Advertisement

ಅತಂತ್ರ ಸ್ಥಿತಿಯಲ್ಲಿ ಕ್ಷೌರದಂಗಡಿಗಳು

08:45 PM Apr 23, 2020 | Sriram |

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್‌ಗಿಂತ ಒಂದು ದಿನ ಮೊದಲೇ ಕ್ಷೌರದಂಗಡಿಗಳನ್ನು ಮುಚ್ಚಲಾಗಿತ್ತು. ರವಿವಾರಕ್ಕೆ ಒಂದು ತಿಂಗಳು ಕಳೆಯುತ್ತದೆ. ಇತರ ಕ್ಷೇತ್ರಗಳಂತೆ ಕ್ಷೌರದಂಗಡಿ ಮಾಲಕರ ಹಾಗೂ ಸಿಬಂದಿಗಳ ಪರಿಸ್ಥಿತಿಯೂ ಸದ್ಯ ಅತಂತ್ರ ಸ್ಥಿತಿಯಲ್ಲಿದೆ.

Advertisement

ದ.ಕ.ಜಿಲ್ಲೆಯಲ್ಲಿ 4ಸಾವಿರಕ್ಕೂ ಅಧಿಕ ಕ್ಷೌರದಂಗಡಿಗಳಿವೆ. ಈ ಪೈಕೆ ನಗರದಲ್ಲಿ 300ಕ್ಕೂ ಅಧಿಕ ಅಂಗಡಿಗಳಿವೆ. ಉಡುಪಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಕ್ಷೌರದಂಗಡಿಗಳಿವೆ. ನಗರದೊಳಗೆ 60ಕ್ಕೂ ಅಧಿಕ ಹೆಚ್ಚಿನ ಅಂಗಡಿಗಳಿವೆ. ಬೇರೆ ಜಿಲ್ಲೆ ಮತ್ತು ರಾಜ್ಯದಿಂದ ಬಂದ ಅನೇಕ ಮಂದಿ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಕೆಲವು ಮಂದಿ ಊರಿಗೆ ಹೋಗಿದ್ದರೆ ಹೆಚ್ಚಿನ ಮಂದಿ ಇಲ್ಲಿಯೇ ಬಾಕಿಯಾಗಿದ್ದಾರೆ.

ಅತಂತ್ರ ಜೀವನ
ರಾಜ್ಯ ಸವಿತಾ ಸಮಾಜದಿಂದ ಉಭಯ ಜಿಲ್ಲೆಗಳಿಗೆ ವಿತರಿಸಲು 70 ಕಿಟ್‌ಗಳು ಬಂದಿವೆ. ತಾಲೂಕಿಗೆ 10ರಂತೆ ಕಿಟ್‌ ಮತ್ತು ಉಭಯ ಜಿಲ್ಲಾ ಸವಿತಾ ಸಮಾಜದಿಂದ 10 ಕಿಟ್‌ಗಳು ಬಿಟ್ಟರೆ ಬೇರೆ ಯಾವುದೇ ನೆರವು ಈ ವೃತ್ತಿಯಲ್ಲಿ ತೊಡಗಿರುವವರಿಗೆ ಲಭಿಸಿಲ್ಲ. ಅಂಗಡಿಯ ಬಾಡಿಗೆ, ಮನೆಬಾಡಿಗೆ, ಸಿಬಂದಿಗಳ ಖರ್ಚು ಹೀಗೆ ಹೊರೆಗಳು ಹೆಚ್ಚುತ್ತಿವೆ.

ಈ ಬಗ್ಗೆ ಜಿಲ್ಲಾ ಸವಿತಾ ಸಮಾಜಕ್ಕೆ ಸದಸ್ಯರು ಪ್ರತಿ ನಿತ್ಯ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ದ.ಕ.ದಲ್ಲಿ ಹೊರ ಜಿಲ್ಲೆಗಳಾದ ಶಿವಮೊಗ್ಗ, ಸಾಗರ ಧಾರವಾಡದಿಂದ ಕೆಲಸಕ್ಕೆಂದು ಬಂದವರು ಸಾವಿರಕ್ಕೂ ಹೆಚ್ಚಿನ ಮಂದಿ ಇದ್ದು ಇವರ ರೇಷನ್‌ ಕಾರ್ಡ್‌ಗಳು ಊರಿನಲ್ಲಿರುವುದರಿಂದ ಯಾವುದೇ ಆಹಾರ ಸಾಮಗ್ರಿಗಳನ್ನು ಪಡೆಯಲು ಇವರಿಗೆ ಸಾಧ್ಯವಾ ಗುತ್ತಿಲ್ಲ. ಇವರ ಮಾಲಕರೇ ಸದ್ಯಕ್ಕೆ ಇವರ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಸರಕಾರದಿಂದಲ್ಲೂ ಯಾವುದೇ ಪರಿಹಾರಗಳು ಸಿಕ್ಕಿಲ್ಲ ಎಂದು ಉಭಯ ಜಿಲ್ಲೆಗಳ ಸವಿತಾ ಸಮಾಜದ ಸದಸ್ಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕ್ಷೌರದಂಗಡಿಗಳಿಗೂ 4 ಗಂಟೆ ಸಮಯಾವಕಾಶ ನೀಡುವಂತೆ ಜಿಲ್ಲಾಧಿ ಕಾರಿಗಳಿಗೂ ಉಭಯ ಜಿಲ್ಲೆಗಳ ಸವಿತಾ ಸಮಾಜ ದಿಂದ ಮನವಿ ಸಲ್ಲಿಸಲಾಗಿದೆ.

