Advertisement

ಕೋವಿಡ್‌ 19 ಸೋಂಕು; ಕರ್ನಾಟಕ 11ನೇ ಸ್ಥಾನಕ್ಕೆ

07:50 AM Jun 05, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯವಾರು ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನಕ್ಕೇರಿದೆ. ಗುರುವಾರ ಮಧ್ಯಾಹ್ನದವರೆಗೂ ರಾಜ್ಯ 12ನೇ ಸ್ಥಾನದಲ್ಲಿತ್ತು.  ಸಂಜೆ 287 ಸೋಂಕು ಪ್ರಕರಣಗಳೊಂದಿಗೆ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 4,320ಕ್ಕೆ ಹೆಚ್ಚಳವಾಗಿದ್ದು, ರಾಜ್ಯವಾರು ಪಟ್ಟಿ ಯಲ್ಲಿ ಆಂಧ್ರ ಪ್ರದೇಶವನ್ನು ಹಿಂದಿಕ್ಕಿ ಒಂದು  ಸ್ಥಾನ ಮೇಲೇರಿದೆ. ಬಿಹಾರ 4,420 ಪ್ರಕರಣಗಳೊಂದಿಗೆ  10ನೇ ಸ್ಥಾನದಲ್ಲಿ, ಆಂಧ್ರಪ್ರದೇಶ 4,112 ಪ್ರಕರಣಗಳೊಂದಿಗೆ 12ನೇ ಸ್ಥಾನದಲ್ಲಿದೆ.

Advertisement

ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆ: ಈ ನಡುವೆ, ಗುರುವಾರದ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ ಕೋವಿಡ್‌ 19 ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆಯಾಗಿದೆ. ಈ ಪೈಕಿ 2,651 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೆ  1,610 ಮಂದಿ ಗುಣ ಮುಖರಾಗಿದ್ದಾರೆ. ಬಾಕಿ 59ರಲ್ಲಿ 57 ಮಂದಿ ಚಿಕಿತ್ಸೆ ಫ‌ಲಕಾರಿ ಯಾಗದೆ, ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಗುರುವಾರದ 257 ಪ್ರಕರಣಗಳಲ್ಲಿ 155 ಮಂದಿ ಹೊರ ರಾಜ್ಯದಿಂದ, ಒಬ್ಬರು  ಹೊರದೇಶದಿಂದ ಬಂದಿದ್ದು, 101ಮಂದಿ ಸ್ಥಳೀಯರಾಗಿದ್ದಾರೆ. ಅತಿ ಹೆಚ್ಚು ಉಡುಪಿಯಲ್ಲಿ 92, ರಾಯಚೂರಲ್ಲಿ 88 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಮಂಡ್ಯ (15), ಹಾಸನ (15) ದಾವಣಗೆರೆ (13)ಹಾಗೂ ಬೆಳಗಾವಿ ಯಲ್ಲಿ (12) ಎರಡಂಕಿಯಷ್ಟು ಪ್ರಕರಣಗಳು ವರದಿಯಾಗಿವೆ.

