ಹೊಸದಿಲ್ಲಿ: ಕೋವಿಡ್ 19 ಪೀಡಿತರ ನೆರವಿಗೆ ಮುಂದಾದ ಭಾರತದ ವನಿತಾ ಹಾಕಿ ಪಟುಗಳು 20 ಲಕ್ಷ ರೂ. ಮೊತ್ತವನ್ನು ಸಂಗ್ರಹಿಸಿದ್ದಾರೆ. ಫಿಟ್‌ನೆಸ್ ಚಾಲೆಂಜ್ ಮೂಲಕ ಆಟಗಾರ್ತಿಯರು ಈ ಮೊತ್ತವನ್ನು ಕಲೆಹಾಕಿದರು.
ಈ ಚಾಲೆಂಜ್‌ನಲ್ಲಿ ಒಟ್ಟು 20,01,130 ರೂ. ಒಟ್ಟುಗೂಡಿತು. ಇದನ್ನು ಹೊಸದಿಲ್ಲಿ ಮೂಲದ ಎನ್‌ಜಿಒ ಉದಯ್ ಫೌಂಡೇಶನ್‌ಗೆ ನೀಡಲಾಗುವುದು.
“ನಮಗೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದೆ. ವಿಶ್ವದಾದ್ಯಂತವಿರುವ ಭಾರತದ ಹಾಕಿಪ್ರೇಮಿಗಳು ನಮ್ಮ ಚಾಲೆಂಜ್‌ನಲ್ಲಿ ಪಾಲ್ಗೊಂಡರು. ಭಾರತೀಯ ವನಿತಾ ಹಾಕಿ ತಂಡದ ಪರವಾಗಿ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂಬುದಾಗಿ ನಾಯಕಿ ರಾಣಿ ರಾಮ್‌ಪಾಲ್ ಹೇಳಿದರು.
ಇಲ್ಲಿ ಹಾಕಿ ಆಟಗಾರ್ತಿಯರು ದಿನಂಪ್ರತಿ ವಿವಿಧ ಫಿಟ್‌ನೆಸ್ ಟಾಸ್ಕ್ ಗಳನ್ನು ನೀಡುತ್ತಿದ್ದರು. ಒಬ್ಬೊಬ್ಬರೂ ತಮ್ಮ ಸಾಮಾಜಿಕ ಜಾಲತಾಣದ ಮೂಲಕ 10 ಮಂದಿಯನ್ನು ಟ್ಯಾಗ್ ಮಾಡುತ್ತಿದ್ದರು. ಒಬ್ಬೊಬ್ಬರಿಂದ ಕೋವಿಡ್ 19 ನಿಧಿಗೆ ತಲಾ 100 ರೂ. ಒಟ್ಟುಗೂಡುತ್ತಿತ್ತು.
ಇದೇ ವೇಳೆ “ಐ ಫಾರ್ ಇಂಡಿಯಾ’ ಆಯೋಜಿಸಿದ ಕೋವಿಡ್ 19 ನಿಧಿ ಸಂಗ್ರಹದಲ್ಲಿ ಕೊಹ್ಲಿ, ರೋಹಿತ್, ಸಾನಿಯಾ ಮಿರ್ಜಾ ಕಾಣಿಸಿಕೊಳ್ಳಲಿದ್ದಾರೆ.