ಉಡುಪಿ: ಕೋವಿಡ್ ಹಾಟ್‌ಸ್ಪಾಟ್ ಸಂಪರ್ಕ ಹೊಂದಿರುವ ಐವರು, ತೀವ್ರ ಉಸಿರಾಟದ ತೊಂದರೆ 17, ಕೊರೊನಾ ಸಂಪರ್ಕದ 83, ಫ್ಲೂ ಜ್ವರದ ಇಬ್ಬರು – ಹೀಗೆ ಒಟ್ಟು 106 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಉಡುಪಿ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದೆ. ಬುಧವಾರ ಯಾವುದೇ ವರದಿಗಳು ಬಂದಿಲ್ಲ. ಒಟ್ಟು 231 ಮಾದರಿಗಳ ವರದಿ ಬರಬೇಕಾಗಿದೆ.
ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದು ಇನ್ನೊಬ್ಬರಲ್ಲಿ ಇನ್ನೂ ವೈರಾಣು ಇರುವುದರಿಂದ ಅವರು ಆಸ್ಪತ್ರೆಯಲ್ಲಿ ಮುಂದುವರಿಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಣೆಯಲ್ಲಿದೆ. ಭಟ್ಕಳದ ಗರ್ಭಿಣಿಯವರ ಆರೋಗ್ಯವೂ ಸುಧಾರಣೆಯಲ್ಲಿದೆ.
ಇತ್ತೀಚಿನ ಮೂರ್‍ನಾಲ್ಕು ದಿನಗಳಿಂದ ಸರಕಾರದ ನಿರ್ದೇಶನದಂತೆ ಸೋಂಕಿತರು, ಸೋಂಕಿತರ ಪ್ರಥಮ ಸಂಪರ್ಕದವರಲ್ಲದೆ, ಪ್ರಥಮ ಸಂಪರ್ಕದವರನ್ನು ಸಂಪರ್ಕಿಸಿದವರ ಗಂಟಲು ದ್ರವವನ್ನೂ ಪಡೆಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರಚಂದ್ರ ಸೂಡ ತಿಳಿಸಿದ್ದಾರೆ.
ಐಸೊಲೇಶನ್‌ಗೆ ದಾಖಲು
ಬುಧವಾರ ಎಂಟು ಮಂದಿ ಆಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಇರುವ ಆರು ಪುರುಷರು, ಕೋವಿಡ್ ಶಂಕೆಯ ಒಬ್ಬರು ಪುರುಷ, ಫೂÉ ಜ್ವರ ಬಾಧೆಯ ಒಬ್ಬರು ಸೇರಿದ್ದಾರೆ. ಪ್ರಸ್ತುತ 44 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ಬುಧವಾರ ಇಬ್ಬರು ಬಿಡುಗಡೆಗೊಂಡಿದ್ದು, ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 196ಕ್ಕೇರಿದೆ.
ಬುಧವಾರ ಒಟ್ಟು ಏಳು ಮಂದಿ ಹೆಸರು ನೋಂದಾಯಿಸಿದ್ದಾರೆ. ಬುಧವಾರ 149 ಮಂದಿ 28 ದಿನ, 42 ಮಂದಿ 14 ದಿನಗಳ ನಿಗಾ ಮುಗಿಸಿದ್ದಾರೆ. ಇದುವರೆಗೆ 1,371 ಮಂದಿ 28 ದಿನಗಳ, 2,016 ಮಂದಿ 14 ದಿನಗಳ ನಿಗಾ ಪೂರೈಸಿದ್ದಾರೆ. ಪ್ರಸ್ತುತ 56 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿಯೂ, 31 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿಯೂ ಇದ್ದಾರೆ. ಬುಧವಾರ ಆಸ್ಪತ್ರೆ
ಕ್ವಾರಂಟೈನ್‌ಗೆ 11 ಮಂದಿ ಸೇರ್ಪಡೆ ಗೊಂಡಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 7 ಮಂದಿ ಬಿಡುಗಡೆಗೊಂಡಿದ್ದಾರೆ.