ಕಾರ್ಕಳ: ಪ್ರವಾಸಿ ತಾಣ ಕಾರ್ಕಳ ತಾಲೂಕಿನ ಬೈಲೂರು ಉಮಿಕ್ಕಳ ಬೆಟ್ಟದ ಮೇಲೆ ಪರಶುರಾಮ ಪ್ರತಿಮೆ ಒಳಗೊಂಡ ಥೀಂ ಪಾರ್ಕ್‌ನಲ್ಲಿ ಕಾಮಗಾರಿ ಮುಂದುವರಿಸಲು ಅವಕಾಶ ಕೋರಿ ಶಿಲ್ಪಿ ಕೃಷ್ಣ ನಾಯ್ಕ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಹೈಕೋರ್ಟ್ ಕಾಮಗಾರಿ ಮುಂದುವರಿಸಲು ಅವಕಾಶ ನೀಡಿದೆ. ಅದರಂತೆ ಶುಕ್ರವಾರ ಕಾಮಗಾರಿ ನಡೆಸುತ್ತಿದ್ದ ವೇಳೆ ದಿಢೀರ್ ಜಿಲ್ಲಾಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದು ಮಧ್ಯಾಹ್ನದ ವೇಳೆಗೆ ಸ್ಥಗಿತಗೊಂಡಿದೆ.
ಒಪ್ಪಂದದ ಪ್ರಕಾರ ಥೀಂ ಪಾರ್ಕ್‌ನಲ್ಲಿ ನಿಗದಿತ ಸಮಯದೊಳಗೆ ಶಿಲ್ಪಿಯು ಮೂರ್ತಿಯನ್ನು ಪೂರ್ಣಗೊಳಿಸಿ ಕೊಡಬೇಕಾಗಿತ್ತು. ಆದರೆ ಕಾಮಗಾರಿ ಮುಂದುವರಿಸಲು ಪ್ರತಿಮೆಯ ಅರ್ಧ ಭಾಗವನ್ನು ನಿರ್ಮಿತಿ ಕೇಂದ್ರದವರು ತೆಗೆದುಕೊಟ್ಟಿರಲಿಲ್ಲ. ಆ ಭಾಗವನ್ನು ತೆಗೆಯಲು ಅವಕಾಶ ಕೋರಿ ಕೃಷ್ಣ ನಾಯ್ಕ ಹೈಕೋರ್ಟ್ ಮೊರೆ ಹೋಗಿದ್ದರು. 14 ದಿನಗಳೊಳಗೆ ಮೂರ್ತಿಯ ಬಾಕಿ ಭಾಗವನ್ನು ತೆರವುಗೊಳಿಸಬೇಕು ಮತ್ತು 4 ತಿಂಗಳೊಳಗೆ ಪೂರ್ತಿಗೊಳಿಸಿ ಮರುಸ್ಥಾಪಿಸಬೇಕು ಎಂದು ಎ. 23ರಂದು ಕೋರ್ಟ್ ಆದೇಶಿಸಿತ್ತು. ತೆರವು ಪೂರ್ಣಗೊಳಿಸಲು ಕೇವಲ 5 ದಿನ ಬಾಕಿ ಇರುವಾಗಲೇ ದಿಢೀರಾಗಿ ಕೆಲಸ ಸ್ಥಗಿತಗೊಂಡಿದೆ.
ಸರಕಾರದ ಒತ್ತಡದಿಂದ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಉಮಿಕ್ಕಳ ಬೆಟ್ಟವನ್ನು ಪ್ರವಾಸಿ ತಾಣವಾಗಿಸುವ ಉದ್ದೇಶದಿಂದ 15 ಕೋ.ರೂ. ವೆಚ್ಚದಲ್ಲಿ ಪರಶುರಾಮ ಕಂಚಿನ ಪ್ರತಿಮೆ ಸ್ಥಾಪನೆ ಸಹಿತ ಪರಶುರಾಮ ಥೀಂ ಪಾರ್ಕ್ ಯೋಜನೆ ರೂಪಿಸಲಾಗಿತ್ತು.
2023ರ ಜ. 1ರಂದು ಪಾರ್ಕ್ ಲೋಕಾರ್ಪಣೆಗೊಂಡಿತ್ತು. ಪ್ರತಿಮೆ ಕಂಚಿನದ್ದಲ್ಲ; ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕಾಂಗ್ರೆಸ್‌ನಿಂದ ವ್ಯಕ್ತವಾಗಿ ಭಾರೀ ಪ್ರತಿಭಟನೆ ನಡೆದಿತ್ತು.
ಕಾಮಗಾರಿ ಪೂರ್ಣವಾಗಿಲ್ಲ: ಪ್ರತಿಮೆಯಲ್ಲಿ ಕೆಲವೊಂದು ಮಾರ್ಪಾಡು ಬಾಕಿಯಿದೆ. ಪೂರ್ಣಗೊಂಡು ಹಸ್ತಾಂತರಕ್ಕೆ ಬಾಕಿಯಿದೆ. ಸರಕಾರದಿಂದ 5 ಕೋ.ರೂ. ಬಿಡುಗಡೆಗೆ ಬಾಕಿಯಿದೆ ಎಂದು ಪಾರ್ಕ್ ನಿರ್ಮಾಣದ ಗುತ್ತಿಗೆ ವಹಿಸಿಕೊಂಡ ನಿರ್ಮಿತಿ ಕೇಂದ್ರದವರು ಹೇಳಿದ್ದರು. ಈ ನಡುವೆ ಪ್ರತಿಮೆಯ ಅರ್ಧ ಭಾಗವನ್ನು ತೆರವುಗೊಳಿಸಲಾಗಿತ್ತು. ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ವಾದ-ವಿವಾದಗಳು ಹುಟ್ಟಕೊಂಡಿದ್ದವು. ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಟ್ಟಕ್ಕೆ ಭೇಟಿ ನೀಡಿ ಪಾರದರ್ಶಕ ತನಿಖೆಯ ಭರವಸೆ ನೀಡಿದ್ದರು. ಬಳಿಕ ನಾಗಮೋಹನ್ ಸಮಿತಿಗೆ ತನಿಖೆಗೆ ಆದೇಶಿಸಲಾಗಿದ್ದು ಅವರು ಸ್ಥಳ ತನಿಖೆ ನಡೆಸಿ ಹೋಗಿದ್ದರು. ಇದರಿಂದ ಸಮಾಧಾನಿತರಾದ ಸ್ಥಳೀಯ ಕಾಂಗ್ರೆಸ್ ಮುಖಂಡರ ಆಗ್ರಹದಂತೆ ಉಸ್ತುವಾರಿ ಸಚಿವೆಯ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ್ದರು.