ಕಲಬುರಗಿ: ಭಾವೈಕ್ಯತೆ ನೆಲೆ ಬೀಡು, ಸೂಫಿ-ಸಂತರ ನಾಡು, ಸೂರ್ಯ ನಗರಿಯಲ್ಲಿ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಮೇಲೆ ಕೋವಿಡ್ ಕರಿನೆರಳು ಬೀರಿದೆ. ಹೊಸ ಬಟ್ಟೆ ಖರೀದಿಸಿ ಸಂಭ್ರಮಿಸುತ್ತಿದ್ದವರ ಮೊಗದಲ್ಲಿ ಮಂಕು ಕವಿದಿದೆ. ಮನೆಯೊಳಗೆ ಹಬ್ಬವನ್ನು ಸರಳವಾಗಿ ಆಚರಿಸಲು ಮುಸ್ಲಿಮರು ಸಜ್ಜಾಗಿದ್ದಾರೆ.
ಸೌದಿ ಅರೇಬಿಯಾದಿಂದ ಮರಳಿದ್ದ ನಗರದ 76 ವರ್ಷದ ವೃದ್ಧನನ್ನು ದೇಶದಲ್ಲೇ ಮೊದಲು ಕೋವಿಡ್ ಬಲಿ ಪಡೆದಿತ್ತು. ವೃದ್ಧ ಕೋವಿಡ್ ಕ್ಕೆ ತುತ್ತಾದ ನಂತರ ಮಾ.12ರಿಂದಲೂ ಆತಂಕ ಮನೆ ಮಾಡಿದ್ದು, ನಿತ್ಯವೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜನರು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಹಾಮಾರಿ ರೋಗದ ಭೀತಿ ಹಿನ್ನೆಲೆಯಲ್ಲಿ ಯುಗಾದಿ, ಗುಡ್‌ಫ್ತೈಡೆ, ಮಹಾವೀರ ಜಯಂತಿ ಹಾಗೂ ಬುದ್ಧ ಜಯಂತಿ ಹಬ್ಬಗಳನ್ನು ಸರಳವಾಗಿ ಆಚರಿಸಲಾಗಿತ್ತು. ಅದರಂತೆ ಸೋಮವಾರ (ಮೇ 25) ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನ, ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್ ಕೂಟಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಕಾಣದ ಸಂಭ್ರಮ: ರಂಜಾನ್ ಮುಸ್ಲಿಮರ ದೊಡ್ಡ ಹಾಗೂ ಶ್ರೇಷ್ಠ ಹಬ್ಬ. ತಿಂಗಳ ಪೂರ್ತಿ ಉಪವಾಸ, ಪ್ರಾರ್ಥನೆ, ದಾನ-ಧರ್ಮ ಮಾಡಿ ಆಚರಿಸುವ ಪವಿತ್ರ ಹಬ್ಬ. ರಂಜಾನ್ ಮಾಸದುದ್ದಕ್ಕೂ ಖರೀದಿ, ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್ ಕೂಟಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಹಬ್ಬದ ಸಂಭ್ರಮವನ್ನೇ ಕೋವಿಡ್ ಕಸಿದಿದೆ.
ರಂಜಾನ್ ಮುನ್ನಾ ದಿನದ ರಾತ್ರಿಯಂತೂ ಸೂಪರ್ ಮಾರ್ಕೆಟ್ ಅಂಗಡಿಗಳಲ್ಲಿ ಖರೀದಿಗೆ ಕುಟುಂಬ ಸಮೇತರಾಗಿ ಜನರು ಮುಗಿಬೀಳುತ್ತಿದ್ದರು. ಹೊಸ ಬಟ್ಟೆ, ಚಪ್ಪಲಿ, ಶೂ, ಟೋಪಿ, ಸುಗಂಧ ದ್ರವ್ಯದ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಬಿರಿಯಾನಿ, ಸಿರಕುಂಬ ಹಾಗೂ ವಿಶಿಷ್ಟ ಖಾದ್ಯಗಳಿಗಾಗಿ ಒಣದ್ರಾಕ್ಷಿ, ಬಾದಾಮಿ, ಖರ್ಜೂರ, ಗೋಡಂಬಿ, ಗಸಗಸೆ, ಶಾವಿಗೆ ಮುಂತಾದ ಸಾಮಗ್ರಿಗಳಿಗೆ ಇನ್ನಿಲ್ಲದ ಬೇಡಿಕೆ ಬರುತ್ತಿತ್ತು. ಬಳೆ, ಫ್ಯಾನ್ಸಿ ಐಟಂಗಳ ಖರೀದಿ ಜೋರಾಗಿಯೇ ನಡೆಯುತ್ತಿತ್ತು. ಪ್ರತಿವರ್ಷ ಹಬ್ಬದ ಹೊತ್ತಲ್ಲಿ ಕಾಲಿಡಲು ಜಾಗವಿರುತ್ತಿರಲಿಲ್ಲ. ಈ ಬಾರಿ ಎಲ್ಲ ಅಂಗಡಿಗಳು ಮುಚ್ಚಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ಹಬ್ಬದ ಸಂಭ್ರಮವೇ ಕಾಣುತ್ತಿಲ್ಲ.