ನವದೆಹಲಿ:ಕಳೆದ 24ಗಂಟೆಯೊಳಗೆ ದೇಶದಲ್ಲಿ 1,68, 912 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶ ತಿಳಿಸಿದ್ದು, ಇದರೊಂದಿಗೆ ಭಾರತ ಬ್ರೆಜಿಲ್ ಅನ್ನು ಹಿಂದಿಕ್ಕಿ, ಜಗತ್ತಿನಲ್ಲಿಯೇ ಅತೀ ಹೆಚ್ಚು ಕೋವಿಡ್ ಪ್ರಕರಣ ಹೊಂದಿರುವ ಎರಡನೇ ದೇಶವಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಹೋದರನ ಕಾರು ಹರಿದು ಇಬ್ಬರ ಸಾವು!
ಭಾರತದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 13.53ಕ್ಕೆ ಏರಿಕೆಯಾಗಿದೆ. ಬ್ರೆಜಿಲ್ ನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 13.45 ಮಿಲಿಯನ್ ಎಂದು ರಾಯಿಟರ್ಸ್ ವರದಿ ಮಾಡಿದೆ. ಭಾರತದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 170,179ಕ್ಕೆ ಏರಿಕೆಯಾಗಿದೆ ಎಂದು ಅಂಕಿ ಅಂಶ ತಿಳಿಸಿದೆ.
ಅಮೆರಿಕ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ(31.2ಮಿಲಿಯನ್) ಮೊದಲ ಸ್ಥಾನದಲ್ಲಿದೆ. ಕೋವಿಡ್ 19 ಸೋಂಕು ಪ್ರಕರಣ ದಿನೇ, ದಿನೇ ಹೆಚ್ಚಳವಾಗುತ್ತಿರುವ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿವೆ.
ಮಹಾರಾಷ್ಟ್ರದಲ್ಲಿ ತೀವ್ರಗತಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುಳಿವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಸರ್ವಪಕ್ಷ ಸಭೆ ನಡೆಸಿದ್ದರು. ಏಪ್ರಿಲ್ 14ರಂದು ಲಾಕ್ ಡೌನ್ ಜಾರಿ ಬಗ್ಗೆ ಠಾಕ್ರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.