Advertisement

ಪ್ರಾರ್ಥನಾ ಕೇಂದ್ರಕ್ಕೆ ಅಕ್ರಮ ದಾಳಿ: ವಿ.ಹಿಂ.ಪ. ಬಜರಂಗದಳದ ಎಲ್ಲ ಕಾರ್ಯಕರ್ತರು ದೋಷ ಮುಕ್ತ

10:40 PM Dec 07, 2022 | Team Udayavani |

ಉಡುಪಿ: ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದಲ್ಲಿ 9 ವರ್ಷದ ಹಿಂದೆ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿ.ಹಿಂ.ಪ.ಬಜರಂಗದಳದ ಎಲ್ಲ ಕಾರ್ಯಕರ್ತರನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ.

Advertisement

2013ರ ರಾತ್ರಿ ವೇಳೆ ಕ್ರಿಶ್ಚಿಯನ್‌ ಪಂಗಡವೊಂದರ ಪ್ರಾರ್ಥನ ಕೇಂದ್ರಕ್ಕೆ ಶಿರ್ವ, ಸೂಡ, ಕಟ್ಟಿಂಗೇರಿ ಪರಿಸರದ ಗ್ರಾಮಗಳ ವಿ.ಹಿಂ.ಪ. ಮತ್ತು ಬಜರಂಗದಳದ ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡಿ ಪ್ರಾರ್ಥನ ಕೇಂದ್ರಕ್ಕೆ ದಾಳಿ ಮಾಡಿ ಅಲ್ಲಿನ ಸೊತ್ತುಗಳನ್ನು ನಾಶಗೊಳಿಸಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದರು ಎಂದು ಪ್ರಾರ್ಥನ ಕೇಂದ್ರದ ಪ್ರಮುಖರಾದ ರೋಶನ್‌ ರಾಜೇಶ್‌ ಲೋಬೋ ಅವರು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸುಮಾರು 19 ಜನರ ಮೇಲೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.

ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ 18 ಸಾಕ್ಷಿಗಳ ತನಿಖೆ ಮಾಡಲಾಗಿತ್ತು. ಮಾರಕಾಸ್ತ್ರಗಳು, ಮೊಬೈಲ್‌, ಟೀ ಶರ್ಟ್‌ ಮತ್ತು ಇತರ 14 ವಸ್ತುಗಳನ್ನು ಗುರುತಿಸಲಾಗಿದ್ದು, ಸಾಕ್ಷಿ ವಿಚಾರಣೆ ಬಳಿಕ ಅಭಿಯೋಜನೆ ಮತ್ತು ರಕ್ಷಣಾ ವಕೀಲರ ವಾದವನ್ನು ಆಲಿಸಿದ ಮೂರನೇ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ವಿನಾಯಕ ವಾಂಖಡೆಯವರು ಆರೋಪಿಗಳ ಮೇಲೆ ಆರೋಪಗಳನ್ನು ಗುರುತಿಸುವಲ್ಲಿ ಸಾಕ್ಷಿಗಳು ವಿಫ‌ಲರಾಗಿದ್ದಾರೆ ಹಾಗೂ ಈ ಪ್ರಕರಣ ಸಂಶಯಾತೀತವಾಗಿ ದೃಢೀಕರಿಸಲು ಅಭಿಯೋಜಕರು ವಿಫ‌ಲರಾಗಿದ್ದಾರೆ ಎಂದು ಡಿ.6ರಂದು ಎಲ್ಲ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಇ. ಬಾಲಸುಬ್ರಹ್ಮಣ್ಯರಾವ್‌, ಬೈಲೂರು ರವೀಂದ್ರ ದೇವಾಡಿಗ, ನಿತೇಶ್‌ ಶೆಟ್ಟಿ ಮತ್ತು ನಿವೇದಿತಾ ಸುವರ್ಣ ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next