Advertisement

ಕೋವಿಡ್‌-19: ಅಗತ್ಯ ಚಿಕಿತ್ಸಾ ಸೌಲಭ್ಯ ಸ್ಥಾಪನೆ; ಠಾಕ್ರೆ

08:23 AM Jun 13, 2020 | Suhan S |

ಪುಣೆ, ಜೂ. 12: ಕೋವಿಡ್‌ -19 ರೋಗಿಗಳ ಚಿಕಿತ್ಸೆಗಾಗಿ ಅಲ್ಪಾವಧಿಯಲ್ಲಿ ಸಾಕಷ್ಟು ಸಂಖ್ಯೆಯ ಆರೋಗ್ಯ ಸೌಲಭ್ಯಗಳನ್ನು ಸ್ಥಾಪಿಸುವಲ್ಲಿ ರಾಜ್ಯ ಸರಕಾರವು ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹೇಳಿದ್ದಾರೆ.

Advertisement

ಪುಣೆಯ ಹಿಂಜವಾಡಿ ಐಟಿ ಪಾರ್ಕ್‌ ನಲ್ಲಿ ವಿಪ್ರೋ ಲಿಮಿಟೆಡ್‌ ಅಭಿವೃದ್ಧಿಪಡಿಸಿದ ಕೋವಿಡ್‌ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್‌ -19 ಪ್ರಕೋಪದ ಆರಂಭಿಕ ಹಂತದಲ್ಲಿ ರಾಜ್ಯದ ಆರೋಗ್ಯ ಮೂಲಸೌಕರ್ಯಗಳು ಸಮರ್ಪಕವಾಗಿರಲಿಲ್ಲ. ಆದರೆ ಈಗ ನಾವು ಸಾಕಷ್ಟು ಸಂಖ್ಯೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಅತ್ಯಾಧುನಿಕ ಸೌಲಭ್ಯದಿಂದ ಜನರಿಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರು ನುಡಿದರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲೂ ಇದೇ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸರಕಾರವು ಹಣವನ್ನು ಖರ್ಚು ಮಾಡಲಿದೆ ಎಂದವರು ಹೇಳಿದರು.

ವಿಪ್ರೋ ಅಧ್ಯಕ್ಷ ರಿಷಾದ್‌ ಪ್ರೇಬ್‌ಜಿ ಅವರು ಮಾತನಾಡಿ, ನಾವು ಮಾನವೀಯ ನೆಲೆಯಲ್ಲಿ ಈ ಆರೋಗ್ಯ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಆಸಕ್ತಿ ತೋರಿಸಿದ್ದೇವೆ ಮತ್ತು ನಮ್ಮ ಪ್ರಸ್ತಾಪಕ್ಕೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು. ನಾವು ದೇಶಾದ್ಯಂತ ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಿ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದವರು ತಿಳಿಸಿದರು. ಕೋವಿಡ್ ವೈರಸ್‌ ರೋಗಿಗಳಿಗೆ ಒಂದು ವರ್ಷದವರೆಗೆ ಚಿಕಿತ್ಸೆ ನೀಡಲು ರಾಜ್ಯ ಸರಕಾರವು ಕಂಪೆನಿಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next