ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕೆ ಸಂಬಂಧಿಸಿದಂತೆ ನಿಗದಿತ ಪ್ರದೇಶದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಸರ್ಕಾರಕ್ಕೆ ಷರತ್ತುಬದ್ಧ ಅನುಮತಿ ನೀಡಿ ಜು.15ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಶುಕ್ರವಾರ ಹಿಂದಕ್ಕೆ ಪಡೆದಿದೆ.
ಇದೇ ವೇಳೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಹಿರಾತು ಫಲಕಗಳನ್ನು ಅಳವಡಿಸಲು ಷರತ್ತುಗಳನ್ನು ವಿಧಿಸಿ ನೀಡಲಾಗಿದ್ದ ಆದೇಶವನ್ನು ದುರ್ಬಳಕೆ ಮಾಡಿಕೊಂಡು ಖಾಸಗಿಯವರಿಗೆ ಹಣ ಗಳಿಸಲು ಅವಕಾಶ ಮಾಡಿಕೊಟ್ಟ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಿದ್ದ ಸಂದರ್ಭದಲ್ಲಿ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಸರ್ಕಾರ ಉಲ್ಲಂಸಿದೆ ಎಂದು ಆಕ್ಷೇಪಿಸಿ ವಕೀಲರ ಜಿ.ಆರ್. ಮೋಹನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶ ನೀಡಿದೆ.
ಅಲ್ಲದೆ, ಖಾಸಗಿ ಸಂಸ್ಥೆಯ ಸೇವೆಗಳ ಬಗ್ಗೆ ಪ್ರಚಾರ ನೀಡಿ ಅಳವಡಿಸಿರುವ ಕೊರೊನಾ ಜಾಹೀರಾತು ಫಲಕಗಳನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು. ಖಾಸಗಿ ಜಾಹೀರಾತು ಸಂಸ್ಥೆಗೆ ಜಾಹೀರಾತು ಅಳವಡಿಸಲು ಅನುಮತಿ ನೀಡಿದ ಅಧಿಕಾರಿ ವಿರುದ್ಧ ಹಿರಿಯ ಅಧಿಕಾರಿಯಿಂದ ವಿಚಾರಣೆ ನಡೆಸಿ ಅ.13ಕ್ಕೆ ವರದಿ ಸಲ್ಲಿಸಬೇಕು. ರಾಜ್ಯಾದ್ಯಂತ ಅನಧಿಕೃತ ಜಾಹಿರಾತು ಫಲಕ ತೆರವಿಗೆ ನ್ಯಾಯಾಲಯ ಈ ಹಿಂದೆ ಕಾಲ-ಕಾಲಕ್ಕೆ ನೀಡಿರುವ ಮಧ್ಯಂತರ ಆದೇಶಗಳ ಅನುಪಾಲನಾ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಓಂ ಪ್ರಕಾಶ್ ಪಾಟೀಲ್ ಅವರುಸಲ್ಲಿಸಿದಪ್ರಮಾಣಪತ್ರವನ್ನುನ್ಯಾಯಪೀಠಕ್ಕೆ ಸಲ್ಲಿಸಿದರು. ಕೋವಿಡ್ ಜಾಗೃತಿಗಾಗಿ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಖಾಸಗಿ ಜಾಹಿರಾತು ಸಂಸ್ಥೆ ಕೂಡ ಸರ್ಕಾರಕ್ಕೆ ಸಹಾಯ ಮಾಡುವುದಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾಗಿ ಷರತ್ತಿನ ಮೂಲಕ ಅವಕಾಶ ಕಲ್ಪಿಸಲಾಗಿತ್ತು ಎಂದರು. ಅದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಯಾವುದೇ ಖಾಸಗಿ ಸಂಸ್ಥೆ ಅಥವಾ ಸೇವೆಗಳ ಕುರಿತು ಜಾಹೀರಾತು ಫಲಕ ಅಳವಡಿಸದಂತೆ ನ್ಯಾಯಾಲಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಆದರೂ ಸರ್ಕಾರ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂದಿತು.
ಷರತ್ತುಗಳ ಉಲ್ಲಂಘನೆಗೆ ಆಕ್ಷೇಪ: ಕೋವಿಡ್ ಜಾಗೃತಿಗಾಗಿ ನಿಗದಿತ ಪ್ರದೇಶಗಳಲ್ಲಿ ಹೋರ್ಡಿಂಗ್ಸ್ ಅಳವಡಿಸಲು ಅನುಮತಿ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಅದನ್ನು ಕಳೆದ ಜು.15ರಂದು ಮಾನ್ಯ ಮಾಡಿದ್ದ ಹೈಕೋರ್ಟ್, ಜಾಹೀರಾತು ಫಲಕಗಳಲ್ಲಿ ಪ್ಲಾಸ್ಟಿಕ್ ಬಳಸಬಾರದು. ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆಯಷ್ಟೇ ಜಾಹೀರಾತು ನೀಡಬೇಕು. ಯಾವುದೇ ಪ್ರಾಯೋಜಕರ, ಖಾಸಗಿ ಉತ್ಪನ್ನ ಸೇವೆಗಳ ಕುರಿತ ವಿವರ ಪ್ರದರ್ಶಿಸಬಾರದು ಎಂದು ಷರತ್ತು ವಿಧಿಸಿತ್ತು. ಆದರೆ, ಸರ್ಕಾರ ಅಳವಡಿಸಿರುವ ಕೋವಿಡ್ ಜಾಗೃತಿ ಜಾಹೀರಾತುಗಳಲ್ಲಿ ಖಾಸಗಿ ಸಂಸ್ಥೆಗಳ ಉತ್ಪನ್ನಗಳ ಕುರಿತ ಜಾಹೀರಾತನ್ನು ಪ್ರದರ್ಶಿಸಲಾಗಿದೆ. ಇದು ಹೈಕೋರ್ಟ್ ಷರತ್ತುಗಳ ಉಲ್ಲಂಘನೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.