ಬೆಂಗಳೂರು: ಜಾತಿ ನಿಂದನೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಎನ್.ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ(ಸೆ19) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ಜಾಮೀನು ಅರ್ಜಿಯ ಮೇಲಿನ ವಾದಗಳನ್ನು ಆಲಿಸಿ, ಎರಡು ಲಕ್ಷ ರೂ. ಬಾಂಡ್ ಮತ್ತು ಎರಡು ಶ್ಯೂರಿಟಿಗಳ ಷರತ್ತಿನ ಮೇಲೆ ಜಾಮೀನು ನೀಡಿದೆ. ಸಾಕ್ಷ್ಯ ನಾಶ ಅಥವಾ ತನಿಖೆಗೆ ಅಡ್ಡಿಪಡಿಸಬಾರದೆಂದು, ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುವಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಿತು.
ಮುನಿರತ್ನ ಅವರ ವಕೀಲರ ತಂಡವು ಆರೋಪಗಳು ರಾಜಕೀಯ ಪ್ರೇರಿತವಾಗಿದೆ ಮತ್ತು ಅವರ ವಿರುದ್ಧದ ಆರೋಪಗಳನ್ನು ಬೆಂಬಲಿಸಲು ಯಾವುದೇ ಗಣನೀಯ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು. ಆಪಾದಿತ ಅಪರಾಧದ ಸೂಕ್ಷ್ಮ ಸ್ವರೂಪದ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಾಸಿಕ್ಯೂಷನ್ ಒತ್ತಾಯಿಸಿತು. ಮಾಜಿ ಸಚಿವ ಮುನಿರತ್ನ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಸೆ.14ರಂದು ಬಂಧಿಸಲಾಗಿತ್ತು.
ಮತ್ತೊಂದು ಸಂಕಷ್ಟ
ಮುನಿರತ್ನ ತನ್ನ ಮೇಲೆ ಅತ್ಯಾಚಾರವೆಸಗಿ, ಹನಿ ಟ್ರ್ಯಾಪ್ ಮಾಡಲು ಬಳಸಿಕೊಂಡಿದ್ದಾರೆ ಎಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬುಧವಾರ ತಡರಾತ್ರಿ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಹಾಂತರ ರೆಸಾರ್ಟ್ ನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹನಿಟ್ರ್ಯಾಪ್ ನಡೆಸಿರುವುದು ಸೇರಿದಂತೆ ವಿವಿಧ ಕೃತ್ಯಗಳನ್ನು ಎಸಗಿರುವುದಾಗಿ ಶಾಸಕ ಮುನಿರತ್ನ ಸೇರಿದಂತೆ ಏಳು ಮಂದಿಯ ವಿರುದ್ಧ ಮಹಿಳೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.