Advertisement

160ಕ್ಕೇರಿದ ಕೋವಿಡ್‌ 19 ಪ್ರಕರಣ

06:29 AM May 20, 2020 | Lakshmi GovindaRaj |

ಮಂಡ್ಯ: ಮುಂಬೈ ಕೋವಿಡ್‌ 19 ನಂಜು ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದೇ ದಿನ ಜಿಲ್ಲೆಯೊಳಗೆ 71 ಕೋವಿಡ್‌ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ರಾಜ್ಯ ದಲ್ಲೇ ಮಂಡ್ಯ ಜಿಲ್ಲೆ ಹೊಸ ದಾಖಲೆ ಬರೆದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, ಜನರನ್ನು ತೀವ್ರ ಆತಂಕಕ್ಕೆ ಗುರಿಪಡಿಸಿದೆ.

Advertisement

ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡಿರುವ ವರ ಪೈಕಿ ಪಿ.1271ರಿಂದ ಪಿ.1285 ಹಾಗೂ ಪಿ.1315ರಿಂದ ಪಿ.1361ರವರೆಗಿನ  ಸೋಂಕಿತರು ಮಂಡ್ಯ ಜಿಲ್ಲೆಯವರು ಎಂದು ಗುರುತಿಸ ಲಾಗಿದೆ. ಸೋಂಕಿತ 62 ಮಂದಿ ಮುಂಬೈ ನಿಂದ ಬಂದವರೇ ಆಗಿದ್ದಾರೆ. ಇವರೆಲ್ಲರನ್ನೂ ನಗರದ ಮಿಮ್ಸ್‌ನ ಐಸೋಲೇಷನ್‌ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ  ಎಂದು ಡೀಸಿ ಡಾ.ವೆಂಕಟೇಶ್‌ ತಿಳಿಸಿದ್ದಾರೆ.

71 ಪ್ರಕರಣಗಳ ಪೈಕಿ 50 ಪ್ರಕರಣಗಳು ಕೆ.ಆರ್‌.ಪೇಟೆಯಲ್ಲಿ ದಾಖಲಾಗಿದ್ದು, 21 ಪ್ರಕರಣಗಳು ನಾಗಮಂಗಲದಲ್ಲಿ ಕಂಡು ಬಂದಿದೆ. ಇದರಲ್ಲಿ 1 ವರ್ಷದಿಂದ 65 ವರ್ಷದವರೂ ಸೇರಿದ್ದು,  ಎಲ್ಲರಿಗೂ ಕೋವಿಡ್‌ 19 ಆವರಿಸಿದೆ. ಸೋಂಕಿತರಲ್ಲಿ 31 ಪುರುಷರು, 25 ಮಹಿಳೆಯರು 15 ಮಂದಿ ಮಕ್ಕಳಿದ್ದಾರೆ. ಇದರಲ್ಲಿ 7 ಗಂಡು ಮಕ್ಕಳು, 8 ಮಂದಿ ಹೆಣ್ಣು ಮಕ್ಕಳಿದ್ದಾರೆ.

ಮುಂಬೈನಲ್ಲಿ ನೆಲೆಸಿದ್ದವರು: ಎಲ್ಲರೂ ಕಳೆದ ಹಲವಾರು ವರ್ಷಗಳಿಂದ ಮುಂಬೈನ ಸಾಂತಾ ಕ್ರೂಜ್‌, ಹಂದೇರಿ, ನೆಹರುನಗರ, ವಿಲೆ ಪಾರ್ಲೆ, ಮುಂಬೈ ವೆಸ್ಟ್‌ನಲ್ಲಿ ವಾಸವಾಗಿದ್ದರು. ಹೋಟೆಲ್‌, ಬ್ಯಾಂಕ್‌ಗಳು ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪಾಸಿಟಿವ್‌ ವರದಿ: ಸೋಂಕಿತರೆಲ್ಲರೂ ವಿವಿಧ ದಿನಾಂಕಗಳಂದು ಜಿಲ್ಲೆಗೆ ಆಗಮಿಸಿದ್ದಾರೆ.

