Advertisement

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

12:43 PM Jun 07, 2020 | sudhir |

ಸಿಂಗಾಪುರ: ಪುಟ್ಟ ರಾಷ್ಟ್ರವಾಗಿದ್ದರೂ ಆರ್ಥಿಕವಾಗಿ ಪ್ರಬಲವಾಗಿದ್ದ ಸಿಂಗಾಪುರಕ್ಕೆ ಕೋವಿಡ್‌ ವೈರಸ್‌ ಇನ್ನಿಲ್ಲದ ಕಾಟ ಕೊಟ್ಟಿದೆ. ಇದರಿಂದಾಗಿ ಉದ್ಭವವಾದ ಆರ್ಥಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಿಂಗಾಪುರಕ್ಕೆ ವರ್ಷಗಳೇ ಬೇಕು ಎಂದು ಅಲ್ಲಿನ ಉಪಪ್ರಧಾನಿ ಹೆಂಗ್‌ ಸ್ವೀ ಕಿಯಾಟ್‌ ಅವರು ಹೇಳಿದ್ದಾರೆ.

Advertisement

ಶನಿವಾರ ಅಲ್ಲಿ 344 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 37,527ಕ್ಕೇರಿದೆ.

ಕೋವಿಡ್‌ನಿಂದಾಗಿ ಸಿಂಗಾಪುರದ ಕಾರ್ಮಿಕರು, ಉದ್ಯೋಗ, ವ್ಯವಹಾರದ ಮೇಲೆ ತೀವ್ರ ಹಾನಿಯಾಗಿದೆ ಎಂದು ಕಿಯಾಟ್‌ ಅವರು ಸಂಸತ್ತಿನಲ್ಲೂ ಪ್ರಸ್ತಾವಿಸಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದಾದ ಹಾನಿಯನ್ನು ಸರಿದೂಗಿಸಲು ನೆರವಿನ ಕ್ರಮವೊಂದರಲ್ಲಿ 22,110 ಕೋ. ರೂ.ಗಳ ಪ್ಯಾಕೇಜ್‌ ಒಂದನ್ನು ಅಂಗೀಕರಿಸಲಾಗಿದೆ. ಇದೇ ವೇಳೆ ಸಂಭಾವ್ಯ ಕ್ರಮಗಳು, ಆರ್ಥಿಕ ಚೇತರಿಕೆ ಕ್ರಮಗಳ ಬಗ್ಗೆ ಜೂ.7ರಿಂದ ಜೂ.20ರ ವರೆಗೆ ಪ್ರಧಾನಿ ಲೀ ಹಸೈನ್‌ ಲೂಂಗ್‌ ಮತ್ತು ಅವರ ಸಂಪುಟದ ಸಚಿವರು ದೇಶವನ್ನುದ್ದೇಶಿಸಿ ಹಲವು ವಿಚಾರಗಳನ್ನು ರಾಷ್ಟ್ರೀಯ ಚಾನೆಲ್‌ನಲ್ಲಿ ಪ್ರಸ್ತಾವಿಸಲಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಶನಿವಾರ ಪತ್ತೆಯಾದ ಪ್ರಕರಣ ಗಳಲ್ಲಿ ಹೆಚ್ಚಿನ ಪ್ರಕರಣಗಳು ಡಾರ್ಮಿ ಟರಿಗಳಲ್ಲಿ ವಾಸವಿರುವ ವಿದೇಶಿ ಪ್ರಜೆಗಳಲ್ಲಿ ಕಂಡುಬಂದಿದೆ. ಇನ್ನು ಮೂರು ಮಂದಿ ವಿದೇಶಿಯರು ಸಿಂಗಾಪುರದ ಪೌರತ್ವ ಪಡೆದವರಾಗಿದ್ದಾರೆ. ಅಲ್ಲಿ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 24,209ಕ್ಕೂ ಹೆಚ್ಚಾಗಿದ್ದು, 24 ಮಂದಿ ಮೃತಪಟ್ಟಿದ್ದಾರೆ.

ಟ್ರ್ಯಾಕಿಂಗ್‌ ಉಪಕರಣ
ಇದರೊಂದಿಗೆ ಕಾಯಿಲೆ ಇನ್ನಷ್ಟು ವ್ಯಾಪಕವಾಗುವುದನ್ನು ತಡೆಗಟ್ಟಲು ಸಂಪರ್ಕ ಪತ್ತೆಹಚ್ಚುವ ಧರಿಸುವ ಸಾಧನಗಳನ್ನು ಬಳಸಲು ಅಲ್ಲಿನ ಸರಕಾರ ಉದ್ದೇಶಿಸಿದೆ. ಇದರಿಂದ ಸಾಮುದಾಯಿಕವಾಗಿ ಸೋಂಕು ಇನ್ನಷ್ಟು ಹರಡುವುದನ್ನು ತಪ್ಪಿಸಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಯಶಸ್ವಿಯಾಗಿದ್ದೇ ಆದಲ್ಲಿ, ಇಡೀ ಸಿಂಗಾಪುರದಲ್ಲಿರುವ ಜನರಿಗೆ ವಿತರಿಸುವ ಯೋಜನೆ ಇದೆ ಎಂದು ಸ್ಮಾರ್ಟ್‌ ನೇಷನ್‌ ಯೋಜನೆಯ ಉಸ್ತುವಾರಿ, ಸಚಿವ ಭಾರತ ಮೂಲದ ವಿವಿಯನ್‌ ಬಾಲಕೃಷ್ಣನ್‌ ಅವರು ಹೇಳಿದ್ದಾರೆ. ಈ ಉಪಕರಣವನ್ನು ಧರಿಸಿಕೊಂಡಾಗ ಅದು ಸೋಂಕಿತರು ಹತ್ತಿರ ಬಂದರೆ ಎಚ್ಚರಿಸುತ್ತದೆ.

Advertisement

ಅಲ್ಲದೇ ನಿರ್ದಿಷ್ಟ ಉಪಕರಣ ಬಳಿ ಎಷ್ಟು ಮಂದಿ ಹತ್ತಿರ ಬಂದಿದ್ದಾರೆ ಎಂದು ಹೇಳುತ್ತದೆ. ಬ್ಲೂಟೂತ್‌ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next