Advertisement
ಮಳೆಯ ದರ್ಶನವಾಗಿಲ್ಲ: ಸತತ ಆರೇಳು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಮಳೆಗಾಗಿ ರೈತಾಪಿ ಜನ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ರೈತರನ್ನು ಕಂಗಾಲಾಗಿಸಿದ್ದು, ಭರಣಿ ಮಳೆ ಮುಗಿದು ಕೃತಿಕ ಪ್ರವೇಶಿಸಿದರೂ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯ ದರ್ಶನವಾಗಿಲ್ಲ.
Related Articles
Advertisement
ಕಳೆದ ವರ್ಷ ಕೂಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಆಹಾರ ಪದಾರ್ಥಗಳು ಉತ್ಪಾದನೆಗೊಳ್ಳದೇ ಕಂಗಾಲಾಗಿದ್ದ ಕೃಷಿ ಇಲಾಖೆ, ಈ ಬಾರಿ ಉತ್ತಮ ಮುಂಗಾರು ನಿರೀಕ್ಷಿಸಿದ್ದರೂ ಇದುವರೆಗೂ ಜಿಲ್ಲೆಯಲ್ಲಿ ಸರಾಸರಿ ಮಳೆ ಜನವರಿಯಿಂದ ಮೇ 8ರವರೆಗೂ 54.0 ಮೀ ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜಿಲ್ಲೆಯಲ್ಲಿ 55.7 ಮೀ ಮೀ ಆಗಿತ್ತು.
ಮಳೆಗಾಗಿ ಜಾತ್ರೆ, ತಂಬಿಟ್ಟಿನ ಮೆರವಣಿಗೆ: ಜಿಲ್ಲಾದ್ಯಂತ ಈ ಬಾರಿ ವರುಣನ ಕೃಪೆ ತೋರುವಂತೆ ಎಲ್ಲಿ ನೋಡಿದರೂ ಈಗ ಜನತೆ ಗ್ರಾಮ ದೇವತೆಗಳ ಜಾತ್ರೆ, ತಂಬಿಟ್ಟಿನ ಮೆರವಣಿಗೆ, ದೀಪೋತ್ಸವ, ವಿಶೇಷ ಪೂಜಾ ಕೈಂಕರ್ಯಗಳನ್ನು ಆಚರಿಸುತ್ತಿದ್ದು, ದಿನ ಬೆಳಗಾದರೆ ಒಂದೊಂದು ಊರಿನಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ನಡೆಸುವ ಮೂಲಕ ಗ್ರಾಮಸ್ಥರು ಶ್ರದ್ದಾಭಕ್ತಿಯಿಂದ ಮಳೆಗಾಗಿ ಪ್ರಾರ್ಥಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಕುಡಿಯುವ ನೀರಿಗೆ ಹಾಹಾಕಾರ ತೀವ್ರ..: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆ 300 ರ ಗಡಿ ದಾಟಿವೆ. ದಿನ ಬೆಳೆಗಾದರೆ ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ, ಯಾವ ಕೊಳವೆ ಬಾವಿ ಕೈ ಕೊಡುತ್ತದೆಯೆಂಬ ಚಿಂತೆಯಲ್ಲಿ ಜಿಲ್ಲಾಡಳಿತ ಇದೆ. ಮಳೆಗಾಲದಲ್ಲಾದರೂ ಕುಡಿವ ನೀರಿನ ಸಮಸ್ಯೆ ನೀಗಬಹುದೆಂಬ ಲೆಕ್ಕಾಚಾರ ಮಳೆ ಕೊರತೆಯಿಂದ ಉಲ್ಟಾ ಹೊಡೆದಿದ್ದು, ಕುಡಿವ ನೀರಿನ ಸಮಸ್ಯೆ ಬಗೆಹರಿಸುವುದೇ ಜಿಲ್ಲಾಡಳಿತಕ್ಕೆ ನಿತ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಭರಣಿ ಮಳೆ ಬಿದ್ದರೆ ಉಳಿದ ಎಲ್ಲಾ ಮಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ನಮ್ಮದು. ಆದರೆ ಭರಣಿ ಮಳೆ ಈ ಬಾರಿಯು ರೈತರ ಕೈ ಕೊಟ್ಟಿದೆ. ಈ ವರ್ಷವು ಬರಗಾಲ ಎದುರಾಗುತ್ತಾ ಎಂಬ ಆಂತಕ ಕಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಜನ, ಜಾನುವಾರುಗಳಿಗೆ ಕುಡಿವ ನೀರಿನ ಕೊರತೆ ಉಂಟಾಗಿದೆ. ಬಿತ್ತನೆ ಕಾರ್ಯಕ್ಕೆ ಕೇವಲ 15 ದಿನ ಮಾತ್ರ ಅವಕಾಶ ಇದೆ. ಮಳೆಗಾಗಿ ಎದುರು ನೋಡುವಂತಾಗಿದೆ.-ಬಿ.ಎನ್.ಮುನಿಕೃಷ್ಣಪ್ಪ, ಪ್ರಗತಿಪರ ರೈತ, ನಾಯನಹಳ್ಳಿ