ಮೇ 15ರಂದು ಇವರೆಲ್ಲರೂ ಮುಂಬೈನಿಂದ ಹೊರಟು ನಿಪ್ಪಾಣಿ, ಆನೆಗೊಳ ಹಾಗೂ ಬೆಳ್ಳೂರು  ಚೆಕ್‌ಪೋಸ್ಟ್‌ ಮೂಲಕ ಆಗಮಿಸಿ ದ್ದರು. ಅವರನ್ನು ಅಂದೇ ಹಾಸ್ಟೆಲ್‌ ಕ್ವಾರಂಟೈನ್‌ ಮಾಡಲಾಗಿತ್ತು. ಅಲ್ಲದೆ, ಇವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅವರೆಲ್ಲರ ವರದಿ ಪಾಸಿಟಿವ್‌ ಬಂದಿದೆ ಎಂದು  ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಇದುವರೆಗೆ ಜಿಲ್ಲೆಯಲ್ಲಿ 160 ಸೋಂಕಿತರ ಪೈಕಿ 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 139 ಪ್ರಕರಣಗಳು ಸಕ್ರಿಯವಾಗಿವೆ.

Advertisement

ಕ್ವಾರಂಟೈನ್‌ಗೆ ಸಾರ್ವಜನಿಕರ ಸಹಕಾರ ಅಗತ್ಯ: ಮುಂಬೈನಿಂದ ಆಗಮಿಸುತ್ತಿರುವವರನ್ನು ಜಿಲ್ಲೆಯಲ್ಲಿ ಕ್ವಾರಂಟೈನ್‌ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಇಲ್ಲದಿದ್ದರೆ ಸೋಂಕಿತ ವ್ಯಕ್ತಿಗಳು ಗ್ರಾಮಗಳಿಗೆ ಭೇಟಿ  ನೀಡಿದರೆ  ಸಮುದಾಯಕ್ಕೆ ಕೋವಿಡ್‌ 19 ಹರಡುವ ಸಾಧ್ಯತೆ ಇದೆ. ಬರುವವರನ್ನು ನೇರವಾಗಿ ಕ್ವಾರಂಟೈನ್‌ ಮಾಡಲು ಅವಕಾಶ ಮಾಡಿಕೊಡಬೇಕು ಡಾ.ವೆಂಕಟೇಶ್‌ ಮನವಿ ಮಾಡಿದ್ದಾರೆ.

ಅಲ್ಲದೆ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌  ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ವಲಸಿಗರನ್ನು ನೇರವಾಗಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಒಂದು ವೇಳೆ ಚೆಕ್‌ ಪೋಸ್ಟ್‌ಗಳನ್ನು ಕಣ್ತಪ್ಪಿಸಿ ಅಥವಾ ಅನುಮತಿ ಇಲ್ಲದೆ ನಿಮ್ಮ ಗ್ರಾಮ, ಊರುಗಳಿಗೆ ಬಂದರೆ ಕೂಡಲೇ  ತಹಶೀಲ್ದಾರ್‌, ಪೊಲೀಸರು, ಗ್ರಾಪಂ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವ ಮೂಲಕ ಕೋವಿಡ್‌ 19 ಹರಡುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.

ಹಾಸಿಗೆಗಳ ಸಂಖ್ಯೆ ಹೆಚ್ಚಳಕ್ಕೆ ಅಗತ್ಯ ಕ್ರಮ: ಮುಂಬೈನಿಂದ ಬರುತ್ತಿರುವ ವಲಸಿಗರಿಗೆ ಕೋವಿಡ್‌ 19 ಸೋಂಕು ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಜಿಲ್ಲಾಡಳಿತ ಸಮರ್ಥವಾಗಿ ಎದುರಿಸಲು ಎಲ್ಲ ರೀತಿಯ ಸಿದತೆ ಮಾಡಿಕೊಂಡಿದೆ. ಈಗಾಗಲೇ ಮಿಮ್ಸ್‌ನಲ್ಲಿ 350 ಹಾಸಿಗೆಗಳನ್ನು ಸಿದ್ದಪಡಿಸಿತ್ತು. ಆದರೆ ಈಗ ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಅಲ್ಲದೆ, ಎಲ್ಲ ತಾಲೂಕುಗಳಲ್ಲಿ ಕ್ವಾರಂಟೈನ್‌ ಕೇಂದ್ರಗಳನ್ನು  ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next