ಮಂಗಳೂರು/ಉಡುಪಿ: ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ.1ರಿಂದ ಕೋರ್ಟ್ ಕಲಾಪ ಆರಂಭಿಸಬಹುದೆಂದು ಹೈಕೋರ್ಟ್ ತಿಳಿಸಿದ್ದರಿಂದ ಮಂಗಳೂರು ಮತ್ತು ಉಡುಪಿ ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ. 1ರಿಂದ ಪುನರಾರಂಭ ಮಾಡುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ.
ಮಂಗಳೂರು ನ್ಯಾಯಾಲಯ ಕಟ್ಟಡ ಸಂಕೀರ್ಣದಲ್ಲಿ 27 ನ್ಯಾಯಾಲಯಗಳಿದ್ದು, ಕೋವಿಡ್ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಒಂದು ಬಾರಿ ಸ್ಯಾನಿಟೈಸೇಶನ್ ಮಾಡಿಸಲಾಗಿದೆ. ಜೂನ್ 1ರ ಮೊದಲು ಅಥವಾ ಆನಂತರ ಪುನಃ ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ.
ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ಹತ್ತು ನ್ಯಾಯಾಲಯಗಳಿದ್ದು ಈಗಾಗಲೇ ಒಂದು ಬಾರಿ ಸ್ಯಾನಿಟೈಸೇಶನ್ ಮಾಡಲಾಗಿದೆ. ಮುಂದೆ ವಾರಕ್ಕೊಮ್ಮೆ ನ್ಯಾಯಾಲಯ ಆವರಣದೊಳಗೆ ಸ್ಯಾನಿಟೈಸೇಶನ್ ಮಾಡಲಾಗುತ್ತದೆ.
ಜೂನ್ 1ರಿಂದ ಕಲಾಪ ಆರಂಭವಾಗಲಿದ್ದರೂ, ಮೊದಲ 2 ವಾರಗಳಲ್ಲಿ ವಿಚಾರಣೆಯ ವಿಷಯಗಳನ್ನು ಪಟ್ಟಿ ಮಾಡುವ ಕಲಾಪ ಮಾತ್ರ ನಡೆಯಲಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಒಳಗೆ ಕಕ್ಷಿದಾರರ ಪ್ರತಿನಿಧಿಗಳಾಗಿ ವಕೀಲರು ಮಾತ್ರ ಹಾಜರಾಗಲು ಅವಕಾಶ. ಸಾರ್ವಜನಿಕರಿಗೆ ಪ್ರವೇಶಾವಕಾಶವಿಲ್ಲ.
2 ವಾರಗಳ ಬಳಿಕ ವಿಚಾರಣೆ ವಿಷಯಗಳ ಜತೆಗೆ ಸಾಕ್ಷ್ಯ ದಾಖಲೀಕರಣದ ಪ್ರಕರಣಗಳನ್ನು ಆದ್ಯತೆ ಮೇಲೆ ಸಂಬಂಧಪಟ್ಟ ವಕೀಲರ ಜತೆ ಮಾತನಾಡಿ ಪಟ್ಟಿ ಮಾಡಲು ಅವಕಾಶವಿದೆ. ಅಧಿಕೃತ ಸಾಕ್ಷಿಗಳನ್ನು ಹೊರತುಪಡಿಸಿ ಉಳಿದಂತೆ ಇತರ ಎಲ್ಲ ಸಾಕ್ಷಿಗಳ ಹೇಳಿಕೆಗಳನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತದೆ. ಉಭಯ ಕಕ್ಷಿದಾರರ ವಕೀಲರು ಉಪಸ್ಥಿತರಿದ್ದು, ಸವಾಲು ಮತ್ತು ಪಾಟಿ ಸವಾಲು ಪ್ರಕ್ರಿಯೆಗಳಲ್ಲಿ ಭಾಗವಹಿಸಬಹುದು.ಆದರೆ, ಕೋರ್ಟ್ ಹಾಲ್‌ನಲ್ಲಿ ಯಾವುದೇ ಸಂದರ್ಭದಲ್ಲಿಯೂ ವ್ಯಕ್ತಿಗಳ ಉಪಸ್ಥಿತಿ 20 ಕ್ಕಿಂತ ಮೀರಬಾರದು ಎಂಬುದಾಗಿ ಹೈಕೋರ್ಟ್ ತಿಳಿಸಿದೆ.
ದಾವೆ ಸಲ್ಲಿಸುವವರು ಪೂರ್ವಾನುಮತಿ ಪಡೆದು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುವುದು ಅಗತ್ಯ. ಸಾರ್ವಜನಿಕರಿಗೆ/ ಕಕ್ಷಿದಾರರಿಗೆ ಪ್ರವೇಶ ನಿಷೇಧಿಸಲಾಗಿದೆ. ಸಾಕ್ಷಿದಾರರು ಸಂಬಂಧ ಪಟ್ಟ ಸಮನ್ಸ್ ಹೊಂದಿದ್ದರೆ ಮಾತ್ರ ಪ್ರವೇಶ ನೀಡಲಾಗುತ್ತದೆ.