ಗದಗ: ಹೆಚ್ಚುತ್ತಿದ್ದ ಕೋವಿಡ್ 19 ಪಾಸಿಟಿವ್ ಪ್ರಕರಣಗಳಿಂದಾಗಿ ರೆಡ್ ಝೋನ್‌ನತ್ತ ಸಾಗಿದ್ದ ಜಿಲ್ಲೆಯು ಜಿಮ್ಸ್ ವೈದ್ಯರ ಪರಿಶ್ರಮದಿಂದಾಗಿ ಸೋಂಕಿತ ಐವರಲ್ಲಿ ನಾಲ್ಕು ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸೋಂಕಿತರು ಶನಿವಾರ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.
ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು (ಪಿ-370, ಪಿ-396, ಪಿ-514) ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಈ ವೇಳೆ ಹೂಗುತ್ಛ, ಹಣ್ಣು ಹಂಪಲು, ಮಾಸ್ಕ್, ಸ್ಯಾನಿಟೈಸರ್, ಆಹಾರ ಸಾಮಗ್ರಿ ಸಹಿತ ಅವಶ್ಯ ವಸ್ತುಗಳನ್ನು ನೀಡಿ ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್. ಭೂಸರೆಡ್ಡಿ ಶುಭ ಕೋರಿದರು. ಈ ವೇಳೆ ನೆರೆದಿದ್ದ ಜಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ, ಬೀಳ್ಕೊಟ್ಟರು.
ಗ್ರೀನ್ ಝೋನ್‌ನತ್ತ: ದೇಶಾದ್ಯಂತ ಮಹಾಮಾರಿ ರಣಕೇಕೆ ಹಾಕುತ್ತಿದ್ದರೂ, ಏ. 6 ರವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣ ಇರಲಿಲ್ಲ. ಆದರೆ ಏ. 7ರಂದು ಇಲ್ಲಿನ ರಂಗನವಾಡದ 82 ವರ್ಷದ ವೃದ್ಧೆ(ಪಿ. 166) ಗೆ ಮೊದಲು ಸೋಂಕು ಪತ್ತೆಯಾಗಿತ್ತು. ಏ. 9ರಂದು ಪಿ. 166 ಕಾರ್ಡಿಕ್ ಅರೆಸ್ಟ್‌ನಿಂದ ಮೃತಪಟ್ಟರು. ಆ ನಂತರ ಒಂದು ವಾರದ ಬಳಿಕ ವೃದ್ಧೆಯ ದ್ವಿತೀಯ ಸಂಪರ್ಕದಲ್ಲಿದ್ದ ಎದುರು ಮನೆಯ 59 ವರ್ಷದ(ಪಿ. 304) ಮಹಿಳೆಗೆ ಸೋಂಕು ಕಾಣಿಸಿಕೊಂಡಿತ್ತು. ಏ. 17ರಂದು ರಂಗನವಾಡ ಪ್ರದೇಶದ 42 ವರ್ಷದ ಪುರುಷ (ಪಿ.370), ಅದೇ ಬಡಾವಣೆಯಲ್ಲಿ ಏ. 20ರಂದು 24 ವರ್ಷದ ಪುರುಷ(ಪಿ.396) ಹಾಗೂ ಗಂಜಿಬಸವೇಶ್ವರ ವೃತ್ತ ಪ್ರದೇಶದಲ್ಲಿ ಏ. 25ರಂದು 75 ವರ್ಷದ ವ್ಯಕ್ತಿ(ಪಿ-514) ಗೆ ಸೋಂಕು ಇರುವುದು ದೃಢಪಟ್ಟಿತ್ತು. ಸೋಂಕಿತರ ಸಂಖ್ಯೆ ಐದಕ್ಕೆ ಏರಿದ್ದರಿಂದ ಜಿಲ್ಲೆಯಲ್ಲಿ ಸಹಜವಾಗಿಯೇ ಆತಂಕ ಶುರುವಾಗಿತ್ತು. ಆದರೆ ಸೋಂಕಿತರಿಗೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಗದಿತ ಕೋವಿಡ್-19 ಆಯುಷ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಮೇ 1ರಂದು ಪಿ. 307 ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ಇನ್ನುಳಿದ ಪಿ.370, ಪಿ. 396, ಪಿ. 514 ಕೂಡ ಗುಣಮುಖರಾಗಿದ್ದು, ಜಿಲ್ಲೆಯ ಜನತೆಗೆ ಸಮಾಧಾನ ತಂದಿದೆ.