ಸೋಂಕಿತರು ಗುಣಮುಖ: ರಾಜ್ಯದಲ್ಲಿ ಗುರುವಾರ 106 ಮಂದಿ ಕೋವಿಡ್‌ 19 ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 1,610ಕ್ಕೆ ತಲುಪಿದೆ. ಮಂಡ್ಯದಲ್ಲಿ 52, ಉಡುಪಿಯಲ್ಲಿ 20, ದಕ್ಷಿಣ ಕನ್ನಡದಲ್ಲಿ 11,  ದಾವಣಗೆರೆಯಲ್ಲಿ 7, ಚಿಕ್ಕಮಗಳೂರಿನಲ್ಲಿ 5, ಶಿವಮೊಗ್ಗದಲ್ಲಿ 4, ಬಳ್ಳಾರಿಯಲ್ಲಿ 3, ಧಾರವಾಡದಲ್ಲಿ 2, ವಿಜಯಪುರ, ಮೈಸೂರಿನಲ್ಲಿ ತಲಾ ಒಬ್ಬ ಸೋಂಕಿತರು ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ  2,651 ಮಂದಿಯಲ್ಲಿ 13 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗುರುವಾರ ನಡೆದ ಒಟ್ಟು 12,268 (ಒಟ್ಟು ಇಲ್ಲಿಯವರಗೂ 3,47,093) ಸೋಂಕು ಪರೀಕ್ಷೆಗಳು ನಡೆಸಿದ್ದು, ಪಾಸಿಟಿವ್‌ -257,  ನೆಗೆಟಿವ್‌-11,468 ವರದಿ ಬಂ ದಿವೆ. ಸದ್ಯ ರಾಜ್ಯದಲ್ಲಿ 37,733 ಮಂದಿ ನಿಗಾವಣೆಯಲ್ಲಿದ್ದಾರೆ.

ಉಡುಪಿ ಮತ್ತೆ ಅಗ್ರಸ್ಥಾನಕ್ಕೆ; ಉಡುಪಿಯಲ್ಲಿ ದಿನದ ಅತಿ ಹೆಚ್ಚು 92 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಮತ್ತೆ ಜಿಲ್ಲಾವಾರು ಸೋಂಕಿತರ  ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ 150 ಸೋಂಕಿತರೊಂದಿಗೆ ಮೊದಲ  ಸ್ಥಾನದಲ್ಲಿದ್ದ ಉಡುಪಿ ಬುಧವಾರದ ಮಟ್ಟಿಗೆ ಕೆಳಗಿಳಿದಿತ್ತು. ಕಲಬುರಗಿ ಮೊದಲ ಸ್ಥಾನಕ್ಕೆ ಬಂದಿತ್ತು. ಗುರುವಾರ ಕಲಬುರಗಿಯಲ್ಲಿ ಯಾವುದೇ ಪ್ರಕರಣಗಳಿಲ್ಲದ ಕಾರಣ ಮತ್ತು ಉಡುಪಿಯಲ್ಲಿ 92 ಮಂದಿ ಸೋಂಕಿತರು ಕಂಡು ಬಂದ  ಹಿನ್ನೆಲೆ ಮತ್ತೆ ಅಗ್ರಸ್ಥಾನಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 564 ಸೋಂಕು ಪ್ರಕರಣಗಳಿದ್ದು, 481 ಸಕ್ರಿಯ ಪ್ರಕರಣಗಳಿವೆ.

76 ಮಂದಿಗೆ ಸೋಂಕು, ಇಲಾಖೆ ಲೋಪ: ರಾಯಚೂರಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು 88 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಮಹಾರಾಷ್ಟ್ರದಿಂದ ಬಂದು ಸೋಂಕಿತರಾದ ಐದು ಮಂದಿಯಿಂದ ಬರೋಬ್ಬರಿ 76 ಮಂದಿಗೆ  ಸೋಂಕು ಹರಡಿದೆ. ಮಹಾರಾಷ್ಟ್ರ ಹಿನ್ನೆಲೆಯವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ. ಆದರೂ, ಅವರಿಂದ ಸ್ಥಳೀಯ ಮಟ್ಟದಲ್ಲಿ ಸೋಂಕು ಹರಡಿರುವುದು ಆತಂಕ ಮೂಡಿಸಿದೆ. ಆರೋಗ್ಯ ಇಲಾಖೆಯಿಂದ ಕ್ವಾರಂಟೈನ್‌  ಲೋಪವಾಗಿರುವುದು ಮತ್ತು ಸೋಂಕಿತರು ಮನೆಗೆ ತೆರಳಿದ ನಂತರ ಸೋಂಕು ಪರೀಕ್ಷೆ ವರದಿ ಬಂದಿರುವುದು ಸ್ಥಳೀಯರಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next