ಮುಂಬೈ:ಕೋವಿಡ್ 19 ಸೋಂಕಿನ ಭೀತಿಯ ನಡುವೆಯೂ ದೀಪಾವಳಿ ಸಂದರ್ಭದಲ್ಲಿ ಎರಡು ಜೈನ ಮಂದಿರಗಳನ್ನು ತೆರೆಯಲು ಬಾಂಬೆ ಹೈಕೋರ್ಟ್ ಗುರುವಾರ(ನ.12,2020) ಷರತ್ತಿನ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಕಡಿಮೆ ಜನಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು ಎಂಬ ಷರತ್ತಿನೊಂದಿಗೆ ಎರಡು ಜೈನ ಮಂದಿರ ತೆರೆಯಲು ಅನುಮತಿ ನೀಡಿದ್ದು, ಭಕ್ತರು ದೀಪಾವಳಿಯ ಸಂದರ್ಭದಲ್ಲಿ ಭೇಟಿ ನೀಡುವಾಗ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಜೈನ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ದಾದರ್ ಮತ್ತು ಬೈಕುಲ್ಲಾದ ಮಂದಿರಗಳನ್ನು ತೆರೆಯಲು ಮಾತ್ರ ಅನುಮತಿ ನೀಡಿದೆ. ಆದರೆ ಇನ್ನುಳಿದ ನೂರು ಜೈನ ದೇವಾಲಯಗಳನ್ನು ತೆರೆಯಲು ಹೈಕೋರ್ಟ್ ಅನುಮತಿ ನೀಡಿಲ್ಲ. ಈ ವಿಚಾರದಲ್ಲಿ ಉಳಿದ ಟ್ರಸ್ಟ್ ಗಳು ಕೂಡಾ ಪ್ರತ್ಯೇಕ ಮನವಿ ಸಲ್ಲಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ನಿವಾಸ ಈಗ ಬಿಜೆಪಿಯ ಹೊಸ ಪವರ್ ಸೆಂಟರ್
ಶ್ರೀ ಆತ್ಮ ಕಮಲ್ ಲಬ್ದಿ ಸುರೀಶ್ ವಾರ್ಜಿ ಜೈನ್ ಜ್ಞಾನ್ ಮಂದಿರ್ ಟ್ರಸ್ಟ್ ಮತ್ತು ಶೇಥ್ ಮೋಟಿಶಾ ಧಾರ್ಮಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಎರಡು ಜೈನ ಮಂದಿರ ತೆರೆಯಲು ಅನುಮತಿ ನೀಡಿದೆ.
ದೀಪಾವಳಿಯ ಐದು ದಿನಗಳ ಕಾಲ ಜೈನ ಸಮುದಾಯಕ್ಕೆ ತುಂಬಾ ಪವಿತ್ರ ಮತ್ತು ಮುಖ್ಯವಾದದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 13ರಿಂದ 17ರವರೆಗೆ ಜೈನ ಮಂದಿರಕ್ಕೆ ಭೇಟಿ ನೀಡಲು ಅನುಮತಿ ನೀಡಬೇಕೆಂದು ಟ್ರಸ್ಟ್ ಪರ ವಕೀಲ ಪ್ರಫುಲ್ಲಾ ಶಾ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.