ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್ 19 ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಿದೆ. ದಿನಕ್ಕೆ ಒಂದೆರಡು ಬರುತ್ತಿದ್ದ ಕೋವಿಡ್ 19 ಪ್ರಕರಣ ಕಳೆದ ಮೂರೇ ದಿನದಲ್ಲಿ ಶತಕ ಮೀರಿ ಮುನ್ನುಗುತ್ತಿದೆ. ಈವರೆಗೆ 6 ಮಂದಿ ಕೋವಿಡ್ 19ದಿಂದ ಅಸುನೀಗಿದ್ದಾರೆ. ರಾಜಧಾನಿ ಬೆಂಗಳೂರಿಗೆ ಹೆಬ್ಟಾಗಿಲಾಗಿ ರಾಜ್ಯದ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಿಲ್ಲಾ ಕೇಂದ್ರವಾದರೂ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕೋವಿಡ್ 19 ಸೋಂಕು ಮಂದಗತಿಯಲ್ಲಿಯೇ ಇತ್ತು. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಮಾತ್ರ ಬರುತ್ತಿದ್ದವು. ಪ್ರಾರಂಭದಲ್ಲಿ ಶಿರಾ ಮತ್ತು ತುಮಕೂರು ನಗರದಲ್ಲಿ ಮಾತ್ರ ಕಂಡು ಬರುತ್ತಿದ್ದವು ಸಮುದಾಯಕ್ಕೆ ಈ ಸೋಂಕು ಹರಡಿರಲಿಲ್ಲ
ಆದರೆ ಈಗ ಕೋವಿಡ್ 19 ಜಿಲ್ಲಾದ್ಯಂತ ಆವರಿಸಿದೆ. ಹಳ್ಳಿಗಳತ್ತ ಮುಖ ಮಾಡಿದ ಕೋವಿಡ್ 19: ಹಳ್ಳಿಯ ಮುಖ ನೋಡದ ಈ ಸೋಂಕು ಲಾಕ್‌ಡೌನ್ ತೆರವಾದ ಮೇಲೆ ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಯಿಂದ ಜಿಲ್ಲೆಗೆ ಬಂದವರಿಂದ ಸೋಂಕು ತೀವ್ರವಾಗಿ ಹರಡುತ್ತಿದೆ. ಗ್ರಾಮೀಣ ಭಾಗದ ಕೆಲವರಲ್ಲಿ ಕಾಣಿಸಿ ಕೊಳ್ಳುತ್ತಿರುವ ಈ ವೈರಸ್ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ವಕ್ಕರಿಸುತ್ತಿದೆ. ಈ ಮಹಾಮಾರಿ ಮಕ್ಕಳನ್ನು ಬಿಡದ ಹಿನ್ನೆಲೆ ಜಿಲ್ಲೆಯಲ್ಲಿ ಶತಕ ಮೀರಿ ಮುನ್ನುಗುತ್ತಿದ್ದು, ಕೋವಿಡ್ 19 ವೇಗಕ್ಕೆ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.
ನಿತ್ಯ 300 ಗಂಟಲು ದ್ರವ ಪರೀಕ್ಷೆ; ಜಿಲ್ಲಾಧಿಕಾರಿ: ಸರ್ಕಾರ ಕೋವಿಡ್-19 ಚಿಕಿತ್ಸಾ ದರವನ್ನು ನಿಗದಿಪಡಿಸಿರುವುದರಿಂದ ಸೋಂಕಿತರು ಇಚ್ಛಿಸಿದರೆ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಲ್ಯಾಬ್‌ನಲ್ಲಿ ಪ್ರತಿದಿನ ಸರಾಸರಿ 300ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೇ.40ಕ್ಕೂ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಸಾರ್ವಜನಿಕರು ಅಂಗಡಿಗಳಿಗೆ ಅಥವಾ ಅಕ್ಕ-ಪಕ್ಕದ ಜನರೊಂದಿಗೆ ವ್ಯವಹರಿಸಿದಾಗ ಸ್ಯಾನಿಟೈಸರ್‌ನ್ನು ಬಳಸಬೇಕು ಹಾಗೂ ಹೊರ ರಾಜ್ಯದಿಂದ ಯಾರೇ ಬಂದರೂ ಅಂತಹವರ ಮಾಹಿತಿ ಯನ್ನು ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೇ ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳು ಸ್ವಯಂ ಆಗಿ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದ್ದಾರೆ.
ಜಿಪಂ ಕಚೇರಿಗೆ ಸ್ಯಾನಿಟೈಸೇಷನ್: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧ ವಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಸಂಪೂರ್ಣವಾಗಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಪಂಚಾಕ್ಷರಿ ನೇತೃತ್ವದ ಸಿಬ್ಬಂದಿ ಸ್ಯಾನಿಟೈಸೇಷನ್ ಮಾಡಿದರು. ಕುಣಿಗಲ್ ತಾಲೂಕು ಜಿನ್ನಾಗರ ಗ್ರಾಪಂ ಸಿಬ್ಬಂದಿಯೋರ್ವನಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆ ಸಿಬ್ಬಂದಿ ಜಿಪಂ ಕಚೇರಿಗೆ ಬಂದಿರಬಹುದೆಂಬ ಶಂಕೆಯಿಂದ ಜಿಪಂ ಸಿಇಒ ಶುಭಾಕಲ್ಯಾಣ್ ಅವರ ಆದೇಶದ ಮೇರೆಗೆ ಜಿಪಂ ಎಲ್ಲಾ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಯಿಂದ ಕಚೇರಿ ಒಳಗೆ ಮತ್ತು ಹೊರಗೆ ಸಂಪೂರ್ಣವಾಗಿ ಸ್ಯಾನಿಟೈಸೇಷನ್ ಮಾಡಲಾಯಿತು.
ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಹೆಚ್ಚುತ್ತಲೇ ಇದೆ. ಜನರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.ಅಂಗಡಿಯವರು ಗ್ರಾಹಕರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿ ಕೊಳ್ಳಬೇಕು. ಆ ರೀತಿ ಮಾಡಿಕೊಳ್ಳದ ಅಂಗಡಿ ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
* ಚಿ.ನಿ.ಪುರುಷೋತ್ತಮ್