ಬೆಳಗಾವಿ: ಲಾರಿಗಳಲ್ಲಿ ಟನ್‌ಗಟ್ಟಲೇ ಹೋಗುತ್ತಿದ್ದ ಕ್ಯಾಬೀಜ್ ಈಗ ಸೈಕಲ್ ಮೇಲೆ ಕೆಜಿ ಲೆಕ್ಕದಲ್ಲಿ ಸಣ್ಣ-ಸಣ್ಣ ಚೀಲಗಳಲ್ಲಿ ಸಾಗಾಟ ಆಗುತ್ತಿದೆ. ಕೈತುಂಬ ಸಿಗುತ್ತಿದ್ದ ಹಣ ಬೆರಣಿಕೆಯಲ್ಲಿ ಬರುತ್ತಿದೆ. ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿರುವ ಬೆಳೆ ಎಷ್ಟೋ ಜನರ ಮನೆಗೆ ಉಚಿತವಾಗಿ ಸೇರುತ್ತಿದೆ. ಇದು ಬೆಳಗಾವಿ ಜಿಲ್ಲೆಯ ತರಕಾರಿ ಬೆಳೆಗಾರರ ಶೋಚನೀಯ ಕಥೆ.
ಕೋವಿಡ್ 19 ವೈರಸ್ ಎಂಬ ಮಹಾಮಾರಿ ತರಕಾರಿ ಬೆಳೆಗಾರರ ಸಂಕಷ್ಟದ ಜೀವನಕ್ಕೆ ಮತ್ತಷ್ಟು ಕಷ್ಟದ ಲೇಪನ ಮಾಡಿದೆ. ಖರೀದಿದಾರರೂ ಇಲ್ಲ. ನಿರೀಕ್ಷೆ ಮಾಡಿದಷ್ಟು ಬೆಲೆಯೂ ಇಲ್ಲ. ಇದರಿಂದ ಕ್ಯಾಬೀಜ್ ದಂತಹ ಎಷ್ಟೋ ತರಕಾರಿಗಳು ಹೊಲದಲ್ಲೇ ಹಾಳಾಗುತ್ತಿವೆ. ಉಚಿತವಾಗಿ ತೆಗೆದುಕೊಂಡು ಹೋಗಿ ಎಂದರೂ ಜನರು ಕಾಣಿಸುತ್ತಿಲ್ಲ. ಲಾಕ್‌ಡೌನ್ ಹತ್ತಾರು ಸಂಕಷ್ಟಗಳನ್ನು ತಂದೊಡ್ಡಿದೆ. ತರಕಾರಿಗಳಿಗೆ ಬೆಲೆಯೇ ಬಾರದೇ ಸಾವಿರಾರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಾರುಕಟ್ಟೆಗೆ ತರಕಾರಿ ಒಯ್ಯಲಾಗದೇ ಒದ್ದಾಡುತ್ತಿದ್ದಾರೆ. ಅನಿವಾರ್ಯವಾಗಿ ಹೊಲದಲ್ಲಿನ ಬೆಳೆ ನಾಶ ಮಾಡಲು ರೈತರು ಮುಂದಾಗಿದ್ದಾರೆ. ಈಗಾಗಲೇ ಎಷ್ಟೋ ಕಡೆ ಸ್ವತಃ ರೈತರೇ ಕ್ಯಾಬೀಜ್ ಮೊದಲಾದ ಬೆಳೆ ಮೇಲೆ ಟ್ರ್ಯಾಕ್ಟರ್ ಹಾಯಿಸಿದ್ದಾರೆ.
ಇನ್ನು ಕೆಲ ರೈತರು ಕುರಿಗಳಿಗೆ ಮೇಯಲು ಬಿಟ್ಟಿದ್ದಾರೆ. ಬೆಳಗಾವಿ ತಾಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕ್ಯಾಬೀಜ್ ಬೆಳೆ ಹೊಲಗಳ ತುಂಬ ತುಂಬಿ ನಿಂತಿದೆ. ಪೇಟೆಗೆ ತಂದರೆ ಒಂದು ಚೀಲಕ್ಕೆ ಕೇವಲ 70 ರಿಂದ 80 ರೂ. ಮಾತ್ರ. ಹತ್ತು ಕಿ.ಮೀ. ದೂರದ ಹಳ್ಳಿಗಳಿಂದ ಬೆಳಗಾವಿಗೆ ತರಬೇಕಾದರೆ ಕನಿಷ್ಠ 60 ರೂ. ಸಾಗಾಟದ ವೆಚ್ಚ. ದಲ್ಲಾಳಿಗಳಿಗೆ ಒಂದಿಷ್ಟು ಹಣ ಕೊಡಬೇಕು. ಇದರಿಂದ ಕೊನೆಗೆ ರೈತರಿಗೆ ಉಳಿಯುವುದು ನಾಲ್ಕೈದು ರೂಪಾಯಿ ಮಾತ್ರ. ಹೀಗಾಗಿ ಅನೇಕ ರೈತರು ಮಾರುಕಟ್ಟೆಗೆ ಬರುವದನ್ನೇ ನಿಲ್ಲಿಸಿದ್ದಾರೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಈಗ ಪ್ರತಿ ಕೆಜಿಗೆ 70 ರಿಂದ 80 ಪೈಸೆ ಸಿಗುತ್ತಿದೆ. ಒಂದು ಲಾರಿ ಲೋಡ್ ಮಾಡಿದರೆ (10 ಟನ್) ಸಿಗುವದು ಕೇವಲ 8,000 ರೂ. ಮಾತ್ರ. ಆದರೆ ಅದೇ ಮಾರುಕಟ್ಟೆಯಲ್ಲಿ ಒಳ್ಳೆಯ ದರ ಇದ್ದರೆ ಒಂದು ಟನ್‌ಗೆ ಕನಿಷ್ಠ ಒಂದು ಲಕ್ಷ ರೂ. ವರೆಗೆ ಸಿಗುತ್ತದೆ. ಕೋವಿಡ್ 19 ವೈರಸ್ ಬಂದಿರುವುದರಿಂದ ಒಂದು ಟನ್‌ಗೆ ಈಗ 10 ಸಾವಿರವೂ ಸಿಗುತ್ತಿಲ್ಲ ಎನ್ನುತ್ತಾರೆ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ.
ಸಣ್ಣ ರೈತರಿಗೆ ಇದು ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಹೀಗಾಗಿ ಸರಕಾರ ಯಾವುದೇ ದಾಖಲೆ ಕೇಳದೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು. ಅನೇಕ ರೈತರು ಬೇರೆಯವರ ಹೊಲ ಮಾಡುತ್ತಿದ್ದಾರೆ. ಅವರ ಹೆಸರಿನಲ್ಲಿ ಹೊಲ ಇರುವದಿಲ್ಲ. ದಾಖಲೆ ಬೇರೆಯವರ ಹೆಸರಿನಲ್ಲಿ ಇರುತ್ತದೆ. ಆದಕಾರಣ ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ ನಿಜವಾಗಿ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ನೆರವು ನೀಡಬೇಕು.
– ಅಪ್ಪಾಸಾಹೇಬ ದೇಸಾಯಿ, ರೈತ ಮುಖಂಡ, ಬೆಳಗಾವಿ
-ಕೇಶವ ಆದಿ