Advertisement

“ಕೋವಿಡ್‌-19 ಸೋಂಕಿತ ಗುಣಮುಖನಾಗಿರುವ ಕಾರಣ ಸೀಲ್‌ಡೌನ್‌ ಸಡಿಲಿಕೆ’

10:25 PM May 31, 2020 | Sriram |

ಕೋಟ: ಕೋವಿಡ್‌-19 ಸೋಂಕಿಗೊಳಗಾಗಿ ಇದೀಗ ಗುಣಮುಖ ರಾಗಿರುವ ಬ್ರಹ್ಮಾವರ ಪೊಲಿಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ವಾಸವಿದ್ದ ವಡ್ಡರ್ಸೆ ಎಂ.ಜಿ. ಕಾಲನಿ ಹಾಗೂ ಯಾಳಕ್ಲು ಪ್ರದೇಶದ ಸೀಲ್‌ಡೌನ್‌ ತೆರವುಗೊಳಿಸಬೇಕು ಎನ್ನುವ ಸ್ಥಳೀಯರ ಮನವಿ ಮೇರೆಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವಿವಾರ ವಡ್ಡರ್ಸೆ ಗ್ರಾ.ಪಂ.ನಲ್ಲಿ ಸಭೆ ನಡೆಸಿ ವಿವಿಧ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

Advertisement

ಇಲ್ಲಿನ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದ್ದು 200ಕ್ಕೂ ಹೆಚ್ಚು ಮನೆಗಳಿಗೆ ಒಂದು ವಾರದಿಂದ ಸಂಚಾರ ಸ್ಥಗಿತಗೊಂಡಿದೆ ಹಾಗೂ ನಿತ್ಯ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು ಇನ್ನಿತರರಿಗೆ ಸಮಸ್ಯೆಯಾಗಿದೆ. ಇದೀಗ ಹೆಡ್‌ ಕಾನ್‌ಸ್ಟೆಬಲ್‌ ಅವರು ಸೋಂಕಿನಿಂದ ಗುಣಮುಖವಾಗಿದ್ದು ಕುಟುಂಬದವರಿಗೂ ಸೋಂಕು ತಗಲಲಿಲ್ಲ ಎನ್ನುವುದು ದೃಢವಾಗಿದೆ. ಆದ್ದರಿಂದ ಶೀಘ್ರವಾಗಿ ಇಲ್ಲಿನ ಸೀಲ್‌ಡೌನ್‌ ತೆರವುಗೊಳಿಸಿ ಸಹಜ ಜೀವನಕ್ಕೆ ಸಹಕರಿಸಬೇಕು ಎಂದು ಸ್ಥಳೀಯರು ಈ ಸಂದರ್ಭ ಸಚಿವರಿಗೆ ಮನವಿ ಸಲ್ಲಿಸಿದರು.

ಪರಿಶೀಲಿಸಿ ಕ್ರಮ
ಏಕಾಏಕಿಯಾಗಿ ಸೀಲ್‌ಡೌನ್‌ ತೆರವು ಗೊಳಿಸಲು ಸಾಧ್ಯವಿಲ್ಲ ಹಾಗೂ ಅದಕ್ಕೆ ಸರಕಾರದ ಒಪ್ಪಿಗೆ ಅಗತ್ಯವಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಆ ಪ್ರದೇಶವನ್ನು ಸರ್ವೆ ನಡೆಸಿ ಹೊಸ ಮಾರ್ಗಸೂಚಿಯಂತೆ 100 ಮೀ. ಅಥವಾ ಗುಂಪು ಮನೆಗಳನ್ನು ಸೀಲ್‌ಡೌನ್‌ ಮಾಡುವ ರೀತಿಯಲ್ಲಿ ತಹಶೀಲ್ದಾರರ ಮೂಲಕ ಎ.ಸಿ.ಯವರಿಗೆ ಮನವಿ ಸಲ್ಲಿಸಬೇಕು. ಅನಂತರ ಎ.ಸಿ.ಯವರು ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ವರ್ಗಾಯಿಸಲಿದ್ದಾರೆ ಹಾಗೂ ಸರಕಾರದ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಕಂದಾಯ ಇಲಾಖೆಯವರು ತತ್‌ಕ್ಷಣ ಈ ಕುರಿತು ವರದಿ ಸಿದ್ಧಪಡಿಸಿ ಎ.ಸಿ. ಮತ್ತು ಡಿ.ಸಿ.ಯವರ ಜತೆ ನಾನು ಚರ್ಚೆ ನಡೆಸುತ್ತೇನೆ ಎಂದು ಸಚಿವರು ತಿಳಿಸಿದರು. ಸ್ಥಳೀಯರು ತಮ್ಮ ಸಮಸ್ಯೆಗಳ ಕುರಿತು ತಿಳಿಸಿದರು.

ತಹಶೀಲ್ದಾರ್‌ ಕಿರಣ್‌ ಗೋರಯ್ಯ ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆ ಹೇಮಾ, ವಾರ್ಡ್‌ ಸದಸ್ಯ ಕೋಟಿ ಪೂಜಾರಿ, ಗ್ರಾ.ಪಂ. ಸದಸ್ಯರು. ತಾ.ಪಂ. ಸದಸ್ಯ ಗುಂಡು ಶೆಟ್ಟಿ, ಸಾೖಬ್ರಕಟ್ಟೆ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಜಯಶೀಲ್‌ ಆಚಾರ್ಯ, ಪಿಡಿಒ ಉಮೇಶ್‌, ಆಶಾ, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಅರ್ಹ ಕುಟುಂಬಗಳಿಗೆ ಆಹಾರದ ಕಿಟ್‌
ಸೀಲ್‌ಡೌನ್‌ ಆಗಿರುವ ಪ್ರದೇಶದ ಜನರಿಗೆ ಹಲವು ದಿನಗಳಿಂದ ಕೆಲಸವಿಲ್ಲದೆ ಸಾಕಷ್ಟು ಸಮಸ್ಯೆಯಾಗಿದ್ದು,ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಗ್ರಾ.ಪಂ. ಪಿಡಿಒ ಅವರ ಮೂಲಕ ಅರ್ಹ ಕುಟುಂಬಗಳನ್ನು ಗುರುತಿಸಲು ತಿಳಿಸಿದ್ದು ಈಗಾಗಲೇ 160 ಕುಟುಂಗಳನ್ನು ಗುರುತಿಸಲಾಗಿದೆ. ಇವರೆಲ್ಲರಿಗೆ ಶಾಸಕರು ಪಡಿತರ ಕಿಟ್‌ಗಳನ್ನು ವಿತರಿಸುವ ಭರವಸೆ ನೀಡಿದ್ದಾರೆ ಎಂದು ಗ್ರಾ.ಪಂ. ಸದಸ್ಯರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next