂಡುಬಂದಲ್ಲಿ ಮನೆಯಲ್ಲಿರುವ ಯುವಕರು ಜವಾಬ್ದಾರಿಯಿಂದ ತುರ್ತಾಗಿ ತಪಾಸಣೆ ಮಾಡಿಸುವಂತೆ ಸಚಿವರು ಕೋರಿದರು. ನಗರದಲ್ಲಿ ದೊಡ್ಡ ದೊಡ್ಡ ಸ್ಟೇಡಿಯಂಗಳನ್ನು ಕ್ವಾರಂಟೈನ್‌ ಕೇಂದ್ರವಾಗಿ ಮಾರ್ಪಾಡು ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ತಂಡ ರಚನೆ:
ರೋಗಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲು ಅನುವಾಗುವಂತೆ ಬಿಬಿಎಂಪಿ ವತಿಯಿಂದ 800 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಮನೆಮನೆಗೆ ತೆರಳಿ ರೋಗ ಲಕ್ಷಣವಿರುವವರ ಸಮಿಕ್ಷೆ ನಡೆಸಲಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ಕೋರಿದರು. ಇದರಿಂದಾಗಿ ಸೋಂಕಿತರ ಪತ್ತೆಗೆ ಅನುಕೂಲವಾಗಲಿದ್ದು, ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡಬಹುದು ಎಂದು ಹೇಳಿದರು.

ನಗರದಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂಟೈನ್‌ಮೆಂಟ್‌ ಪ್ರದೇಶಗಳು ಈಗ ಮೊದಲಿನಂತಿಲ್ಲ. ಅದರ ವ್ಯಾಖ್ಯಾನ ಬದಲಾಗಿದೆ. ಮೊದಲು ಪೂರ್ಣ ವಾರ್ಡ್‌ಗಳನ್ನು ಅಥವಾ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‌ಮೆಂಟ್‌ ಆಗಿ ಘೋಷಿಸಲಾಗುತ್ತಿತ್ತು. ಈಗ ಅದು ಕೇವಲ ಸೋಂಕಿತ ವ್ಯಕ್ತಿಯ ಮೆನೆಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ 1.2 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ 60 ಕಂಟೈನ್‌ಮೆಂಟ್‌ ಜೋನ್‌ ಹೆಚ್ಚೇನು ಅಲ್ಲ ಎಂದು ಹೇಳಿದರು.

Advertisement

ನಗರದಲ್ಲಿ ಕೋವಿಡ್‌-19 ಅಲ್ಲದ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಕೋವಿಡ್‌-19 ಅಲ್ಲದ ಚಿಕಿತ್ಸೆಗಾಗಿ ಮುಕ್ತವಾಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರಥಮ ಹಂತದಲ್ಲಿ ಬೋರಿಂಗ್‌ ಆಸ್ಪತ್ರೆಯನ್ನು ಕೋವಿಡ್‌ ಅಲ್ಲದ ರೋಗಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next