Advertisement

6 ತಿಂಗಳು ಕೋವಿಡ್-19 ಸೋಂಕು ಮುಂದುವರೆಯಲಿದೆ: ಅಶೋಕ್‌

08:14 PM Jun 29, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಇನ್ನೂ 6 ತಿಂಗಳು ಕೋವಿಡ್-19 ಸ್ಥಿತಿ ಮುಂದುವರೆಯಲಿದೆ. ಇದು ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಜ್ಞರ ವರದಿ ಪ್ರಕಾರ ಜುಲೈ ಆಗಸ್ಟ್‌ನಲ್ಲಿ ಕೋವಿಡ್-19 ಸೋಂಕು ಇನ್ನೂ ಗಂಭೀರವಾಗಲಿದೆ. ಸೋಂಕಿತರಿಗೆ ಗುಣಮಟ್ಟದ ಊಟ, ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಕೋವಿಡ್-19 ಜತೆ ಬದುಕುವುದು ಅನಿವಾರ್ಯ ಆಗಲಿದೆ. ಆದರೆ, ಸಾರ್ವಜನಿಕರಿಗೆ ಆತಂಕ ಬೇಡ ಎಂದು ಹೇಳಿದರು.

ವೈದ್ಯರು. ವೈದ್ಯಕೀಯ ಸಿಬ್ಬಂದಿ ಮುಂದಿನ ಆರು ತಿಂಗಳು ಇದೇ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಹಜ್‌ ಭವನಗಳಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ. ವೈದ್ಯರ ಅವಶ್ಯಕತೆ ಇರುವುದರಿಂದ, ವೈದ್ಯರು ಸಾರ್ವಜನಿಕ ಸಂಪರ್ಕಾಧಿಕಾರಿ ಕೆಲಸ ಮಾಡುವಂತಿಲ್ಲ, ಅವರ ಬದಲು ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಿಸಲು ಸೂಚಿಸಿದ್ದೇವೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ 7 ದಿನ ಹೋಟೆಲ್‌ ಗಳಲ್ಲಿ ಕ್ವಾರಂಟೈನ್‌ ಗೆ ಸೌಲಭ್ಯ ಒದಗಿಸುತ್ತೇವೆ. ಯಾರೇ ಕೋವಿಡ್‌ ವಾರ್ಡ್‌ ಗೆ ಹೋಗುವಾಗ ಅವರ ಹುದ್ದೆಯ ಸ್ಟಿಕ್ಕರ್‌ ಹಾಕಿಕೊಂಡು ಹೋಗುವುದು ಕಡ್ಡಾಯ ಮಾಡಲಾಗಿದೆ.

ವೈದ್ಯರು ವಾರ್ಡ್‌ ಗೆ ಬರುತ್ತಿಲ್ಲ ಎಂಬ ದೂರು ಇತ್ತು. ಹೀಗಾಗಿ ತಪಾಸಣೆಯ ವಿಡಿಯೋ ರೆಕಾರ್ಡ್‌ ಮಾಡಿ ಮುಖ್ಯಸ್ಥರಿಗೆ ಕಳುಹಿಸುವಂತೆ ಸೂಚಿಸಲಾಗಿದೆ .

Advertisement

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಧ್ಯ 550 ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ 7 ಸಾವಿರಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೋವಿಡ್-19 ನಿಯಂತ್ರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ 85 ಸಹಾಯಕ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತೇವೆ. 20 ಹೊಸ ತಹಶಿಲ್ದಾರ್‌ ರನ್ನು ಕೋವಿಡ್‌ ಸೆಂಟರ್‌ ಗಳಿಗೆ ಉಸ್ತುವಾರಿಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ.

ನಗರದಲ್ಲಿ ಕೋವಿಡ್‌ ಸೆಂಟರ್‌ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ. ಮೃತರ ಸಾಗಾಟಕ್ಕೆ ಒಂದು ವಲಯಕ್ಕೆ ಎರಡು ಶಾಂತಿ ವಾಹನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಅನುದಾನ ಲಭ್ಯ
ಎಸ್‌ ಡಿಆರ್‌ ಎಫ್‌ ಅಡಿಯಲ್ಲಿ 742 ಕೋಟಿ ಅನುದಾನ ಲಭ್ಯ ಇದೆ. ಜಿಲ್ಲಾಧಿಕಾರಿಗಳಿಗೆ 232 ಕೋಟಿ, ಆರೋಗ್ಯ ಇಲಾಖೆಗೆ 70 ಕೋಟಿ, ಬಿಬಿಎಂಪಿಗೆ 50 ಕೋಟಿ ಹಣ ಬಿಡುಗಡೆಯಾಗಿದೆ. ಒಟ್ಟು 380 ಕೋಟಿ ಬಿಡುಗಡೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next