Advertisement

ಜನರಿಗೂ ಸಮಸ್ಯೆ
ಶೇವಿಂಗ್‌, ಹೇರ್‌ ಕಟ್ಟಿಂಗ್‌ಗಾಗಿ ಕ್ಷೌರದಂಗಡಿಗಳನ್ನು ಆಶ್ರಯಿಸುತ್ತಿರುವ ಮಂದಿ ಯೂ ಸದ್ಯ ಲಾಕ್‌ಡೌನ್‌ ಅವಧಿ ಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಮಕ್ಕಳಿಗೆ ಮನೆಯಲ್ಲಿಯೇ ಹೆತ್ತವರು ಹೇರ್‌ಕಟ್ಟಿಂಗ್‌ ಮಾಡಿಸುತ್ತಿದ್ದು, ಶೇವಿಂಗ್‌ಗೆಂದು ಪ್ರತೀ ವಾರ ಸೆಲೂನ್‌ಗಳಿಗೆ ಭೇಟಿ ನೀಡುತ್ತಿದ್ದ ಮಂದಿ ಕೂಡ ಮನೆಯಲ್ಲಿಯೇ ಅನಿವಾರ್ಯವಾಗಿ ಶೇವ್‌ ಮಾಡಿಕೊಳ್ಳುವಂತಾಗಿದೆ.

ಕ್ಷೌರದಂಗಡಿಗಳಲ್ಲೂ ಮುನ್ನೆಚ್ಚರಿಕೆ ಕ್ರಮ
ಕೋವಿಡ್ 19 ಸೊಂಕು ಹರಡದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ಇದು ಅತೀ ಹೆಚ್ಚು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವವರು ಮಾಸ್ಕ್, ಕೈಗಳಿಗೆ ಗ್ಲೌಸ್‌, ಸ್ಯಾನಿಟೈಸರ್‌ಗಳನ್ನು ಉಪಯೋಗಿಸಬೇಕು. ಒಬ್ಬರ ಬಳಿಕ ಒಬ್ಬರನ್ನು ಕ್ಷೌರದಂಗಡಿಗಳ ಒಳಗೆ ಬರುವಂತೆ ಮತ್ತು ಖಾಯಂ ಅಲ್ಲದ ಗಿರಾಕಿಗಳನ್ನು ಪರಿಗಣಿಸದಿರುವಂತೆ ಮುಂದಿನ ಕೆಲ ಸಮಯ ಅಗತ್ಯ ನಿಯಮಗಳನ್ನು ಪಾಲಿಸುವಂತೆ ಸವಿತಾ ಸಮಾಜದಿಂದ ಈಗಾಗಲೇ ಸದಸ್ಯರಿಗೆ ಸೂಚಿಸಲಾಗಿದೆ.

ಪರಿಹಾರ ಸಿಕ್ಕಿಲ್ಲ
ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಇಲ್ಲಿನವರ ಮಾತ್ರವಲ್ಲದೆ ಹೊರ ಊರಿನಿಂದ ಬಂದ ಕಾರ್ಮಿಕರೂ ಕಷ್ಟದಲ್ಲಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಸರಕಾರದ ಎಲ್ಲ ನಿಯಮಗಳನ್ನು, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಬದ್ದರಾಗಿದ್ದು, ಕ್ಷೌರದಂಗಡಿಗಳನ್ನು ದಿನಕ್ಕೆ 4 ಗಂಟೆಯಾದರೂ ತೆರೆಯಲು ಅವಕಾಶ ನೀಡಿದರೆ ಉತ್ತಮ.
-ವಸಂತ್‌ ಎಂ., ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ

ದಿನಕ್ಕೆ ನಾಲ್ಕು ಗಂಟೆ ಅವಕಾಶ ನೀಡಿ
ಕ್ಷೌರದಂಗಡಿ ಮಾಲಕರು, ಸಿಬಂದಿಯ ಪರಿಸ್ಥಿತಿ ಅತಂತ್ರವಾಗಿದೆ. ಕೆಲಸವಿಲ್ಲದೆ ಅಂಗಡಿ ಬಾಡಿಗೆ, ಮನೆಬಾಡಿಗೆ, ಸಿಬಂದಿಗಳ ಖರ್ಚು ಹೀಗೆ ಹೊರೆಗಳು ಹೆಚ್ಚುತ್ತಿವೆ. ಜಿಲ್ಲಾ ಸವಿತಾ ಸಮಾಜಕ್ಕೆ ಸದಸ್ಯರು ಪ್ರತಿ ನಿತ್ಯ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಿಯಮಿತ ಕಾಲಾವಕಾಶದಲ್ಲಿ ಅವಕಾಶ ಕಲ್ಪಿಸಿದರೆ ಉತ್ತಮ.
-ಭಾಸ್ಕರ್‌ ಭಂಡಾರಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸವಿತಾ ಸಮಾಜ

-ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next