ಭಾರತದಲ್ಲಿ ಕೋವಿಡ್-19 ಹರಡಲು ಮುಸ್ಲಿಂ ಸಮುದಾಯದವರೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಯಾಗಿತ್ತು. ಇದ ರಿಂದಾಗಿ ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ತಪ್ಪು ತಿಳಿವಳಿಕೆ ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆ ರಾಷ್ಟ್ರಗಳ ಪ್ರತಿನಿಧಿಗಳ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದಾರೆ.
ಇಂಥ ಕಿತಾಪತಿ ಶುರು ಮಾಡಿದ್ದು ಪಾಕಿಸ್ತಾನ. ಅದನ್ನು ನಂಬಿದ ಕೆಲವು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದವು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ನಕಲಿ ಪೋಸ್ಟ್‌ಗಳೇ ಈ ವಿವಾದ ಸೃಷ್ಟಿ ಯಾಗಲು ಕಾರಣ ಎಂಬುದನ್ನು ಪ್ರಧಾನಿ, ಸಚಿವ ಜೈಶಂಕರ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಲಾಕ್‌ಡೌನ್ ಹಿಂಪಡೆವವರೆಗೂ ಅರಬ್ ದೇಶಗಳಲ್ಲಿನ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕೊಲ್ಲಿ ರಾಷ್ಟ್ರಗಳಿಗೆ ಭಾರತ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದೂ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವರು ಮಾತುಕತೆ ವೇಳೆ ವಾಗ್ಧಾನ ಮಾಡಿದ್ದಾರೆ. ವಿದೇಶಾಂಗ ಸಚಿವ ಜೈ ಶಂಕರ್ ಕೊಲ್ಲಿ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆಗಿನ ಮಾತುಕತೆ ವೇಳೆ ಪಾಕಿಸ್ತಾನದ ಸುಳ್ಳು ಮಾಹಿತಿ ಜಾಲಕ್ಕೆ ಬಲಿಯಾಗಬಾರದು. ರಂಜಾನ್ ಅವಧಿಯಲ್ಲಿ ಅಗತ್ಯವಾಗಿರುವ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಲಿ ಬೀಳಬೇಡಿ: ಒಮಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿರುವ ಮನು ಮುನಾವರ್ ಸಂದರ್ಶನವೊಂದರಲ್ಲಿ ಮಾತನಾಡಿ ಒಮಾನ್‌ನಲ್ಲಿರುವ ಭಾರತೀಯ ಸಮುದಾಯದವರು ತಪ್ಪು ಮಾಹಿತಿಯಿಂದ ಕೂಡಿದ ಜಾಲ ತಾಣ ಸಂದೇಶಗಳನ್ನು ನಂಬಬಾರದು ಎಂದಿದ್ದಾರೆ. ಎರಡೂ ದೇಶಗಳ ನಡುವೆ ಸೌಹಾರ್ದಯುತ ಬಾಂಧವ್ಯ ಇದೆ ಎಂದಿದ್ದಾರೆ. ಯುಎಇನಲ್ಲಿರುವ ಭಾರತದ ರಾಯಭಾರಿ ಪವನ್ ಕಪೂರ್ ಕೂಡ ಕೆಲ ದಿನಗಳ ಹಿಂದೆ ಇದೇ ರೀತಿ ಮನವಿ ಮಾಡಿದ್ದರು.