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಮುಸ್ಲಿಂ ಮುಖಂಡರು. ಹಬ್ಬವನ್ನು ಸರಳವಾಗಿ ಆಚರಿಸುವ ನಿಟ್ಟಿನಲ್ಲಿ 15 ದಿನಗಳ ಹಿಂದೆಯೇ ಪ್ರಮುಖ ಮುಖಂಡರು ನಿರ್ಧಾರ ತೆಗೆದುಕೊಂಡಿದ್ದರು. ಅಂತೆಯೇ ವರ್ತಕರು, ಅಂಗಡಿಗಳ ಮಾಲೀಕರು ರಂಜಾನ್ ಮುಗಿಯುವ ವರೆಗೆ ಬಟ್ಟೆ, ಚಪ್ಪಲಿ ಅಂಗಡಿಗಳನ್ನು ತೆರೆಯದಿರಲು ನಿರ್ಣಯ ಕೈಗೊಂಡಿದ್ದರು. ಕೆಲ ವರ್ತಕರು ಅಂಗಡಿಗಳಿಗೆ ಅವಕಾಶ ನೀಡಬೇಕೆಂದು ಕೋರಿದ್ದರು. ಆದರೆ, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಮೇಲಾಗಿ ರವಿವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿದ್ದರಿಂದ ನಗರ ಸ್ತಬ್ಧಗೊಂಡಿತ್ತು. ಹೀಗಾಗಿ ಮುಸ್ಲಿಂ ಚೌಕ್, ಶೇಖ್ ರೋಜಾ, ಎಂಎಸ್‌ಕೆ ಮಿಲ್, ಸ್ಪೇಷನ್ ಪ್ರದೇಶದಲ್ಲಿ ಮಾಂಸ ಮಾರಾಟವೂ ಇರಲಿಲ್ಲ.
ರಂಜಾನ್ ಹಬ್ಬವನ್ನು ಸರಳವಾಗಿ ಮನೆಯಲ್ಲೇ ಆಚರಿಸಲು ತಯಾರಿ ನಡೆದಿದೆ. ಪ್ರಾರ್ಥನೆ ಸಹ ಮನೆಯಲ್ಲೇ ನಡೆಯಲಿದ್ದು, ಮಸೀದಿಗಳಲ್ಲಿ ಮೌಲ್ವಿಗಳು ಹಾಗೂ ಸಿಬ್ಬಂದಿ ಮಾತ್ರವೇ (ಐದರಿಂದ ಆರು ಜನ) ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇಸ್ಲಾಂ ಧರ್ಮ ಹೇಳುವುದು ಜೀವ ರಕ್ಷಣೆಯ ಬಗ್ಗೆಯೇ. ಅದರಂತೆ ಸರ್ಕಾರ ಸಹಿತ ಲಾಕ್ ಡೌನ್ ಜಾರಿ ಮಾಡಿದೆ. ಆದ್ದರಿಂದ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು.
-ನಿಜಾಮ ಬಾಬಾ, ಕೆಬಿಎನ್ ದರ್ಗಾ
ಡಾ| ಸೈಯದ್ ಸಜ್ಜಾದೆ ಸಂದೇಶ ; ರಂಜಾನ್ ಹಬ್ಬದಂದು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ನಿಟ್ಟಿನಲ್ಲಿ ಖ್ವಾಜಾ ಬಂದೇ ನವಾಜ್ ದರ್ಗಾ ಮುಖ್ಯಸ್ಥ ಡಾ| ಸೈಯದ್ ಶಾ ಖುಸ್ರೋ ಹುಸೇನಿ ಸಜ್ಜಾದೆ ನಸೀನ್ ಮಾರ್ಗದರ್ಶನದಲ್ಲಿ ಮೌಲ್ವಿಗಳು ವಿಡಿಯೋ ಸಂದೇಶ ಸಿದ್ಧಪಡಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಮಾಡುವ ಪ್ರಾರ್ಥನೆಯನ್ನು ಮನೆಯಲ್ಲಿ ಹೇಗೆ ಮಾಡಬೇಕೆಂಬ ಕುರಿತು ವಿಡಿಯೋದಲ್ಲಿ ವಿವರಿಸಲಾಗಿದೆ. ಜತೆಗೆ ಕೋವಿಡ್ ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಸೇರಿದಂತೆ ಮತ್ತೂಬ್ಬರನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆ. ಹೀಗಾಗಿ ಮನೆಯಲ್ಲೇ ಹಬ್ಬದ ಪ್ರಾರ್ಥನೆ ಸಲ್ಲಿಸುವಂತೆ ಡಾ| ಸೈಯದ್ ಶಾ ಖುಸ್ರೋ ಹುಸೇನಿ ಸಜ್ಜಾದೆ ನಸೀನ್ ಸಂದೇಶ ನೀಡಿದ್ದಾರೆ.